22nd November 2024
Share

TUMAKURU:SHAKTHI PEETA FOUNDATION

ದೇಶದ ನದಿ ಜೋಡಣೆ ಎಂದರೇನು?

 ಭಾರತ ದೇಶದಲ್ಲಿ ಯಾವ ನದಿಗಳಲ್ಲಿ ಹೆಚ್ಚು ನೀರು ಇದೆಯೋ ಅಲ್ಲಿಂದ ನೀರಿಗೆ ಆಭಾವ ಇರುವ ಕಡೆ ನೀರನ್ನು ಕೊಂಡೊಯ್ಯುವ ಬೃಹತ್ ಯೋಜನೆಯೇ ದೇಶದ ನದಿ ಜೋಡಣೆ. ನದಿ ಜೋಡಣೆ ಕನಸು ಯಾರಿಂದ ಪ್ರಾರಂಭವಾಯಿತು, ಯಾವಾಗ ಪ್ರಾರಂಭವಾಯಿತು, ಇದೂವರೆಗೂ ಆಡಳಿತ ನಡೆಸಿರುವ ಯಾವ ಯಾವ ಸರ್ಕಾರಗಳು ಕೈಗೊಂಡ ಕ್ರಮಗಳೇನು?

 ನ್ಯಾಯಾಲಯದ ಆದೇಶಗಳೇನು? ಬಹು ಮುಖ್ಯವಾಗಿ ನಮ್ಮ ರಾಜ್ಯ ಸರ್ಕಾರದ ನಿಲುವುಗಳು ಏನು? ಜೊತೆಗೆ ದೇಶದ ನದಿ ಜೋಡಣೆಯಿಂದ ನಮ್ಮ ರಾಜ್ಯಕ್ಕೆ ಆಗುವ ಪ್ರಯೋಜನವೇನು? ಯಾವ ಯಾವ ನದಿ ಜೋಡಣೆಯಿಂದ ನಮ್ಮ ರಾಜ್ಯದ ಯಾವ ಭಾಗಕ್ಕೆ ಎಷ್ಟೆಷ್ಟು ಪ್ರಮಾಣದ ನೀರು ದೊರೆಯಲಿದೆ. ಇದರಿಂದ ನಮ್ಮ ರಾಜ್ಯಕ್ಕೆ ಆಗುವ ಪ್ರಯೋಜನ ಏನು ಎಂಬ ಬಗ್ಗೆ ಅವಲೋಕನ ಮಾಡುವುದು ಅಗತ್ಯವಾಗಿದೆ.

 ನಾವು ಎಲ್ಲೋ ಕುಳಿತು, ವರದಿಗಳನ್ನು ಅಧ್ಯಯನ ಮಾಡಿ ನಮಗೆ ಬಂದ ಹಾಗೆ ಬರೆಯುವುದು ಒಂದಾದರೆ, ನಮ್ಮ ರಾಜ್ಯ ಸರ್ಕಾರದ ಸ್ಪಷ್ಟ ನಿಲುವುಗಳನ್ನು ಪಡೆಯುವುದು ಮುಖ್ಯ. ರಾಜ್ಯ ಸರ್ಕಾರದ ಅಭಿಪ್ರಾಯ, ಕೇಂದ್ರ ಸರ್ಕಾರದ ನಿಲುವು ದೊರೆತ ನಂತರ ಜನಾಭಿಪ್ರಾಯ ಮೂಡಿಸುವುದು ಸೂಕ್ತವಾಗಿದೆ.

 ನಮ್ಮ ಸರ್ಕಾರ ಸಮರ್ಪಕವಾದ ಮಾಹಿತಿಗಳನ್ನೇ ರಾಜ್ಯದ ಲೋಕಸಭಾ ಸದಸ್ಯರಿಗೆ ನೀಡದೇ ಇದ್ದರೆ, ಅವರು ಯಾವ ರೀತಿ ಧ್ವನಿಯಾಗಬಲ್ಲರು ಎಂಬುದು ಒಂದು ಯಕ್ಷ ಪ್ರಶ್ನೆಯಾಗಿದೆ.

ರಾಜ್ಯದ ನದಿ ಜೋಡಣೆ ಎಂದರೇನು?

