14th July 2024
Share

TUMAKURU:SHAKTHIPEETA FOUNDATION

  ನಾನು ನಮ್ಮ ತಾತನ ಮನೆ ಉದ್ದೆಹೊಸಕೆರೆಗೆ ಹೋಗಿದ್ದೆ, ನಮ್ಮ ತಾತ ಅಂದರೆ ನಮ್ಮ ತಾಯಿಯ ತಂದೆ ದಿ.ಚಂದ್ರಹಳ್ಳಿ ರುದ್ರಣ್ಣನವರು ಕಾಯಕದಲ್ಲಿ ಒಬ್ಬ ತಪಸ್ವಿಯಾಗಿದ್ದರು. ನೂರಾರು ಜನರಿಗೆ ಅನ್ನಹಾಕಿದ ಮನೆ. ಬಡತನ ಎಂದರೆ ಅವರ ದುಡಿಮೆಯ ಪಾಲು ಗ್ಯಾರಂಟಿ, ಅವರ ಗರಡಿಯಲ್ಲಿ ಬೆಳೆದ ಪ್ರತಿಯೊಬ್ಬರೂ  ಈ ದಿನ ಉತ್ತಮ ಕೃಷಿಕರಾಗಿದ್ದಾರೆ, ಸುಸಂತ್ಕೃರೂ ಆಗಿದ್ದಾರೆ.

 ಅವರ ಸಮಾಧಿ ಬಳಿ ತೆರಳಿದಾಗ ನನಗೆ ಮೈಯಲ್ಲಾ ಒಂದು ತರಹ ಜುಂ ಎಂದಿತು. ಅವರ ಎಲ್ಲಾ ಜಮೀನುಗಳಿಗೆ ತೆರಳಿ ಗಮನಿಸಿದಾಗ ಅವರ ಮೊಮ್ಮಗನ ಕಾಯಕ ನಿಜಕ್ಕೂ ಅಜ್ಜನಿಗೆ ತೃಪ್ತಿ ತಂದಿದೆ. ಎಲ್ಲೂ ಸಹ ಒಂದಡಿ ಜಾಗವನ್ನು ವೇಸ್ಟ್ ಮಾಡಿಲ್ಲ, ಎಲ್ಲಾ ಕಡೆಯೂ ಮರಗಿಡಗಳು ರಾರಾಜಿಸುತ್ತಿವೆ.

 ಆದರೇ ಅಲ್ಲಿನ ಜನ ನಾನು 3 ನೇ ತರಗತಿ ಓದುವಾಗಲೂ ದಾರಿ ಕಟ್ಟುತ್ತಿದ್ದರೂ, ಈಗಲೂ ಅದೇ ಕೆಲಸ ಮುಂದುವರೆಸಿದ್ದಾರೆ. ಎಲ್ಲರೂ ಒಂದೇ ಕುಟುಂಬದಿಂದ, ಒಂದೇ ರಕ್ತದಿಂದ ಬೆಳೆದವರು, ಸರ್ಕಾರಿ ಕರಾಬುಹಳ್ಳವಿದ್ದರೂ ಅದರ ಪಕ್ಕ ಜಾಗವಿದ್ದರೂ ದಾರಿ ಮಾತ್ರ ಬಿಟ್ಟಿಲ್ಲ ಎಲ್ಲರೂ ತೋಟ ಮಾಡಿದ್ದಾರೆ. ತಲೆ ಮೇಲೆ ಒತ್ತುಹಾಕುತ್ತಿರುವ ವಿಷಯ ತಿಳಿಯಿತು.

 ನನ್ನ ಜೊತೆಯಲ್ಲಿದ್ದ ರೂಪೇಶ್‌ನಿಗೆ ಹೇಳಿದೆ, ನೀನೆ ಜವಾಬ್ಧಾರಿ ತೆಗೆದುಕೋ ಹಳ್ಳ ಅಭಿವೃದ್ಧಿ ಮತ್ತು ದಾರಿ ಮಾಡಿಸೋಣ. ಇದು ಒಂದು ದೇವರ ಕೆಲಸ, ಅಜ್ಜನ ಸಮಾಧಿಗೆ ಕೈಮುಗಿದು ಹೋದರೆ ಸಾಲದು ಎಂದೆ ಆತನು ಮನಸ್ಸು ಮಾಡಿದ್ದಾನೆ ಕಾದು ನೋಡೋಣ.

 ರಾತ್ರಿ ಮಲಗಿದಾಗ ಅಜ್ಜಕನಸಿನಲ್ಲಿ ಬಂದು ಯಾರ್‍ಯಾರು ಹೇಗಿದ್ದಾರೆ ಎಂದ ಹಾಗೆ ಆಯಿತು. ನನಗೆ ಆಗ ನೆನಪಿಗೆ ಬಂದ ಗಾದೆ ನಂಟು ಹೋಗದೆ ಹೋಯಿತು- ಗಂಟು ಕೇಳದೆ ಹೋಯಿತು’ ಬಹುತೇಕ ಸಂಬಂದಿಕರ ಊರುಗಳೆ ಮರೆತಿವೆ.

