18th April 2024
Share

TUMAKURU:SHAKTHIPEETA FOUNDATION

  ಆದಿ ಚುಂಚನಗಿರಿ ಮಠಾಧ್ಯಕ್ಷರಾದ ಶ್ರೀ ಭಾಲಗಂಗಧರನಾಥ ಸ್ವಾಮಿಜಿಗಳು ಐದು ಕೋಟಿ ಗಿಡ ನೆಡುವ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅದೇ ಸಂದರ್ಭದಲ್ಲಿ ತುಮಕೂರಿನ ಮಾರುತಿ ನಗರದಲ್ಲಿ ದಿವಂಗತ ಪ್ರಹ್ಲಾದ್‌ರಾವ್‌ರವರು ನನ್ನನ್ನು ಭೇಟಿಯಾಗಿ ನಗರದ ಪಾರ್ಕ್‌ಗಳ ಅಭಿವೃದ್ಧಿಗೆ ಸಲಹೆ ನೀಡಿದರು. 

 ಆಗ ತುಮಕೂರು ಸಂಸದರಾಗಿದ್ದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ನಾನು ಸಮಾಲೋಚನೆ ಮಾಡಿ ತುಮಕೂರು ನಗರ ಮತ್ತು ಜಿಲ್ಲೆಯಲ್ಲಿ ಸ್ತ್ರೀ ಶಕ್ತಿ ಸಂಘಗಳ ಮೂಲಕ ಗಿಡ ಬೆಳೆಸುವ ಯೋಜನೆ ಜಾರಿಗೊಳಿಸಲು ಚಿಂತನೆ ಮಾಡಿದೆವು.

  2002  ರಿಂದ 2004 ರಲ್ಲಿ ಯೋಜನೆಗೆ ಚಾಲನೆ ನೀಡಿದೆವು. ಒಂದು ಸ್ತ್ರೀ ಶಕ್ತಿ ಸಂಘಕ್ಕೆ 100 ಗಿಡಗಳು ಮತ್ತು ರೂ 2500 ರೂಗಳನ್ನು ಸಂಸದರ ಅನುದಾನದಲ್ಲಿ ನೀಡಿ ಗಿಡ ಹಾಕಿಸಲು ಆಂದೋಲನ ರೂಪಿಸಿದೆವು. ತುಮಕೂರು ನಗರದಲ್ಲೂ ಗಿಡ ಹಾಕುವ ಕಾರ್ಯಕ್ರಮ ಆರಂಭವಾಯಿತು.

  ಸಿದ್ಧಗಂಗಾ ಶ್ರೀಗಳಿಗೆ 100 ವರ್ಷವಾದಾಗ ನಗರದ ಆನೇಕ ಜನತೆ, ಸಂಘ ಸಂಸ್ಥೆಗಳು  ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಜಿ.ಎಸ್.ಬಸವರಾಜ್‌ರವರು ಮಾಜಿಯಾಗಿದ್ದರು. ಪುನಃ ನಾನು ಅವರು ಮಾತನಾಡಿ ಹಸಿರು-ತುಮಕೂರು ಯೋಜನೆ ಆರಂಭಿಸಿ ಶ್ರೀಗಳ 100 ವರ್ಷದ 36500 ದಿವಸಗಳ ಸವಿ ನೆನಪಿಗೆ 36500 ಗಿಡಗಳನ್ನು ಹಾಕುವ ಯೋಜನೆ ಜಾರಿಗೆ 2007  ರಲ್ಲಿ ಚಿಂತಿಸಿದೆವು.

 ಮೊದಲು ಈ ವಿಚಾರವನ್ನು ಸಾಹಿತಿ ಶ್ರೀ ಕವಿತಾಕೃಷ್ಣರವರ ಬಳಿ ಚರ್ಚಿಸಿದೆ. ಅವರು ನಕ್ಕು ದಿನಕ್ಕೊಂದರಂತೆ ಗಿಡ ಹಾಕಲು ನೀವೂ ಇನ್ನೂ 100 ವರ್ಷ ಬದುಕಬೇಕು ಎಂದರು. ಅಲ್ಲಾ ಸ್ವಾಮಿ ನೀವು ತಪ್ಪು ತಿಳಿದು ಕೊಂಡಿದ್ದೀರಾ, ದಿನಕ್ಕೊಂದು ಗಿಡ ಹಾಕುವುದಲ್ಲಾ 36500 ಗಿಡ ಹಾಕುವುದು ಎಂದಾಗ ಅವರು ಸಹ ಉತ್ತಮವಾದ ಯೋಜನೆ ಆರಂಭಿಸಿ ಎಂದು ಸಲಹೆ ನೀಡಿದರು.

