22nd November 2024
Share

TUMAKURU:SHAKTHIPEETA FOUNDATION

   ಡ್ರೋನ್ ಸರ್ವೇ ಮಾಡುತ್ತೇವೆ ಎಂದು ಹಣ ಕಬಳಿಸಿ ಯಾವುದೇ ಕರಾರುವಕ್ಕಾದ ಮಾಹಿತಿ ನೀಡದೆ ಇರುವ ಸಲಹಾ ಸಂಸ್ಥೆಗಳನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಿ ಎಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಖಡಕ್ ಸೂಚನೆ ನೀಡಿದರು.

  ಮಾಹಿತಿ ಪರಿಶೀಲಿಸದೆ ಹಣ ನೀಡಿರುವ ಅಧಿಕಾರಿ ವಿರುದ್ದ ಕ್ರಮಕೈಗೊಳ್ಳಿ, ನಾವು ನೀವು ತೋರಿಸುವ ಚಿತ್ರ ನೋಡಿ ಹೋಗಲು ಬಂದಿಲ್ಲ, ನಾವು ಕೇಳುವ ಮಾಹಿತಿಗೆ ತಕ್ಕ ಉತ್ತರನೀಡಿ ಇನ್ನೂ ಎಷ್ಟು ದಿವಸ ಬೋಗಸ್ ಡೇಟಾ ತೋರಿಸಿ ಸರ್ಕಾರ ಮತ್ತು ಜನತೆಯ ಕಣ್ಣಿಗೆ ಮಣ್ಣು ಎರಚ ಬೇಕೆಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಇದೇ ರೀತಿ ಆದರೆ ದಿಶಾ ಸಮಿತಿಯಲ್ಲಿ ನಿರ್ಣಯ ಕೈಗೊಂಡು ಅಗತ್ಯ ಕ್ರಮಕೈಗೊಳ್ಳಬೇಕಾಗುವುದು ಎಂದು ಎಚ್ಚರಿಸಿದರು.

ದಿನಾಂಕ:31.07.2020 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿ ಶುಕ್ರವಾರ ನಡೆಯುವ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ಮಾತನಾಡಿದರು.

ನಿಮಗೆ ಗೊತ್ತಿದೆಯೋ ಅಥವಾ ಇಲ್ಲವೋ ಸ್ಪಷ್ಟ ಪಡಿಸಿ: ಜಿ.ಬಿ.ಜ್ಯೋತಿಗಣೇಶ್

  ನಿಮಗೆ ಜಿಐಎಸ್ ಕೆಲಸ ಗೊತ್ತಿದೆಯೋ ಅಥವಾ ಇಲ್ಲವೋ ಸ್ಪಷ್ಟ ಪಡಿಸಿ ವಿನಾಕಾರಣ ನಮ್ಮ ಕಾಲಹರಣ ಮಾಡಬೇಡಿ, ತುಮಕೂರು ಅಮಾನಿಕೆರೆ ರಾಜಕಾಲುವೆಗಳನ್ನು ಎರಡು ಬಾರಿ ಹೂಳು ತೆಗೆದಿದ್ದೇವೆ ಎಂದು ಬಿಲ್ ಮಾಡಿದ್ದೀರಿ, ರಾಜಕಾಲುವೆ ಅಗಲ ಎಷ್ಟಿದೆ, ಉದ್ದ ಎಷ್ಟಿದೆ ಎಂದು ಕರಾರುವಕ್ಕಾದ ಮಾಹಿತಿ ನಿಮ್ಮ ಬಳಿ ಇಲ್ಲ, ಸರ್ವೆಯರ್ ಸಮೀಕ್ಷೆ ಮಾಡಿದ್ದಾರೆ, ವಿಲೇಜ್ ಮ್ಯಾಪ್‌ನಲ್ಲಿ ಮಾಹಿತಿ ಇದೆ. ಪ್ರತಿಯೊಂದು ಪಹಣೆಯಲ್ಲಿ ಕರಾಬು ಮಾಹಿತಿ ಇರುತ್ತದೆ. ಇದಲ್ಲದೆ ಡ್ರೋನ್ ಸರ್ವೇ ಬೇರೆ ಮಾಡಿಸಿದ್ದೀರಿ ನಿಖರವಾದ ಮಾಹಿತಿ ಸಂಗ್ರಹಿಸದೇ ಹೇಗೆ ಕೆಲಸಮಾಡುತ್ತಿರಿ?

 ತುಮಕೂರು ಸ್ಮಾರ್ಟ್ ಸಿಟಿ ಮುಖ್ಯ ಇಂಜಿನಿಯರ್ ಶ್ರೀ ಸಿದ್ಧಗಂಗಯ್ಯನವರಿಗೆ ಸಾರ್ ನೀವು ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿದ್ದವರು ಮೂಲಭೂತ ಸೌಕರ್ಯಗಳ ಜಿಐಎಸ್ ಡೇಟಾ ಸಂಗ್ರಹಿಲು ಸೂಕ್ತ ಕ್ರಮಕೈಗೊಳ್ಳಿ ಎಂದು ಸೂಚಿಸಿದರು.

ಪಿಎಂಜಿಎಸ್ವೈ ಇಂಜಿನಿಯರ್ ಬಳಿ ಮಾಹಿತಿ ಪಡೆಯಿರಿ: ಡಾ.ರಾಕೇಶ್ ಕುಮಾರ್.