 ಮುದ್ದಪುರದ ಶಿವಣ್ಣನಿಗೆ ತಿಳಿಸಿ ಒಂದು ಹುಟ್ಟಿದ ಮಗುವಿನಿಂದ ಆರಂಭಿಸಿ, ಸುಮಾರು 7 ತಲೆಮಾರಿನವರಿಗೆ ಮಾಹಿತಿ ಕಲೆಹಾಕು, ಯಾರು ಸತ್ತಿದ್ದಾರೆ, ಬದುಕಿರುವವರು ಯಾರು, ಒಂದು ಅಧ್ಯಯನ ವರದಿ ಮಾಡಲೇ ಬೇಕು, ನಮ್ಮ ವಂಶದಲ್ಲಿ ಸಾಕಷ್ಟು ಬರವಣಿಗೆ ಮಾಡುವವರು ಇದ್ದಾರೆ, ಎಂದು ತಿಳಿಸಿದೆ ಆತ ಈಗಾಗಲೇ ಮಾಹಿತಿ ಸಂಗ್ರಹ ಮಾಡುವ ಕೆಲಸ ಆರಂಭಿಸಿದ್ದಾನೆ.

  ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು  ನಾನು ಸಿಟ್ಟು ಮಾಡಿಕೊಂಡಾಗ ಅವರು ಬಳಸುವ ಮಾತು ಸಾಗರನಹಳ್ಳಿ ವಂಶ’ ಅವರ ತಾತನ ಬುದ್ದಿ ಅನ್ನುವುದು ವಾಡಿಕೆ, ನಾನು ಆವಾಗ ಅವರಿಗೆ ಹೇಳುವ ಮಾತು ನಮ್ಮದು ಕಾವಲರ ವಂಶ, ನಮ್ಮ ಮನೆ ಮಗಳ ಮಗ ಸಾಗರನಹಳ್ಳಿ ರೇವಣ್ಣನವರು, ಅಂದ ಮೇಲೆ ನಾನು ಸಾಗರನಹಳ್ಳಿ ವಂಶದವನು ಅಲ್ಲ, ರೇವಣ್ಣವರು ಕುಂದರನಹಳ್ಳಿ ಕಾವಲರ ವಂಶ’ ದವರು ಎಂದು ತಮಾಷೆಯಾಗಿ ಹೇಳುತ್ತೇನೆ.

 ನಮ್ಮ ವಂಶದ ಅಧ್ಯಯನ ಆರಂಭವಾಗಿದೆ, ವಂಶದ ಎಲ್ಲರೂ ಸಹಕರಿಸಿ, ಜೊತೆಗೆ ಬರವಣಿಗೆ ಮಾಡುವವರು ಇದ್ದಾರೆ, ಸಂಭಂದಗಳ ಮಾಹಿತಿ ಜೊತೆಗೆ ಬಹುತೇಕ ಎಲ್ಲಾ ಬಹಳಷ್ಟು ಜನ ರೈತರು ಆಗಿರುವುದರಿಂದ ರೈತನ ಸಮಸ್ಯೆಗಳ ಕಡೆಗೆ ಗಮನ ಹರಿಸುವುದು ಸೂಕ್ತವಾಗಿದೆ.

 ಯಾರು ಯಾರ ಜಮೀನುಗಳಿಗೆ ದಾರಿ ಸಮಸ್ಯೆ ಇದೆ, ಅದರ ಕಡೆಗೆ ವಿಶೇಷ ಗಮನಕೊಡಲು ತಿಳಿಸಿದ್ದೇನೆ. ನಮ್ಮಲ್ಲಿ ಸಾಗರನಹಳ್ಳಿ ವಂಶ, ಚಂದ್ರಹಳ್ಳಿ ವಂಶ ಎಂದು ಕರೆದರೂ ಅವರೆಲ್ಲರ ಮೂಲ ಕುಂದರನಹಳ್ಳಿ ಕಾವಲರ ವಂಶ ಆದ್ದರಿಂದ ಇಲ್ಲಿಂದಲೇ ಬರವಣಿಗೆ ಶುರುವಾಗಿದೆ’

 ನಮ್ಮ ರಾಜೇಶ್ ಯಾವುದೋ ಊರಲ್ಲಿ ಅವನೇ ಜಮೀನು ಕೊಂಡು, ಒಂದು ತೋಟ ಮಾಡಲು ಆರಂಭಿಸಿದ್ದಾನೆ, ನಿಜಕ್ಕೂ ಅದು ರಾಜಕುಮಾರನ ಬಂಗಾರದ ಮನುಷ್ಯನ ಕಥೆ. ನಮ್ಮ ರೂಪೇಶ್ ಮತ್ತು ನಾನು ಅವನ ಸಹೋದ್ಯೋಗಿಗಳಾಗಿದ್ದೇವೆ.

