1st October 2023
Share

TUMAKURU:SHAKTHIPEETA FOUNDATION     

ತುಮಕೂರು ಜಿಐಎಸ್ ಪೋರ್ಟಲ್‌ನಲ್ಲಿ ಯಾವುದೇ ಇಲಾಖೆ, ಯಾವುದೇ ಅನುದಾನದಲ್ಲಿ ತುಮಕೂರು ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಜಿಐಎಸ್ ಆಧಾರಿತ ನಕ್ಷೆಯಲ್ಲಿ ಅಫ್‌ಲೋಡ್ ಮಾಡಲು ಪ್ರತಿಯೊಂದು ಇಲಾಖೆಗೂ ಮಾಹಿತಿಗಳ ವಿವರಗಳ ಪಟ್ಟಿಯ ಸಹಿತ ಪತ್ರವನ್ನು ಬರೆಯುವ ಮೂಲಕ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಶ್ರೀ ಮೊಯಿದ್ದೀನ್ ತಿಳಿಸಿದರು.

  ಸತ್ಯ ಹೇಳಬೇಕೆಂದರೆ ಆರಂಭದಲ್ಲಿ ಯಾಕಪ್ಪಾ ಇವರು ಜಿಐಎಸ್ ಲೇಯರ್ ಅಂತ ಹಿಂದೆ ಬಿದ್ದಿದ್ದಾರೆ ಎಂಬ ಅನಿಸಿಕೆ ಎಲ್ಲಾ ಇಲಾಖೆಯ ಅಧಿಕಾರಿಗಳಲ್ಲಿ ಬಂದಿತ್ತು. ಪ್ರಸ್ತುತ ಇದೊಂದು ಮಹತ್ವದ ಕೆಲಸ ಎಂಬ ಅರಿವು ಬರಲಾರಂಭಿಸಿದೆ ಎಂದು ಹಾಜರಿದ್ದ ಅಧಿಕಾರಿಯೊಬ್ಬರೂ ಹರ್ಷ ವ್ಯಕ್ತಪಡಿಸಿದರು.

 ಜಿಲ್ಲಾ ಪಂಚಾಯತ್ ಕಚೇರಿಗೆ ಭೇಟಿ ನೀಡಿ ದಿಶಾ ಸಭೆಯ ನಡವಳಿಕೆಗಳ ಅನುಪಾಲನೆ ಹೇಗೆ ಆರಂಭವಾಗಿದೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು. ಬಹುಷಃ ಎಲ್ಲಾ ಇಲಾಖೆಗಳು ಇದೆ ರೀತಿ ಅಫ್ ಲೋಡ್ ಮಾಡಿದಲ್ಲಿ ಮುಂದಿನ ದಿಶಾ ಸಮಿತಿ ಸಭೆಯಲ್ಲಿ ಪ್ರತಿಯೊಂದು ಇಲಾಖೆಯಲ್ಲಿ 2019-2020 ನೇ ಸಾಲಿನಲ್ಲಿ ಖರ್ಚಾಗಿರುವ ಮತ್ತು 2020-2021 ನೇ ಸಾಲಿನಲ್ಲಿ ಖರ್ಚು ಮಾಡಬೇಕಾಗಿರುವ ಮಾಹಿತಿ ಒಂದೇ ಕಡೆ ಲಭ್ಯವಾಗಲಿದೆ. ಬೆರಳ ತುದಿಯಲ್ಲಿ ಯಾವುದೇ ಲೆಕ್ಕ ಕೊಡಲು ಸಿದ್ದತೆ ಆರಂಭವಾಗಿದೆ.

 ದಿಶಾ ಸಮಿತಿಯ ರಚನೆಯ ಮೂಲ ಉದ್ದೇಶ ಅನುಷ್ಠಾನಕ್ಕೆ ಬರಲಿದೆ. ತುಮಕೂರು ಜಿಐಎಸ್ ಪೋರ್ಟಲ್ ಪ್ರತಿದಿನ  ಬಳಕೆಯಾಗಲೇಬೇಕು, ಯಾವುದೇ ಕಾಮಗಾರಿ ಆರಂಭಕ್ಕೂ ಮುನ್ನ ಕಡ್ಡಾಯವಾಗಿ ಪ್ರತಿಯೊಂದು ಇಲಾಖೆಯೂ ನಕ್ಷೆಯಲ್ಲಿ ಕಾಮಗಾರಿ ಇತಿಹಾಸದ ಸಹಿತ ದಾಖಲು ಮಾಡಿ ಕಡತದಲ್ಲಿ ಒಂದು ನಕ್ಷೆ ಪ್ರತಿಯನ್ನು ಕಡ್ಡಾಯವಾಗಿ ಹಾಕಬೇಕು ಮತ್ತು ಅಂತಿಮ ಬಿಲ್ ನೀಡುವಾಗಲೂ ಇತಿಹಾಸ ಸಹಿತ ಮಾಹಿತಿ ಅಫ್ ಲೋಡ್ ಮಾಡಿದ ನಕ್ಷೆ ಇರಬೇಕು ಎಂಬ ಸುತ್ತೋಲೆಯನ್ನು ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಯುತ್ತಿದೆ.

 ರೀತಿ ಆದಲ್ಲಿ ಮಾಹಿತಿ ಹಕ್ಕು ಹೋರಾಟಗಾರರು, ಇಲಾಖೆಗಳಿಗೆ ಅರ್ಜಿಹಾಕುವ ಪ್ರಮೇಯವೇ ಬರುವುದಿಲ್ಲಾ, ಅವರು ಕೇಳುವ ಎಲ್ಲಾ ಮಾಹಿತಿಯೂ ತುಮಕೂರು ಜಿಐಎಸ್ ಪೋರ್ಟಲ್‌ನಲ್ಲಿಯೇ ದೊರೆಯಲಿದೆ. ಜೊತೆಗೆ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದೊರೆಯಲಿದೆ. ದುರುಪಯೋಗ ಬಹಳಷ್ಟು ಕಡಿಮೆಯಾಗಲಿದೆ.

About The Author