27th July 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕಿನ ಸೋಪನಹಳ್ಳಿ ಕೆರೆ ಒಂದು ಪುಟ್ಟ ಕೆರೆ. ಈ ಕೆರೆಯ ಕೋಡಿಹಳ್ಳ ಕುಂದರನಹಳ್ಳಿ, ಸಾಗರನಹಳ್ಳಿ ಮೂಲಕ ಹರಿದು ತ್ಯಾಗಟೂರು ಚಿಕ್ಕ ಕೆರೆಗೆ ಸೇರುತ್ತದೆ.

ಸಾಗರನಹಳ್ಳಿ ಮತ್ತು ತ್ಯಾಗಟೂರು ಗ್ರಾಮಗಳಿಗೆ ಹೇಮಾವತಿ ನೀರು ದೊರೆಯಲಿದೆ. ಕುಂದರನಹಳ್ಳಿ ಸೋಪನಹಳ್ಳಿ ಗ್ರಾಮಗಳು ಹೇಮಾವತಿ ನೀರಿನಿಂದ ವಂಚಿತವಾಗಿವೆ. ಸೋಪನಹಳ್ಳಿ ಕೆರೆ ತುಂಬಿ ಕೋಡಿಹಳ್ಳ ಹರಿದರೆ ಕುಂದರನಹಳ್ಳಿ ಮತ್ತು ಸೋಪನಹಳ್ಳಿ ಗ್ರಾಮಗಳ ಅಂತರ್ಜಲ ಸುಧಾರಣೆ ಆಗುತ್ತದೆ.

ಇದೊಂದು ತೊರೆ ರೀತಿ ಇರುತಿತ್ತು. 2001 ನೇ ಇಸವಿಯಲ್ಲಿ ಈ ಕೆರೆ ತುಂಬಿ ಕೋಡಿ ಬಿದ್ದ ನಂತರ 2021 ನೇ ಇಸವಿಯಲ್ಲಿ ಪುನಃ ಕೋಡಿ ಬಿದ್ದಿದ್ದು ಇತಿಹಾಸ.

ಈ ಕೋಡಿ ಹಳ್ಳದಲ್ಲಿ ಅದಲಗೆರೆ ರಸ್ತೆ ವರೆಗೆ ಸುಮಾರು 7 ಪಿಕ್ ಆಫ್ ಮಾಡಿದ್ದರೂ ಮಳೆ ನೀರಿನಿಂದ ತುಂಬಿರುವುದು ವಿರಳ, ಈ ಹಳ್ಳದಲ್ಲಿ ನಿಲ್ಲುವ ನೀರು ಎರಡು ಗ್ರಾಮಗಳಿಗೆ ವರದಾನ, ಈ ಹಿನ್ನಲೆಯಲ್ಲಿ ಸೋಪನಹಳ್ಳಿ ಕೆರೆ, ಈ ಹಳ್ಳದ 7 ಪಿಕ್ ಅಪ್ ಗಳು, ಕುಂದರನಹಳ್ಳಿಯ ಎರಡು ಕಟ್ಟೆಗಳು ಹೇಮಾವತಿ ನೀರಿನಿಂದ ತುಂಬಿಸಬೇಕು ಎಂದು ಕಳೆದ 23 ವರ್ಷಗಳಿಂದಲೂ ನಿರಂತರವಾಗಿ ಶ್ರಮಿಸಿದ್ದರೂ ಒಂದಲ್ಲ ಒಂದು ಕಾರಣದಿಂದ ನೆನೆಗುದಿಗೆ ಬಿದ್ದಿತ್ತು.

ಈಗ ಈ ಕಾಮಗಾರಿಗೆ ಮೂಹೂರ್ತ ಕೂಡಿ ಬಂದಿದೆ. ಮಾನ್ಯ ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಕೊನೆಯ ಕಾವೇರಿ ನೀರಾವರಿ ನಿಗಮದ ಬೋರ್ಡ್ ಮೀಟಿಂಗ್‍ನಲ್ಲಿ  ಸುಮಾರು 3 ಕೋಟಿ ಕಾಮಗಾರಿಗೆ ಹಸಿರು ನೀಶಾನೆ ನೀಡಿದ್ದಾರೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಜಲಸಂಪನ್ಮೂಲ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್ ಸಿಂಗ್ ರವರು, ಎಂಡಿಯವರಾದ ಶ್ರೀ ಕೆ.ಜೈಪ್ರಕಾಶ್ ರವರು ಮತ್ತು ಅವರ ತಂಡದ ಸಹಕಾರದಿಂದ ಈ ಕಾಮಗಾರಿ ಶಂಕು ಸ್ಥಾಪನೆ ಹಂತಕ್ಕೆ ಬಂದಿದೆ.

ಈಗ ಇರುವ ಸಮಸ್ಯೆ ಸೋಪನಹಳ್ಳಿ ಕೆರೆ ಕೋಡಿಯ ಕರಾಬು ಹಳ್ಳದ ಒತ್ತುವರಿ ತೆರವು. ಸುಮಾರು ದಿವಸಗಳ ಹಿಂದೆಯೇ ಅರ್ಜಿ ನೀಡಲಾಗಿದೆ. ಗುಬ್ಬಿ ತಹಶೀಲ್ಧಾರ್ ಕಚೇರಿಯಲ್ಲಿ ಅರ್ಜಿ ಗೊರಕೆ ಹೊಡೆಯುತ್ತಿದೆ.

ಇದೊಂದು ಮಾದರಿ ಕರಾಬುಹಳ್ಳವಾಗಬೇಕಿದೆ. ಒತ್ತುವರಿ ಮಾಡಿಕೊಂಡಿರುವ ರೈತರ ಮನವೊಲಿಸುವುದು, ಒತ್ತುವರಿ ತೆರವಿಗೆ ಸರ್ಕಾರಗಳಿಗೆ ಸಹಕರಿಸುವುದು ಜನರ ಆಧ್ಯ ಕರ್ತವ್ಯವಾಗಬೇಕು. ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆಯ ಪೈಲಟ್ ಯೋಜನೆ ಇದಾಗಬೇಕಿದೆ.

ಅಂತರ್ಜಲದ ಅಧ್ಯಯನ, ರೈತರ ಆದಾಯದ ದುಪ್ಪಟ್ಟು  ಬಗ್ಗೆಯೂ ವಿಶೇಷ ಗಮನ ಹರಿಸಬೇಕಿದೆ. ಈ ಎರಡು ಗ್ರಾಮಗಳ ಜಮೀನಿನ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲು ಶಕ್ತಿಪೀಠ ಫೌಂಡೇಷನ್ ಜೊತೆಗೆ ಸುಮಾರು ಮೂರು ಸಂಘಟನೆಗಳು ಮುಂದೆ ಬಂದಿವೆ. ಈ ಹಿಂದೆ ರಾಣಿಬೆನ್ನೂರಿನ ಶ್ರೀ ಬಸವರಾಜ್ ಸುರಣಗಿ ಯವರು ಸ್ಮಾರ್ಟ್ ವಿಲೇಜ್ ಮೌಲ್ಯಮಾಪನ/ಅಧ್ಯಯನ ಆರಂಭಿಸಿದ್ದರು.

ಅಫಿಕ್ಸ್ ಸಂಸ್ಥೆಯ 1988 ರಲ್ಲಿಯೇ ಕುಂದರನಹಳ್ಳಿ ಮಾದರಿ ಗ್ರಾಮ’ ಮಾಡಬೇಕೆಂಬ ಕನಸು ಚಿಗುರು ಹೊಡೆದಿದ್ದು, ಅಲ್ಲಿಂದ ಇಲ್ಲಿಯವರೆಗೂ ಆಗಿರುವ ಸುಧಾರಣೆ ಮತ್ತು ಮುಂದೆ ಆಗಬೇಕಿರುವ ಯೋಜನೆಗಳಿಗೆ ಅಂತಿಮ ರೂಪು ಕೊಡಲಾಗುವುದು.

   ಸಂಸದರ ಆದರ್ಶ ಗ್ರಾಮ ಯೋಜನೆಗೆ ಈ ಎರಡು ಗ್ರಾಮಗಳು ಸೇರ್ಪಡೆಯಾಗಿವೆ, ಈ ಹಿನ್ನಲೆಯಲ್ಲಿ ದಿನಾಂಕ:14.04.2022 ರಿಂದ ಊರಿಗೊಂದು ಗ್ರಾಮದ ಇತಿಹಾಸ ಪುಸ್ತಕ’ ಬರೆಯಲು ಚಾಲನೆ ನೀಡಲಾಗುವುದು. ಬಯೋಡೈವರ್ಸಿಟಿ ಪಾರ್ಕ್ ಅಥವಾ ‘ಪವಿತ್ರವನ’ಕ್ಕೂ ಚಾಲನೆ ನೀಡಲಾಗುವುದು.

ಶ್ರೀ ಜಿ.ಎಸ್.ಬಸವರಾಜ್ ರವರ ಕನಸಿನ  ಕೆಳಕಂಡ ಮೂರು ಯೋಜನೆಗಳ ಪೈಲಟ್ ಗ್ರಾಮವಾಗಲಿದೆ.

  1. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆ.
  2. ಊರಿಗೊಂದು ಗ್ರಾಮ ಇತಿಹಾಸದ ಪುಸ್ತಕ ಯೋಜನೆ.
  3. ಊರಿಗೊಂದು ಬಯೋ ಡೈವರ್ಸಿಟಿ ಪಾರ್ಕ್ ಯೋಜನೆ

ಕರ್ನಾಟಕ ರಾಜ್ಯದ ಯಾವುದೇ ಗ್ರಾಮದ ಅಭಿವೃದ್ಧಿ ಆಸಕ್ತರು ಮುಂದೆ ಬಂದರೂ ಈ ಮೂರು ಯೋಜನೆಗಳಿಗೆ ಸಹಕಾರ ನೀಡಲಾಗುವುದು.