ಜಮೀನಿನಲ್ಲಿ ಹಕ್ಕಿಪಕ್ಷಿಗಳ ಧ್ವನಿ ಕೇಳಿ, ಆತ ನಮಗೆ ಹೇಳಿದ್ದು ಇದಕ್ಕಿಂತ ನನಗೆ ಖುಷಿ ಬೇಕೆ. ನಮ್ಮ ಜಮೀನಿನಲ್ಲಿ ನೂರಾರು ಜಾತಿಯ ಮರಗಿಡಗಳು ಇವೆ, ಎಲ್ಲಾ ಜಾತಿಯ ಗಿಡಗಳ ಸಂಗ್ರಹ ಮಾಡಿಯೇ ತೀರುತ್ತೇನೆ ಎಂಬ ಛಲ ಅತನದ್ದಾಗಿದೆ. ಪಕ್ಷಿಗಳ ಸಂಕುಲದ ಕಲರವ ಆತನಿಗೆ ನೆಮ್ಮದಿ ತಂದಿದೆ. ಐಟಿ ಹುಡುಗರು ತಿಂದು ಕುಡಿದು ಕುಪ್ಪಳಿಸುತ್ತಾರೆ, ನಮ್ಮ ಐಟಿ ಹುಡುಗ ಪಕ್ಷಿಗಳಿಗೊಂದು ತೋಟ ಮಾಡಿದ್ದಾನೆ ಎಂದು ರೂಪೇಶ್ ನಗುತ್ತಿದ್ದ. ನಿಜಕ್ಕೂ ಆತನ ಕನಸು ಅದ್ಭುತವಾಗಲಿದೆ. ಇದು ಚಂದ್ರಹಳ್ಳಿ ರುದ್ರಣ್ಣನವರಿಗೆ ಪ್ರೀತಿಯಂತೂ ಆಗಿದೆ’

  ನಮ್ಮ ಕ್ಯಾಂಪಸ್‌ನಲ್ಲಿ ಕಾವಲರ ವಂಶದ ಪ್ರತಿಯೊಬ್ಬರ ಹೆಸರಿನಲ್ಲಿ ಒಂದು ಗಿಡ ಬೆಳೆಯುವ ಮೂಲಕ ಎಲ್ಲರ ನೆನಪು ಸದಾ ಇರುವಂತೆ ಮಾಡುವ ಪರಿಕಲ್ಪನೆಯೂ ಇದೆ. ಎಲ್ಲಾ ದ್ವೇಷ, ಅಸೂಯೇ ಮರೆತು ಒಗ್ಗಟ್ಟಾಗಿ ಹೋಗಲು ಸಾದ್ಯವೇ ಎಂಬ ಒಂದು ಸಣ್ಣ ಪ್ರಯತ್ನವೂ ಹೌದು.

  ಪಲಿತಾಂಶಕ್ಕೆ ಕಾಲವೇ ಉತ್ತರಿಸಬೇಕು? ಮುದ್ದಪುರದ ಶಿವಣ್ಣನಿಗೆ ಒಂದು ಕಾಯಕ, ಶನಿಮಹಾತ್ಮನ ಭಕ್ತ, ನಮ್ಮ ಶಕ್ತಿಪೀಠ ಕ್ಯಾಂಪಸ್‌ನಲ್ಲಿ ಶನಿಗ್ರಹದ ಪಕ್ಕ ಆತನ ಹೆಸರಿನಲ್ಲಿ ಗಿಡ ಬೆಳೆಸಲೇ ಬೇಕು? 

  ನಮ್ಮ ತಾಯಿ ಶ್ರೀಮತಿ ಪಾರ್ವತಮ್ಮನವರಿಗೆ ಈಗ 81 ವರ್ಷ, ಕೊರೊನಾ ಕಡಿಮೆ ಆದ ಮೇಲೆ ವಂಶದ ಎಲ್ಲಾ ಸದಸ್ಯರನ್ನು ಕರೆಯುವ ಆಸೆ ಅವರದ್ದಾಗಿದೆ. ಅಂದೇ ಈ ಕಿರುಹೊತ್ತಿಗೆ ಬಿಡುಗಡೆ ಮಾಡುವ ಕನಸು ಇದೆ. ನಾನು ನಮ್ಮ ವಂಶದ ಯಾರಿಗೂ ನೀವೇ ಬರೆಯಿರಿ ಎಂದು ಹೇಳುವುದಿಲ್ಲ, ಬರೆಯುವವರು ತಾವೇ ಮುಂದೆ ಬಂದರೆ ಒಳ್ಳೆಯದು ಎಲ್ಲರ ಗಮನಕ್ಕೂ ತರುವುದು ಶಿವಣ್ಣನ ಕಲ್ಪನೆ.