22nd December 2024
Share

TUMAKURU:SHAKTHIPEETA FOUNDATION

ಕಳೆದ ಒಂದು ವಾರದಿಂದ ಕೆಲ ಮಾಧ್ಯಮ ಮಿತ್ರರು ಮತ್ತು ಅಭಿವೃದ್ಧಿ ಆಸಕ್ತರು, ಕೇಂದ್ರ ಸರ್ಕಾರದ ಮುಂಗಡ ಪತ್ರದಲ್ಲಿ ತುಮಕೂರು ಜಿಲ್ಲೆಗೆ ಯಾವ ಯೋಜನೆ ಮಂಜೂರು ಮಾಡಬಹುದು, ನಿಮ್ಮ ನೀರಿಕ್ಷೆ ಏನು ಸಾರ್? ಎಂಬ ಪ್ರಶ್ನೆ ಕೇಳಿದಾಗ ನನಗೆ ನಗು ಬರುತ್ತದೆ.

ಹಿಂದೆ ಒಂದು ಕಾಲವಿತ್ತು ಈ ನಗರಕ್ಕೆ ಇಂಥ ಯೋಜನೆ, ಈ ರಾಜ್ಯಕ್ಕೆ ಈ ಯೋಜನೆ ಎಂದು ಪ್ರಕಟಿಸುತ್ತಿದ್ದರು. ಈಗಲೂ ಪ್ರಕಟಿಸುತ್ತಾರೆ ಬಹಳ ವಿರಳ. ನನ್ನ ಅನುಭವದ ಪ್ರಕಾರ ಕೇಂದ್ರ ಸರ್ಕಾರ ಒಂದು ಅಕ್ಷಯ ಪಾತ್ರೆ. ಸಾಕಷ್ಟು ಅನುದಾನವನ್ನು ರಾಜ್ಯಗಳಿಗೆ ಮಂಜೂರು ಮಾಡಿಸಬಹುದು.

ಅಭಿವೃದ್ಧಿ ಆಸಕ್ತರು ಹದ್ದಿನ ತರಹ ಕಾಯುತ್ತಿರಬೇಕು, ಯಾವ ಇಲಾಖೆಯಲ್ಲಿ ಯಾವ ಯೋಜನೆ ಮಂಜೂರು ಮಾಡಿಸ ಬಹುದು ಎಂಬ ಹುಡುಕಾಟ ವರ್ಷ ಪೂರ್ತಿ ನಡೆಸುತ್ತಿರಬೇಕು. ನಮಗೆ ಅಗತ್ಯವಿರುವ ಯೋಜನೆಗೆ ಪ್ರಸ್ತಾವನೆ ಸಿದ್ಧಪಡಿಸಿ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾಕ್ಕೆ ಸಲ್ಲಿಸ ಬೇಕು.

 ಫೈಲ್ ವರ್ಮ್‌ನಂತೆ ಕಾರ್ಯ ನಿರ್ವಹಿಸುವ ತಂಡ ಇರಬೇಕು. ನಮ್ಮ ರಾಜ್ಯದಲ್ಲೂ ಒಬ್ಬ ದೆಹಲಿ ಪ್ರತಿನಿಧಿ ಇರುತ್ತಾರೆ, ಅವರೇನು ಮಾಡುತ್ತಿದ್ದಾರೆ ಎಂಬ ವಿಚಾರವನ್ನು ಅವರೇ ಮನನ ಮಾಡಿಕೊಳ್ಳಬೇಕು. ಸರ್ಕಾರದ ಖಜಾನೆಯಿಂದ ಟಿಎ.ಡಿಎ.ಸರ್ಕಾರಿ ಕಾರು, ಸಿಬ್ಬಂದಿ ಹೀಗೆ ಕೋಟ್ಯಾನುಕೋಟಿ ಮಾತ್ರ ಎಲ್ಲಾ ಪಕ್ಷಗಳ ಸರ್ಕಾರದಲ್ಲೂ ವ್ಯಯವಾಗುತ್ತಿದೆ’

ಅಷ್ಟೆ ಅಲ್ಲ ಕೇಂದ್ರ ಸರ್ಕಾರ, ಕೇಂದ್ರ ಸರ್ಕಾರದ ಅನುದಾನದ ಸಮರ್ಪಕ ಬಳಕೆ, ದುರುಪಯೋಗ ತಡೆಗಟ್ಟುವಿಕೆ ಮತ್ತು ಹೊಸ ಯೋಜನೆಗಳ ಮಂಜೂರಾತಿಗೆ ಶ್ರಮಿಸುವ ಸಲುವಾಗಿಯೇ , ಜಿಲ್ಲಾ ಮಟ್ಟದಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ, ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ದಿಶಾ ಸಮಿತಿ ರಚಿಸಲು 2016 ರಲ್ಲಿಯೇ ಘೋಷಿಸಿ ಮೋದಿಯವರು ಪರಮಾಧಿಕಾರ ನೀಡಿದ್ದಾರೆ. 

 ವಿಚಿತ್ರವೆಂದರೆ 2016 ರಿಂದ ರಾಜ್ಯವನ್ನು ಆಳಿದ ಶ್ರೀ ಸಿದ್ಧರಾಮಯ್ಯನವರಾಗಲಿ, ಶ್ರೀ ಹೆಚ್.ಡಿ.ಕುಮಾರ ಸ್ವಾಮಿಯವರಾಗಲಿ ರಾಜ್ಯ ಮಟ್ಟದ ದಿಶಾ ಸಮಿತಿಯನ್ನೇ ರಚಿಸಿರಲಿಲ್ಲ. ಪ್ರಸ್ತುತ ಶ್ರೀ ಬಿ.ಎಸ್.ಯಡಿಯೂರ ಪ್ಪನವರು ರಾಜ್ಯ ಮಟ್ಟದಲ್ಲಿ ದಿಶಾ ಸಮಿತಿ ರಚಿಸಿದ್ದಾರೆ.  ಆದರೇ ಮೂರು ಭಾರಿ ಸಭೆ ಕರೆದರೂ ಕಾರಣಾಂತರದಿಂದ ಮುಂದೂಡಿದ್ದಾರೆ.

ಕೇಂದ್ರ ಸರ್ಕಾರ ಕಳೆದ ಮುಂಗಡ ಪತ್ರದಲ್ಲಿ ಒಂದು ಹೊಸ ಐಡಿಯಾ ಮಾಡಿ, ಮೂಲಭೂತ ಸೌಕರ್ಯಗಳ ಪೈಪ್‌ಲೈನ್ ಯೋಜನೆ ಜಾರಿಗೊಳಿಸಿದೆ. ಇದರಡಿಯಲ್ಲಿ ರಾಜ್ಯ ಸರ್ಕಾರಗಳು ಯಾವ ಪ್ರದೇಶದಲ್ಲಿ ಯಾವ ಯೋಜನೆ ಮಾಡುತ್ತೇವೆ. ಎಷ್ಟು ಹಣ ಬೇಕು ಎಂಬ ಬಗ್ಗೆ ದಾಖಲೆ ಮಾಡುವ ಮಹತ್ವದ ಯೋಜನೆ ಇದಾಗಿದೆ.

ಈ ಯೋಜನೆಗಳನ್ನು ಗಮನಿಸಿ ಕೇಂದ್ರ ಸರ್ಕಾರ ಅನುದಾನ ಮೀಸಲಿಡುವ ಚಿಂತನೆ ಮಾಡಿರಬಹುದು.  ಇದೊಂದು ಉತ್ತಮ ಯೋಜನೆ. ನಮ್ಮ ಸಂಸದರು ಈ ಯೋಜನೆ ಪ್ರಯೋಜನ ಪಡೆಯುವಲ್ಲಿ ನಿಸ್ಸಿಮರು ಎಂದರೆ ಅತಿಶಯೋಕ್ತಿಯಲ್ಲ?

 ನಮ್ಮಲ್ಲಿ ಮಂಜೂರಾಗಿರುವ ಅನುದಾನವನ್ನೇ ಖರ್ಚುಮಾಡಲ್ಲ, ಜಿಲ್ಲಾ ಉಸುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು  ಕೆಡಿಪಿ ಸಭೆಯಲ್ಲಿ ಕೆಂಡಮಂಡಲವಾಗಿದ್ದು ಸಹ ಇದೇ ಕಾರಣಕ್ಕೆ. ಇನ್ನೂ ಹೊಸ ಯೋಜನೆಗೆ ಪ್ರಸ್ತಾವನೆ ಸಲ್ಲಿಸುವ ಆಲೋಚನೆ ಮಾಡುವರು ಯಾರು?’