 ಕರ್ನಾಟಕ ರಾಜ್ಯದಲ್ಲಿನ ಯಾವ ನದಿಗಳಲ್ಲಿ ಹೆಚ್ಚು ನೀರು ಇದೆಯೋ, ಅಲ್ಲಿಂದ ನೀರಿಗೆ ಆಭಾವ ಇರುವ ಕಡೆ ನೀರನ್ನು ಕೊಂಡೊಯ್ಯುವ ಬೃಹತ್ ಯೋಜನೆಯೇ ರಾಜ್ಯದ ನದಿ ಜೋಡಣೆ. ಈ ಯೋಜನೆಯನ್ನು ಪರಿಪೂರ್ಣವಾಗಿ ರಾಜ್ಯ ಸರ್ಕಾರ  ರೂಪಿಸಿದಿಯೇ?

 ಅಥವಾ ನೀರಾವರಿ ತಜ್ಞರುಗಳು, ಸಂಘ ಸಂಸ್ಥೆಗಳು ಯಾರಾದರೂ ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆಯೇ? ಎಂದು ನೋಡಿದರೆ ಸಮಗ್ರವಾದ ರಾಜ್ಯದ ನದಿ ಜೋಡಣೆ ಯೋಜನೆ ಇದೂವರೆಗೂ ರೂಪಿಸಿಲ್ಲ ಎಂದೇ ಹೇಳಬಹುದು.

 ಆದರೇ ರಾಜ್ಯದ ಅಲ್ಲಲ್ಲಿ ಕೆಲವು ನದಿಗಳನ್ನು ಜೋಡಣೆ ಮಾಡಿ ನೀರು ದೊರೆಯಲಿದೆ ಎಂದು ಹಲವಾರು ಜನ ಪರಿಕಲ್ಪನಾ ವರದಿಗಳನ್ನು ತಯಾರಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿವೆ. ಈ ವರದಿಗಳ ಬಗ್ಗೆ ರಾಜ್ಯ ಸರ್ಕಾರ ಯಾವುದಾದರೂ ಗಂಭೀರ ಚಿಂತನೆ ನಡೆಸಿದಿಯೇ?

 ಬಹುತೇಕ ಇಲ್ಲ ಎಂದೇ ಹೇಳಬಹುದು, ಕಾಟಚಾರಕ್ಕೆ ಕಡತ ಆರಂಭಿಸಿರ ಬಹುದು ಅಥವಾ ಯಾವುದೋ ಒಂದು ಒತ್ತಡಕ್ಕೆ ಸಿಲುಕಿ ಕೆಲವು ಯೋಜನೆ ರೂಪಿಸಿರಬಹುದು, ರೂಪಿಸಲು ಚಿಂತನೆ ನಡೆಸಿರ ಬಹುದು. ಸ್ಪಷ್ಟ ಮಾಹಿತಿ ನೀಡುವ ತಾಕತ್ತು ಸರ್ಕಾರದ ಯಾರ ಬಳಿಯೂ ಇಲ್ಲ ಎಂದರೆ ತಪ್ಪಾಗಲಾರದು.

 ಇದೂವರೆಗಿನ ಚಿಂತನೆಗೆ ಕಾರಣ ವಿವಿಧ ನದಿ ಪಾತ್ರಗಳ ವಿವಾದಗಳು ಕಾವೇರಿ ವಿವಾದ, ಕೃಷ್ಣಾ ವಿವಾದ, ಗೋದಾವರಿ ವಿವಾದ  ಹೀಗೆ ಮಾತೆತ್ತಿದರೆ ಪ್ರತಿಯೊಂದು ನದಿ ಪಾತ್ರಕ್ಕೂ ಒಂದೊಂದು ತರಹದ ತೊಡರುಗಳು. ಇದೂವರೆಗಿನ ನಮ್ಮ ಸರ್ಕಾರಗಳ ಬಾಯಿ ಮುಚ್ಚಿಸಿತ್ತು’

 ಪ್ರಸ್ತುತ ನಮ್ಮ ರಾಜ್ಯ ಸರ್ಕಾರದ ಚಿಂತನೆಗಳು ಬದಲಾಗಿವೆ, ರಾಜಕೀಯ ಪಕ್ಷಗಳ ಧೋರಣೆಗಳು ಬದಲಾಗಿವೆ, ನೀರಾವರಿ ತಜ್ಞರುಗಳ ಯೋಚನೆಗಳು ಬದಲಾಗಿವೆ, ಇವರೆಲ್ಲರ ಪರಿಕಲ್ಪನೆಗಳನ್ನು ಒಗ್ಗೂಡಿಸಿ ರೂಪಿಸುವ ಬೃಹತ್ ಯೋಜನೆಯೇ ರಾಜ್ಯದ ನದಿ ಜೋಡಣೆ’ ಯೋಜನೆ.