 ತುಮಕೂರು ಜಿಲ್ಲೆಯ ರಸ್ತೆಗಳ ಕೋರ್ ಮ್ಯಾಪ್ ಅನ್ನು ಪಿಎಂಜಿಎಸ್‌ವೈ ಇಲಾಖೆಯವರು ಮಾಡಿದ್ದಾರೆ. ಅದರಲ್ಲಿ ಜಿಲ್ಲೆಯಲ್ಲಿ ಎಷ್ಟು ಕೀಮೀ ರಸ್ತೆ ಇದೆ, ಅದರಲ್ಲಿ ಡಾಂಬರ್ ರಸ್ತೆ ಎಷ್ಟು, ಸಿಮೆಂಟ್ ರಸ್ತೆ ಎಷ್ಟು, ಜಲ್ಲಿ ರಸ್ತೆ ಎಷ್ಟು, ಮಣ್ಣಿನ ರಸ್ತೆ ಎಷ್ಟು ಎಂಬ ಜಿಐಎಸ್ ಆಧಾರಿತ ಮಾಹಿತಿ ಇದೆ. ನಿಮಗೆ ಗೊತ್ತಿಲ್ಲದಿದ್ದರೇ ಪಿಎಂಜಿಎಸ್‌ವೈ ಇಂಜಿನಿಯರ್ ಬಳಿ ಮಾಹಿತಿ ಪಡೆಯಿರಿ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಆದೇಶಿಸಿದರು.

 ತುಮಕೂರು ಸ್ಮಾರ್ಟ್ ಸಿಟಿ ಅವಧಿಯೇ ಮುಗಿಯುತ್ತಾ ಬಂದರೂ ತುಮಕೂರಿನ ರಸ್ತೆ, ಚರಂಡಿ ಮಾಹಿತಿ ನೀಡದೇ ಇದ್ದರೆ ಏನರ್ಥ ಎಂದು ಪ್ರಶ್ನಿಸಿದರು. ಪಿಎಂಜಿಎಸ್‌ವೈ ಮ್ಯಾಪ್ ತರಿಸಿ ಪ್ರದರ್ಶಿಸಿದರು. ‘ಜಿಲ್ಲಾಧಿಕಾರಿಗಳ ಸಮಯಪ್ರಜ್ಞೆ’ ಭಾಗವಹಿಸಿದ್ದ ಎಲ್ಲ ಅಧಿಕಾರಿಗಳಿಗೆ ತಲೆ ತಗ್ಗಿಸುವಂತಿತ್ತು. ಎಲ್ಲರೂ ಮೌನವಾಗಿ ಒಬ್ಬರ ಮುಖ ಇನ್ನೊಬ್ಬರೂ ನೋಡುತ್ತಿದ್ದ ಅಪರೂಪದ ಪ್ರಸಂಗ ನಡೆಯಿತು. ಈ ಯೋಜನೆ ಯಶಸ್ವಿಗೆ ಏನೂ ಮಾಡಬೇಕು ಎಂಬ ಬಗ್ಗೆ ಕಡತ ತನ್ನಿ ನಿಮಗೆ ಅಗತ್ಯವಿರುವ ಎಲ್ಲಾ ನೆರವನ್ನು ನೀಡಲು ಸಿದ್ಧ ಎಂದು ತಿಳಿಸಿದರು.

ಎಂಓಯು ಓದದೇ ಬಿಲ್ ಪಾವತಿ ಹೇಗೆ?

  ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸದಸ್ಯ ಕುಂದರನಹಳ್ಳಿ ರಮೇಶ್ ಸಲಹಾ ಸಂಸ್ಥೆಗಳ ಎಂಓಯು ಓದದೇ ಬಿಲ್ ಪಾವತಿ ಹೇಗೆ ಮಾಡುತ್ತೀರಿ, ನಿಮಗೆ ಸಲಹಾ ಸಂಸ್ಥೆಗಳು ಸಮೀಕ್ಷೆ ಮಾಡಿ ನೀಡಿರುವ ಮಾಹಿತಿಯನ್ನು ನೋಡಲು ಜಿಐಎಸ್ ಪರಿಣಿತರು ಯಾರಿದ್ದಾರೆ. ಈ ಯೋಜನೆಯ ಥರ್ಡ್ ಪಾರ್ಟಿ ಇನ್ಸ್‌ಸ್ಪೆಕ್ಷನ್ ಮಾಡುವರು ಯಾರು? ಎಂದಾಗ ಯಾರ ಬಳಿಯೂ ಉತ್ತರವಿಲ್ಲ.

  ತುಮಕೂರು ಮಹಾನಗರಪಾಲಿಕೆ ಆಯುಕ್ತೆ ಶ್ರೀ ರೇಣುಕಮ್ಮನವರು, ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಕರಾದ ಶ್ರೀ ರಂಗಸ್ವಾಮಿರವರು ಮತ್ತು ಟೂಡಾ ಆಯುಕ್ತ ಶ್ರೀ ಯೋಗಾನಂದ್‌ರವರು ಎಲ್ಲಾ ಸಲಹಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ಧಿಷ್ಟ ಹೊಣೆಗಾರಿಕೆ ನೀಡಿ ಸಮರ್ಪಕವಾದ ಮಾಹಿತಿಗಳನ್ನು ಶೀಘ್ರವಾಗಿ ಮಾಡಿಸುವ ಭರವಸೆ ನೀಡಿದರು.