  ಪುನಃ 2011 ರಲ್ಲಿ ಶ್ರೀ ಜಿ.ಎಸ್.ಬಸವರಾಜ್‌ರವರು ಸಂಸದರಾದಾಗ ಯೋಜನೆ ಮುಂದುವರೆಸಿದೆವು. ಮೂರು ಭಾರಿಯ ಈ ಯೋಜನೆಯಿಂದ ತುಮಕೂರು ನಗರದಲ್ಲಿ ಸುಮಾರು 30  ರಿಂದ 40  ಸಾವಿರ ಗಿಡ ಹಾಕಲು ಯೋಜನೆ ರೂಪಿಸಲಾಯಿತು.

  ತುಮಕೂರು ನಗರದಲ್ಲಿ ಸಿದ್ಧಗಂಗಾ ಶ್ರೀಗಳಾದ ಶ್ರೀ. ಶಿವಕುಮಾರiಹಾ ಸ್ವಾಮಿಗಳ ಹೆಸರಿನಲ್ಲಿ ಹಸಿರು- ತುಮಕೂರು ಯೋಜನೆಯಡಿ ಹಾಕಿದ ಸುಮಾರು 25000 ಕ್ಕೂ ಹೆಚ್ಚು ಗಿಡಗಳು ಬದುಕಿ ರಾರಾಜಿಸುತ್ತವೆ, ನಾವು ಮೂರು ಕಂತಿನಲ್ಲಿ ಗಿಡ ಹಾಕಿದ ರಸ್ತೆಗಳಿಗೆ ಹೋದರೆ ಮೊದಲು, ಗಿಡಗಳಿಗೆ ಮನಸ್ಸಿನಲ್ಲಿ ಕೈಮುಗಿದು ಖುಷಿ ಅನುಭವಿಸುತ್ತೇನೆ. ರಸ್ತೆಯಲ್ಲಿನ ಜನ ನೋಡಿ ನಿಮ್ಮ ಗಿಡಗಳು ಹೇಗೆ ಬೆಳಿದಿವೆ ಎಂದಾಗ ಆಗುವ ಸಮಾಧಾನ ನಿಜಕ್ಕೂ ಅದ್ಭುತ.

   ಹೊಂಗೆ ಗಿಡಗಳ ಕೆಳಗೆ ಕುಳಿತಿರುವ ಜನ, ನಿಲ್ಲಿಸಿರುವ ವಾಹನಗಳನ್ನು ನೋಡಿದರೆ ಎಷ್ಟೊಂದು ಅಂದ ಎನಿಸುತ್ತಿದೆ, ಒಂದೊಂದು ಅವಧಿಯ ಯೋಜನೆಗಳ ಬಗ್ಗೆ ಪ್ರತ್ಯೇಕ ವರದಿ ಮಾಡಲೇ ಬೇಕು, ಮಾಡುತ್ತೇನೆ, ಹಲವಾರು ಜನತೆಯ ಸಹಕಾರವನ್ನು ಹಂಚಿಕೊಳ್ಳಲೇ ಬೇಕು. ಈ ಅನುಭವವನ್ನು ನಾನು ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ. ಬಸವರಾಜ್‌ರವರ ಗಿಡ ಹಾಕುವ ಪ್ರೇಮ ಇನ್ನೂ ಹೋಗಿಲ್ಲ, ಸ್ಮಾರ್ಟ್ ಸಿಟಿ ಕಾಮಗಾರಿಗಳು ಮುಗಿದ ತಕ್ಷಣ ಅಗತ್ಯವಿರುವ ಕಡೆ ಮತ್ತೆ ಗಿಡ ಹಾಕೋಣ ಎಂಬ ಆಲೋಚನೆ ಮಾಡಿದ್ದಾರೆ.

ಏಫ್ರಿಲ್-1  ಬಂದರೆ ಸ್ವಾಮಿಜಿಗಳ ಹಸಿರು ಪ್ರೇಮ ನನೆಪಿಗೆ ಬರುತ್ತದೆ.