  ರಾಜ್ಯದ ನದಿ ಜೋಡಣೆ ಕನಸು ಇನ್ನೂ ಅಂಬೆಗಾಲು ಇಡುತ್ತಿದೆ. ಇದಕ್ಕೆ ಚುರುಕು ಮುಟ್ಟಿಸುವ ಕೆಲಸ ಆರಂಭವಾಗಬೇಕಿದೆ. ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ, ನೀರಾವರಿ ಕನಸುಗಾರರ ಸಮಾನ ಮನಸ್ಕರ ಫೋರಂ ಜನ್ಮ ತಾಳಬೇಕಿದೆ.

 ಈ ಫೋರಂ ರಾಜ್ಯದ, ದೇಶದ, ಅಂತರ ರಾಷ್ಟ್ರೀಯ ಮಟ್ಟದ ನೀರಾವರಿ ತಜ್ಞರುಗಳ ಅಭಿಪ್ರಾಯ ಪಡೆದು, ಎಲ್ಲರ ಚಿಂತನೆಗಳನ್ನು ಆಲಿಸಿ, ಪ್ರತಿ ಜಿಲ್ಲಾವಾರು ಜನತೆಯ, ನೀರಾವರಿ ಹೋರಾಟಗಾರರ, ಸ್ಥಳೀಯ ನೀರಾವರಿ ತಜ್ಞರುಗಳ ಮತ್ತು ರೈತರ ಸಲಹೆಗಳನ್ನು ಪಡೆದು ಹಾಲಿ ನೀರಿನ ಬಳಕೆಯನ್ನು ಪರಿಗಣಿಸಿ, ನೀರಿನ ಆಡಿಟ್, ನೀರಿನ ಆಯವ್ಯಯ ಮತ್ತು ನೀರಿನ ಸ್ಟ್ರಾಟಜಿ ರೂಪಿಸುವುದು ಅಗತ್ಯವಿದೆ.

 ಜೊತೆ, ಜೊತೆಯಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಗಮನವನ್ನು ಈ ಯೋಜನೆಯ ಕಡೆಗೆ ಹರಿಸುವಂತೆ ಮಾಡುವುದು ಪ್ರಮುಖವಾಗಿದೆ. ಇದು ನಿರಂತರವಾಗಿ ಸಾಗಬೇಕಿದೆ. ಒಂದೆರಡು ವರ್ಷದ ಕೆಲಸ ಅಲ್ಲ ಇದು. ಇಲ್ಲಿ ಪಕ್ಷ ರಾಜಕೀಯ, ಜಾತಿ ಬಂದರೆ ಇಡೀ ಯೋಜನೆಯೇ ಧ್ವಂಸವಾಗಲಿದೆ.

 ನಮ್ಮ ರಾಜ್ಯದ ಜಲಸಂಪನ್ಮೂಲ ಇಲಾಖೆ ಇಂತಹ ಒಂದು ಪರಿಕಲ್ಪನೆಗೆ ಈಗಾಗಲೇ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಂದ ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರಿಗೆ ಒಂದು ಪತ್ರ ಬರೆಸುವ ಮೂಲಕ ಚಾಲನೆ ನೀಡಿದೆ.

 ಈ ಪತ್ರದಲ್ಲಿರುವ ಅಂಶಗಳನ್ನೇ ಆಧಾರವಾಗಿಟ್ಟು ಕೊಂಡು ಚರ್ಚೆ ಆರಂಭಿಸಲು ಮೊಳಕೆ ಆರಂಭವಾಗಿದೆ. ಈ ಪ್ರಯತ್ನದ ಎಲ್ಲಾ ವಿವರವಾದ ಮಾಹಿತಿಯನ್ನು, ರಾಜ್ಯದ ನದಿ ಜೋಡಣೆ ಯೋಜನೆ ಸಾಗುವ ಹೆಜ್ಜೆ ಗುರುತುಗಳನ್ನು ತಮ್ಮ ಮುಂದಿಡುವ ಒಂದು ಸಣ್ಣ ಪ್ರಯತ್ನವನ್ನು ನಮ್ಮ ಸಂಸ್ಥೆ ಮಾಡಲಿದೆ. 

ಆಸಕ್ತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು.