23rd June 2024
Share

TUMAKURU:SHAKTHIPEETA FOUNDATION

ಕಾಂಗ್ರೆಸ್ ನವರು ಮೇಕೆದಾಟು ಹಿಡಿದುಕೊಂಡು ಪಾದಯಾತ್ರೆ ಆರಂಭಿಸಿದ್ದಾರೆ. ಜೆಡಿಎಸ್ ನವರು ಜಲಧಾರೆ ಘೋಷಣೆ ಮಾಡಿ ಜನವರಿ 26 ರಂದು ರಾಜ್ಯದ ಸಮಗ್ರ ನೀರಾವರಿ ಯೋಜನೆಗಳನ್ನು ಘೋಷಣೆ ಮಾಡುತ್ತಾರಂತೆ.

ಆದರೇ ಬಿಜೆಪಿ ಪಕ್ಷದ ಮತ್ತು ಅವರ ಸರ್ಕಾರದ ಅಜೆಂಡಾವನ್ನು ರಾಜ್ಯದ ಜನತೆಯ ಮುಂದೆ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳೀನ್ ಕುಮಾರ್ ಸ್ಪಷ್ಟ ಪಡಿಸುವುದು ಅನಿವಾರ್ಯವಾಗಿದೆ.

ಬೊಮ್ಮಾಯಿರವರು ಸ್ವತಃ ನೀರಾವರಿ ತಜ್ಞರಾಗಿದ್ದಾರೆ. ಜೊತೆಗೆ ನೀರಾವರಿ ಹೋರಾಟ ಮಾಡಿದ್ದಾರೆ, ಈಗ ಅವರ ಕೈಯಲ್ಲಿ ಅಧಿಕಾರ ಇದೆ. ಈಗ ಅವರು ರಾಜ್ಯದ ಸಮಗ್ರ ನೀರಾವರಿ ಅಭಿವೃದ್ಧಿ ಬಗ್ಗೆ ಜಲಗ್ರಂಥ ಘೋಷಣೆ ಮಾಡಲೇಬೇಕಿದೆ. ಇಲ್ಲದೆ ಇದ್ದಲ್ಲಿ ಗಂಗಾಮಾತೆ ಅವರನ್ನು ಎಂದಿಗೂ  ಕ್ಷಮಿಸುವುದಿಲ್ಲ ಎಂಬ ಅರಿವು ಅವರಿಗೂ ಇದೆ.

ಒಂದೊಂದು ಹನಿ ನೀರಿನ ಬಳಕೆ ಬಗ್ಗೆ, ರಾಜ್ಯದ ಪ್ರತಿಯೊಂದು ಗ್ರಾಮಗಳಿಗೂ ಸಾಮಾಜಿಕ ನ್ಯಾಯದಡಿ ನದಿ ನೀರನ್ನು ಹಂಚಬೇಕಿದೆ. ಎಲ್ಲರಿಗೂ ಗೊತ್ತು ರಾಜ್ಯದ ಹಣಕಾಸು ಪರಿಸ್ಥಿತಿ, ನೀರಾವರಿ ಇಲಾಖೆಯಲ್ಲಿಯೇ ಸುಮಾರು ರೂ 1.25 ಲಕ್ಷದ ಯೋಜನೆ ಪ್ರಗತಿಯಲ್ಲಿದೆ. ಕೇಂದ್ರ ಸರ್ಕಾರ ನೀರಾವರಿ ಯೋಜನೆಗಳಿಗೆ ರಾಜ್ಯ ಬಿಜೆಪಿಯವರ ನಿರೀಕ್ಷೆಯಷ್ಟು ಸ್ಪಂದಿಸುತ್ತಿಲ್ಲ.

ಆದರೇ ರಾಜ್ಯದ ಪ್ರತಿಯೊಂದು ಗ್ರಾಮಕ್ಕೂ ನದಿ ನೀರಿನ ಹಂಚಿಕೆ ಮಾಡಿ, ಎಲ್ಲೆಲ್ಲಿ ಡ್ಯಾಂಗಳ ನಿರ್ಮಾಣ ಮಾಡಲಾಗುವುದು ಎಂಬ ಅಧಿಕೃತ ಗೆಜಿಟ್ ನೋಟಿಫೀಕೇಷನ್ ಮಾಡಲು ಯಾವ ತೊಂದರೆಯೂ ಇಲ್ಲ. ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದೆ, ಆದರೇ ಇದೂವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಕೊರಗು ಸ್ವತಃ ಮುಖ್ಯಮಂತ್ರಿಯವರಿಗೂ ಇರಬಹುದು.

ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು, ಶ್ರೀ ಬಸವರಾಜ್ ಬೊಮ್ಮಾಯಿರವರು, ಜಲಸಂಪನ್ಮೂಲ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರು, ಸಣ್ಣ ನೀರಾವರಿ ಸಚಿವರು, ಮುಖ್ಯ ಕಾರ್ಯದರ್ಶಿಯವರು, ಜಲಸಂಪನ್ಮೂಲ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯವರು, ಗ್ರಾಮೀಣಾಭಿವೃದ್ಧಿ ಪ್ರಧಾನ ಕಾರ್ಯದರ್ಶಿಯವರು ಮತ್ತು ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿಯವರು ಕೇಂದ್ರ ಸರ್ಕಾರಕ್ಕೆ  ಬರೆದ ಪತ್ರಗಳಿಗೆ ಕೇಂದ್ರದಿಂದ ಸಕಾರಾತ್ಮಕ ಉತ್ತರ ಇಲ್ಲ ಎಂದರೆ ಅತಿಶಯೋಕ್ತಿ ಆಗಲಾರದು.

ನ್ಯಾಷನಲ್ ಇನ್ಪ್ರಾಸ್ಟ್ರಚ್ಚರ್ ಪೈಪ್ ಲೈನ್ ಯೋಜನೆಯ ಪ್ರಯೋಜನ ಏನು ಎಂಬ ಬಗ್ಗೆ ಸ್ಪಷ್ಟ ಪಡಿಸಬೇಕಿದೆ. ನಮ್ಮ ರಾಜ್ಯ ಸರ್ಕಾರ ಈ ಯೋಜನೆಯಡಿ ಸುಮಾರು ರೂ 2.5 ಲಕ್ಷಕೋಟಿ ವೆಚ್ಚದ ನೀರಾವರಿ ಯೋಜನೆಗಳನ್ನು ಸೇರ್ಪಡೆ ಮಾಡಿದೆ.

‘ಕೇಂದ್ರ ಸರ್ಕಾರ ಪ್ರತಿನಿಧಿಸುವ ರಾಜ್ಯದ ಸಚಿವರುಗಳಾದ ಶ್ರೀಮತಿ ನಿರ್ಮಲಾ ಸೀತಾರಾಂರವರು, ಶ್ರೀ ಪ್ರಹ್ಲಾದ್ ಜೋಷಿಯವರು, ಶ್ರೀಭಗವಂತ ಖ್ಯೂಬಾರವರು, ಶ್ರೀ ನಾರಾಯಣಸ್ವಾಮಿರವರು, ಶ್ರೀಮತಿ ಶೋಭಾ ಕರಂದ್ಲಾಜೆರವರು, ಶ್ರೀ ರಾಜೀವ್ ಚಂದ್ರಶೇಖರ್ ರವರು ಮತ್ತು ಬಿಜೆಪಿ ಪಕ್ಷದ ಪ್ರಮುಖರು ಹಾಗೂ ಮುಖ್ಯಮಂತ್ರಿ ಕನಸುಗಾರರಾದ ಶ್ರೀ ಬಿ.ಎಲ್ ಸಂತೋಷ್ ರವರು ಈ ಬಗ್ಗೆ ವಿಶೇಷ ಗಮನ ಹರಿಸಬೇಕಿದೆ.’

ಮೋದಿಜಿ ಅವರ ಬಳಿ ಸ್ವತಃ ಚರ್ಚೆ ಮಾಡಿದರೆ ರಾಜ್ಯಕ್ಕೆ ನ್ಯಾಯ ದೊರೆಯಬಹುದು ಎಂಬ ಆಶಾಭಾವನೆ ರಾಜ್ಯದ ಜನರಿಗೆ ಇದೆ .

ನೀರಾವರಿ ಯೋಜನೆಗಳಿಗಾಗಿಯೇ ವಿಶೇಷ ವಿಧಾನ ಸಭೆ ಅಧಿವೇಶನ ಕರೆದು, 31 ಜಿಲ್ಲಾವಾರು, 224 ವಿಧಾನಸಭಾ ಕ್ಷೇತ್ರವಾರು ಸಮಗ್ರ ಚರ್ಚೆ ಮಾಡಿ ಎಲ್ಲರ ಅಭಿಪ್ರಾಯ ಕ್ರೋಡೀಕರಿಸಿ ಒಂದು ನಿರ್ಧಾರಕ್ಕೆ ಬರುವರೇ ಅಥವಾ ಮುಂದಿನ ಚುನಾವಣೆ ಪ್ರಣಾಳಿಕೆಯಲ್ಲಿ ಕನ್ನಡಿಯೊಳಗಿನ ಗಂಟು ತೋರಿಸುವರೇ ಕಾದು ನೋಡಬೇಕು?