16th April 2024
Share

TUMAKURU:SHAKTHIPEETA FOUNDATION

ತುಮಕೂರು ಇಂಡಸ್ಟ್ರಿಯಲ್ ನೋಡ್ ದೇಶದ ಗಮನ ಸೆಳೆದಿದೆ. ಮೊದಲನೇ ಮೂರು ಹಂತದಲ್ಲಿ ಈಗಾಗಲೇ ಸುಮಾರು 3880.36 ಎಕರೆ ಪ್ರದೇಶದಲ್ಲಿ ವಸಂತನರಸಾಪುರ ಕೈಗಾರಿಕಾ ವಲಯ ಅಸ್ಥಿತ್ವಕ್ಕೆ ಬಂದಿದೆ. ಇನ್ನೂ 8484.15 ಎಕರೆ ಪ್ರದೇಶ ತುಮಕೂರು ಇಂಡಸ್ಟ್ರಿಯಲ್ ನೋಡ್‌ಗಾಗಿ ನೋಟಿಫೈ ಆಗಿದೆ. ಆದರೇ ಇದೂವರೆಗೂ ಅಗತ್ಯವಿರುವ ನದಿ ನೀರು ನೀಡಲು ಆದೇಶ ಹೊರಬಂದಿಲ್ಲ.

ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸಾಕಷ್ಟು ಇದೆ. ಇವುಗಳ ಪರಿಹಾರಕ್ಕೆ ವಿಶೇಷ ಗಮನ ಹರಿಸಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರಿಗೆ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಶಿವಶಂಕರ್, ಕಾರ್ಯದರ್ಶಿ ಶ್ರೀ ಹರೀಶ್, ಪದಾಧಿಕಾರಿಗಳಾದ ಶ್ರೀ ಸತ್ಯನಾರಾಯಣ್ ಇನ್ನೂ ಮುಂತಾದವರು ಮನವಿ ಸಲ್ಲಿಸಿದರು.

ಜಿ.ಎಸ್.ಬಸವರಾಜ್‌ರವರು ಮಾತನಾಡಿ ಹಿಂದಿನ ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಇದೂವರೆಗೂ ಆಗಿರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ವಿವರವಾದ ವರದಿಯನ್ನು ಪ್ರತಿಯೊಂದು ಇಲಾಖೆಯವರು, ಪ್ರತಿಯೊಂದು ಯೋಜನೆಯ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿದೆ.

ತುಮಕೂರು ಜಿಲ್ಲೆ ದೇಶದಲ್ಲಿಯೇ ಅಭಿವೃದ್ಧಿ ಹೊಂದಿದ ಜಿಲ್ಲೆ ಆಗಬೇಕಾದಲ್ಲಿ ಸಾವಿರಾರು ಜನ ಶ್ರಮಿಸಬೇಕಿದೆ. ನಿಮ್ಮಂಥಹ ಸಂಘಸಂಸ್ಥೆಗಳ ಪಾತ್ರ ಬಹಳ ಮುಖ್ಯ. ಏಕೆಂದರೆ ಪ್ರತಿಯೊಂದು ಸಂಘಸಂಸ್ಥೆಗಳು ಆಯಾ ಉದ್ದೇಶದ ಬಗ್ಗೆ ಒಂದೊಂದು ಪಿಹೆಚ್‌ಡಿ ಮಾಡಿದಷ್ಟು ಅಧ್ಯಯನ ಮಾಡುತ್ತಾರೆ.

ನೀವೂ ನೀಡಿರುವ ಮನವಿಯಲ್ಲಿನ ಎಲ್ಲಾ ಅಂಶಗಳ ಬಗ್ಗೆ ಗಮನಹರಿಸುವುದಾಗಿ ಭರವಸೆ ನೀಡಿದರು. ಈಗಾಗಲೇ ಹಲವಾರು ಯೋಜನೆಗಳ ಬಗ್ಗೆ ಹಲವಾರು ಸಭೆಗಳನ್ನು ನಡೆಸಲಾಗಿದೆ. ಶೀಘ್ರದಲ್ಲಿ ತುಮಕೂರು ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸುವ ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಈ ಹಿನ್ನಲೆಯಲ್ಲಿ ತುಮಕೂರು ಇನ್‌ವೆಸ್ಟ್‌ಮೆಂಟ್ ವರದಿ ತಯಾರಿಸಲು ಕ್ರಮಕೈಗೊಳ್ಳಲಾಗಿದೆ. ಈ ವರದಿ ಪೂರ್ಣಗೊಳ್ಳುವ ಮೊದಲು ಎಲ್ಲರ ಅಭಿಪ್ರಾಯ ಸಂಗ್ರಹಣೆಯೂ ಮುಖ್ಯವಾಗಿದೆ. ಕೇಂದ್ರ ಸರ್ಕಾರದ ತುಮಕೂರು ಇಂಡಸ್ಟ್ರಿಯಲ್ ನೋಡ್, ಒಂದು ಜಿಲ್ಲೆ ಒಂದು ಉತ್ಪನ್ನ, ರಫ್ತು ಹಬ್, ಹೀಗೆ ಹಲವಾರು ಯೋಜನೆಗಳ ಬಗ್ಗೆ ಒಂದು ವಿಚಾರ ಸಂಕಿರಣ ನಡೆಸಲಾಗುವುದು.

ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಾಣವಾಗುತ್ತಿರುವ ಇನ್‌ಕ್ಯುಬೇಷನ್ ಸೆಂಟರ್, ಈ ಎಲ್ಲಾ ಚಟುವಟಿಕೆಗಳ ಕೇಂದ್ರ ಬಿಂದುವಿನಂತೆ ಕಾರ್ಯ ನಿರ್ವಹಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಲು ತುಮಕೂರು ಸ್ಮಾರ್ಟ್ ಸಿಟಿ ಅಡ್ವೇಸರಿ ಫೋರಂ ಸಭೆಯಲ್ಲಿ ಈಗಾಗಲೇ ನಿರ್ಣಯ ಮಾಡಲಾಗಿದೆ.

ತಾವೂ ಸಹ ಈ ಬಗ್ಗೆ ಸಹಕರಿಸಲು  ಸಲಹೆ ನೀಡಿದರು. ಜನವರಿ ತಿಂಗಳ ಕೊನೆಯ ವಾರದಲ್ಲಿ ವಿಚಾರ ಸಂಕಿರಣ ನಡೆಸಲು ಸಮಾಲೋಚನೆ ನಡೆಸಿದ್ದಾರೆ. ಈ ಬಗ್ಗೆ ಪೂರ್ವಭಾವಿ ಸಭೆ ನಡೆಸಲು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಶ್ರೀ ನಾಗೇಶ್‌ರವರಿಗೆ ತಿಳಿಸಲು ಆಪ್ತ ಸಹಾಯಕ ಉಮಾಶಂಕರ್‌ರವರಿಗೆ  ತಿಳಿಸಿದರು.

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯರಾದ ಕುಂದರನಹಳ್ಳಿ ರಮೇಶ್, ಪಾವಗಡ ಶಿವಪ್ರಸಾದ್, ಗುರುಸಿದ್ಧಪ್ಪ, ಶಿವರುದ್ರಯ್ಯ, ವೀರಭಧ್ರಯ್ಯ, ಕುಮಾರ್ ಇನ್ನೂ ಮುಂತಾದವರು ಇದ್ದರು.