12th September 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯ ನಗರ ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿರುವ ಸುಮಾರು 15000 (NRLM & NULM) ಸಂಘಗಳ ಸದಸ್ಯರಾದ ಸುಮಾರು  ಎರಡು ಲಕ್ಷ ಮಹಿಳೆಯರು, ತುಮಕೂರು ನಗರದಲ್ಲಿ  ಮಹಿಳೆಯರು ಉತ್ಪಾದನೆ ಮಾಡುವ ಉತ್ಪನ್ನಗಳ ಮಾರಾಟಕ್ಕೆ  ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ಒಂದು ಮಾಲ್’ ಅಥವಾ ಒಂದು ಉತ್ಪನ್ನ-ಒಂದು ಜಿಲ್ಲೆ ಮಾರಾಟ ಮಳಿಗೆ’ ನಿರ್ಮಾಣ ಮಾಡುವ ಮೂಲಕ ಉಧ್ಯಮಿ ಮಹಿಳೆಯರ ಧ್ವನಿಯಾಗಲು ಮನವಿ ಸಲ್ಲಿಸಿದ್ದರು.

  ಮಹಿಳಾ ಉಧ್ಯಮಿಗಳ ಮನವಿ ಬಹಳ ತಡವಾಯಿತು. ಆರಂಭದಲ್ಲಿಯೇ ಮನವಿ ನೀಡಿದ್ದರೆ ಬಹಳ ಚೆನ್ನಾಗಿತ್ತು. ಆದರೂ ನಾರಿಶಕ್ತಿ ಮನವಿಗೆ ಸ್ಪಂಧಿಸಲೇ ಬೇಕಾಗುತ್ತದೆ. ಏಕೆಂದರೆ ತುಮಕೂರು ಸ್ಮಾರ್ಟ್ ಸಿಟಿ ಅನುದಾನ ಸಂಪೂರ್ಣ ಬಳಕೆಯಾಗಲು ರೆಡಿಯಾಗಿದೆ. ಯೋಜನೆಯೇ ಮುಕ್ತಾಯ ಹಂತದಲ್ಲಿದೆ.

ಈಗ ಅಳಿದು ಉಳಿದ ಹಣದಲ್ಲಿ ತುಮಕೂರು ಸ್ಮಾರ್ಟ್ ಸಿಟಿ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಮಾಲ್ ನಿರ್ಮಾಣ ಮಾಡುವ ಮೂಲಕ ದೇಶಕ್ಕೆ ಮಾದರಿಯಾಗಲು ದಿನಾಂಕ:22.01.2021 ರಂದು ನಡೆದ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ನಿರ್ಣಯಕೈಗೊಳ್ಳಲಾಗಿದೆ.

ಮಹಿಳಾ ಸಂಘಟನೆಗಳ ಪದಾಧಿಕಾರಿಗಳೇ ಒಂದು ಉತ್ತಮವಾದ ಸ್ಥಳವನ್ನು ಆಯ್ಕೆ ಮಾಡಿದ್ದಾರೆ. ತುಮಕೂರು ಜಿಲ್ಲಾ ಪಂಚಾಯತ್ ಆವರಣದಲ್ಲಿ ಸುಮಾರು 9447.62  ಚದುರ ಅಡಿ ನಿವೇಶನ ಬಿ.ಹೆಚ್.ರಸ್ತೆಗೆ ಹೊಂದಿಕೊಂಡಂತೆ ಪಾಳು ಬಿದ್ದಿದೆ. ರಸ್ತೆಯ ಕಡೆ ಕೇವಲ 953 ಚದುರ ಅಡಿ ವಿಸ್ತೀರ್ಣದ ಕಟ್ಟಡ ಮಾತ್ರ ಇದೆ ನಕ್ಷೆ ಗಮನಿಸಿ.

ಈ ಜಾಗದಲ್ಲಿ ತುಮಕೂರು ಜಿಲ್ಲಾ ಪಂಚಾಯತ್ ಮಾಲೀಕತ್ವದಲ್ಲಿಯೇ ಮಾಲ್ ನಿರ್ಮಾಣ ಮಾಡಲು   ತುಮಕೂರು ಜಿಲ್ಲಾ ಪಂಚಾಯತ್‌ನಿಂದ ತುಮಕೂರು ಸ್ಮಾರ್ಟ್ ಸಿಟಿಗೆ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೊಳಿಸಲು ಪ್ರಸ್ತಾವನೆ ಸಲ್ಲಿಸುವುದು ಅಗತ್ಯವಾಗಿದೆ. 

 ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ವಿಶೇಷ ಆಸಕ್ತಿ ವಹಿಸಿ, ಮಹಿಳೆಯರ ಈ ಮನವಿಗೆ ಸ್ಪಂಧಿಸಿ ತುಮಕೂರು ಸ್ಮಾರ್ಟ್ ಸಿಟಿಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಪಂಚಾಯತ್ ಸಿಇಓ ರವರಿಗೆ ಸೂಚಿಸಿದರು. ತುಮಕೂರು ಸ್ಮಾರ್ಟ್ ಸಿಟಿ ಎಂಡಿಯವರಾದ ಶ್ರೀ ರಂಗಸ್ವಾಮಿರವರು ಪ್ರಸ್ತಾವನೆ ಬಂದ ನಂತರ ಕಂಪನಿ ಸಭೆಯಲ್ಲಿ ಮಂಡಿಸಿ ನಂತರ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಉತ್ತರಿಸಿದ್ದಾರೆ. 

ಈ ಪ್ರಸ್ತಾವನೆಗೆ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ರವರು ವಿಶೇಷ ಆಸಕ್ತಿವಹಿಸುವ ಮೂಲಕ ಜಿಲ್ಲೆಯ ಎರಡು ಲಕ್ಷ ಮಹಿಳಾ ಉಧ್ಯಮಿಗಳು ತಮ್ಮ ಮನೆಯಲ್ಲಿ ತಯಾರಿಸುವ ಉತ್ತಮ ಗುಣ ಮಟ್ಟದ ಪದರ್ಥಾಗಳು, ನಗರದ ಮಹಿಳೆಯರಿಗೆ ನೇರವಾಗಿ ತಲುಪಲು ಒಂದು  ಫ್ಲಾಟ್ ಫಾರಂ ರೂಪಿಸಲು ಶ್ರಮಿಸಬೇಕಿದೆ. ಜೊತೆಗೆ ಇದೇ ಕೇಂದ್ರದಲ್ಲಿ ಮಹಿಳೆಯರು ತಯಾರಿಸುವ ಉತ್ಪನ್ನಗನ್ನು ರಫ್ತು ಮಾಡಲು ವಿಶೇಷ ವ್ಯವಸ್ಥೆ ಮಾಡಲು ಚಿಂತನೆ ನಡೆದಿದೆ.

 ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಶ್ರೀ ಮೋಹನ್ ಕುಮಾರ್‌ರವರು ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶ್ರೀಮತಿ ಶುಭರವರು ಹಾಗೂ ಸಂಭಂಧಿಸಿದ ಅಧಿಕಾರಿಗಳು ಮತ್ತು ಸಂಜೀವಿನಿ ಮಹಿಳಾ ಸಂಘಗಳ ಪ್ರತಿನಿಧಿಗಳು ಸಭೆ ಸೇರಿ ಯೋಜನೆಯ ರೂಪುರೇಷೆ ನಿರ್ಧರಿಸಲು ಸಂಸದರು ಸೂಚಿಸಿದ್ದಾರೆ.