22nd December 2024
Share

TUMAKURU:SHAKTHIPEETA FOUNDATION

 ಪ್ರಧಾನಿ ಶ್ರೀ ನರೇಂದ್ರ ಮೋದಿಯವರು 2023 ರೊಳಗೆ ದೇಶದ ಎಲ್ಲಾ ಮನೆ ಮನೆಗೂ ನಲ್ಲಿ ನೀರು ನೀಡಲೇ ಬೇಕು ಎಂಬ ದೃಢ ಸಂಕಲ್ಪ ಮಾಡಿದ್ದಾರೆ. ದೇಶದ ಪ್ರತಿ ಹಳ್ಳಿಗೂ  ಮೋದಿಯವರು ಬರಲು ಸಾಧ್ಯವೇ? ಹಾಗಿದ್ದಲ್ಲಿ ತುಮಕೂರು ಜಿಲ್ಲೆಯ ಗ್ರಾಮೀಣ ಭಾಗದ 10 ಜನ ಶಾಸಕರು ಮತ್ತು ಸಚಿವರ ಪಾತ್ರ ಏನು?

 ನಿಮ್ಮ ಕ್ಷೇತ್ರದ ಯಾವ ಗ್ರಾಮಕ್ಕೆ, ಯಾವ ನದಿ ನೀರನ್ನು, ಯಾವ ಜಲಸಂಗ್ರಹಾಗಾರದಿಂದ ನೀಡಬೇಕು ಎಂಬ ಬಗ್ಗೆ ಪರಿಣಿತರ, ಇಂಜಿನಿಯರ್‌ಗಳ ಮತ್ತು ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಸಲಹೆ ನೀಡುತ್ತಿರೋ ಅಥವಾ ನಮಗೂ ಅದಕ್ಕೂ ಸಂಬಂದವಿಲ್ಲ ಕಾಮಗಾರಿ ಟೆಂಡರ್ ಕರೆದಾಗ ನೋಡಿಕೊಳ್ಳೋಣ ಎಂದು ಸುಮ್ಮನೆ ಕುಳಿತು ಕೊಳ್ಳುತ್ತೀರಾ?

  ಶ್ರೀ ಜೆ.ಸಿ.ಮಾಧುಸ್ವಾಮಿಯವರು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ಮಾತ್ರ ವಿವಿಧ ನದಿ ನೀರು ತುಂಬಿಸಲು ಹರಸಾಹಸ ಮಾಡುತ್ತಿದ್ದಾರೆ. ಜಿಲ್ಲೆಯ ಇತರೆ ಭಾಗಕ್ಕೂ ಅವರಿಗೂ ಸಂಬಂದವಿಲ್ಲವೇನೋ ಎನ್ನುವ ರೀತಿಯಲ್ಲಿ ಇರುವ ಹಾಗೆ ಕಾಣುತ್ತದೆ.

  ಇದು ಒಳ್ಳೆಯ ಬೆಳವಣಿಗೆ ಅಲ್ಲ ಸ್ವಾಮಿ, ನಿಮ್ಮ ಕ್ಷೇತ್ರದ ಕೆರೆಗಳಿಗೆ ನೀರು ಪಡೆಯುವುದು ನಿಮ್ಮ ಜವಾಬ್ಧಾರಿ ಖಂಡಿತ ಮಾಡಿ, ಆದರೇ ಜಿಲ್ಲಾ ಉಸ್ತುವಾರಿ ಸಚಿವರಾದ ತಾವು ಒಂದು ಕ್ಷೇತ್ರದ ಬಗ್ಗೆ ಸೀಮೀತವಾಗ ಬಾರದು. ತಾವು ಸಣ್ಣ ನೀರಾವರಿ ಸಚಿವರು, ಕಾನೂನು ಸಚಿವರು ಜೊತೆಗೆ ವಿಷಯ ತಜ್ಞರು ಆದರೇ ಹೀಗೇಕೆ ಸ್ವಾಮಿ.

 ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಅಗತ್ಯವಿರುವ ನೀರಿನ ಬಗ್ಗೆ ಯಾವ ಶಾಸಕರು ತಲೆಕಡೆಸಿಕೊಳ್ಳಲಲಿಲ್ಲ. ಮನೆ ಮನೆಗೆ ನಲ್ಲಿ ನೀರು ನೀಡುವ ಯೋಜನೆಗೂ ಬಹಿರಂಗವಾಗಿ ಯಾವ ಶಾಸಕರು ಮಾತನಾಡಲಿಲ್ಲ.

  ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ಅವರ ಕ್ಷೇತ್ರದ ಕುಡಿಯುವ ನೀರಿನ ಯೋಜನೆ ರೂಪಿಸುವುದನ್ನು ನೋಡಿ ಇತರರು ಕಲಿಯಬೇಕು. ಮಾದರಿಯಾಗಿ ಚಿಂತನೆ ನಡೆಸಿ ಕಾರ್ಯಗತಗೊಳಿಸುವತ್ತಾ ಸಾಗಿದ್ದಾರೆ. ನನ್ನ ಪ್ರಕಾರ ಅವರ ಅವಧಿಯಲ್ಲಿ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಸುತ್ತಾರೆ ಎಂಬ ಕನಸು ನನ್ನದಾಗಿದೆ.

  ಸಂಸದರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಗಂಗಾಮಾತೆ ಹೆಸರು ಹೇಳಿ ಚುನಾವಣೆಯಲ್ಲಿ ಗೆಲುವು ಸಾಧಿಸಿದವರು, ತುಮಕೂರು ಜಿಲ್ಲಾ ದಿಶಾ ಸಮಿತಿಯ ಸಭೆಯಲ್ಲಿ ಅವರ ಕನಸಿನ ಯೋಜನೆಗಳನ್ನು ಜಾರಿಗೊಳಿಸಲು ಕಳೆದ ಒಂದು ವರ್ಷದಿಂದ ಸರ್ಕಸ್ ಮಾಡುತ್ತಾ ಬಂದಿದ್ದಾರೆ. ಎಲ್ಲಾ ವಿಚಾರಗಳನ್ನು ಸಹ ತುಮಕೂರಿನಿಂದ ಆರಂಭಿಸಿ- ಕೇಂದ್ರ ಸರ್ಕಾರದವರೆಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

 ಜಿಲ್ಲೆಯಲ್ಲಿ ಲಭ್ಯತೆ ಇರುವ ನೀರು, ಜಲಸಂಗ್ರಹಾಗಾರಗಳ ಡಿಜಿಟಲ್ ಗಣತಿ, ಜಿಲ್ಲೆಯ ಕೆರೆಗಳಿಗೆ  ಅಗತ್ಯವಿರುವ ನೀರನ್ನು ಯಾವ ನದಿ ಮೂಲದಿಂದ ತರಬಹುದು ಎಂಬ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಸರ್ಕಾರಗಳ ಹಂತದಲ್ಲಿ ಕಡತಗಳಿಗೆ ಚಾಲನೆ ನೀಡಲು ಯಶಸ್ವಿಯಾಗಿದ್ದಾರೆ.

  ಪ್ರತಿಯೊಂದು ಕ್ಷೇತ್ರದ ಶಾಸಕರು ತಮ್ಮ ಅಭಿಪ್ರಾಯ ತಿಳಿಸುತ್ತಿರೋ ಅಥವಾ ಇಲ್ಲವೋ ಬಹಿರಂಗವಾಗಿ ಸ್ಪಷ್ಟ ಪಡಿಸಿ. ಜಲಜೀವನ್ ಮಿಷನ್ ಯೋಜನೆಗೆ 2023 ಕಾಲಮಿತಿ ನಿಗದಿ ಇದೆ, ಜಿಲ್ಲೆಯಲ್ಲಿ ಯಶ್ವಸ್ವಿಯಾಗಿ ಅನುಷ್ಠಾನ ಮಾಡಲೇಬೇಕು. ದಯವಿಟ್ಟು ಮೌನ ಮುರಿಯಿರಿ.

ಚುನಾವಣಾ ಸಂದರ್ಭದಲ್ಲಿ ಮನೆ ಮನೆಗೆ ಏನೇನೋ ತಲುಪಿಸಲು ಪಟ್ಟಿ ಮಾಡಿಸುವವರಿಗೆ, ಈಗ ಮನೆ ಮನೆಗೆ ಗಂಗೆ ಹರಿಸಲು ಪಟ್ಟಿ ಮಾಡಲು ಸಮಯವಿಲ್ಲವೇ?