 ವರ್ಷ ಪೂರ್ತಿ ಕಾಲ ಕಳೆದು ಮಾರ್ಚ್ 31 ಸಾರ್, ಹಣ ಖರ್ಚು ಮಾಡಬೇಕು ಎಂದು ಹೇಳುವ ಅತ್ಯಂತ ಕೆಟ್ಟ ಸಂಸ್ಕೃತಿಗೆ ಇತಿಶ್ರೀ ಆಡಲೇಬೇಕು. ಮಾಧುಸ್ವಾಮಿಯರಂತವರ ಕೈಯಲ್ಲೇ ಆಗಲಿಲ್ಲ ಎಂದರೆ ಇನ್ಯಾರು ಮಾಡುತ್ತಾರೆ ಎಂದು ಜನ ಮಾತನಾಡುತ್ತಾರೆ.

ತುಮಕೂರು ಜಿಐಎಸ್ ಪೋರ್ಟಲ್ ಕೇಂದ್ರ ಸರ್ಕಾರದ ಮೂಲಭೂತ ಸೌಕರ್ಯಗಳ ಪೈಪ್‌ಲೈನ್’ ಯೋಜನೆಗಳ ವೇದಿಕೆ ಆಗಲಿದೆ. ಹಾಲಿ ಇರುವ ಯೋಜನೆಳ ಜಿಐಎಸ್ ಲೇಯರ್ ಸಿದ್ಧವಾದ ನಂತರ, ಯಾವ ಪ್ರದೇಶಕ್ಕೆ ಏನು ಮಾಡಬಹುದು ಎಂಬ ಅನಾಲೀಸಿಸ್ ಶುರುವಾಗಲಿದೆ. ಹೊಸದಾಗಿ ಮಾಡುವ ಯೋಜನೆಗಳ ಲೇಯರ್ ಸಿದ್ಧವಾಗಲಿದೆ.

ಇದೇ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ. ಹುಡುಕಿ-ತಡಕಿ’ ಕೆಲಸ ಮಾಡುವ ವಿಧಾನವಾಗಲಿದೆ.  ಅಭಿವೃದ್ಧಿ ವಾರ್‌ರೂಂ ಗುರಿಯೂ ಇದೇ ಆಗಿದೆ. ಪಲಿತಾಂಶ ಕಾದು ನೋಡೋಣ?

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ 2021-22  ನೇ ಸಾಲಿನ ಆಯವ್ಯಯ ಪತ್ರ ಮಂಡಿಸಿದ ನಂತರ ತುಮಕೂರು ಜಿಲ್ಲೆಯ ದಿಶಾ ಸಮಿತಿಯಲ್ಲಿ ಚಿಂತನ-ಮಂಥನ ನಡೆಯಲಿದೆ. ಈ ವರ್ಷ ನಾವು ಏನೇನು ಯೋಜನೆಗೆ ಶ್ರಮಿಸಬಹುದು ಎಂಬುದೇ ಆ ಸಭೆಯ ಉದ್ದೇಶ.

 ಈಗಾಗಲೇ ಶ್ರೀ ಜಿ.ಎಸ್.ಬಸವರಾಜ್‌ರವರು ಏಪ್ರಿಲ್‌ನ ಮೊದಲವಾರ ಈ ತರಹದ ಸಭೆ ನಡೆಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲು ಹಿಂದಿನ ಸಭೆಯಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ದಿಶಾ ಸಮಿತಿಯ ಉದ್ಧೇಶಗಳೂ ಇದೇ ಆಗಿದೆ.

ಈ ಸಭೆಯ ನಂತರ ತುಮಕೂರು ಜಿಲ್ಲೆಗೆ ಏನು ಯೋಜನೆ ಎಂದು ನಿಖರವಾಗಿ ಹೇಳಬಹುದು. ಆದರೂ 2021-22 ನೇ ವರ್ಷ ತುಮಕೂರು ಜಿಲ್ಲೆಗೆ ಬಂಪರ್ ಆಗಲಿದೆ. ದಾಖಲೆ ಸಮೇತ ಬಿಡುಗಡೆಮಾಡಲು ಸಿದ್ಧತೆ ಆರಂಭವಾಗಿದೆ.

2022 ರ ಮೋದಿಯವರ ಗಡುವೇ ನಮಗೆ ಅಭಿವೃದ್ಧಿ ಸುತ್ತಿಗೆ’ ಆಗಲಿದೆ.