TUMAKURU:SHAKTHIPEETA FOUNDATION
ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ಆಯುಕ್ತರಾದ ಶ್ರೀಮತಿ ರೋಹಿಣಿ ಸಿಂಧೂರಿ ರವರೊಂದಿಗೆ ಶಕ್ತಿಪೀಠ ಥೀಮ್ ಪಾರ್ಕ್ ಬಗ್ಗೆ ಸಮಾಲೋಚನೆ ನಡೆಸಿದಾಗ ಅವರು ಹೇಳಿದ ಒಂದು ಮಾತು ‘ಶಕ್ತಿಪೀಠ ಥೀಮ್ ಪಾರ್ಕ್ ಸಾಹಸದ ಕೆಲಸ’ ಹೌದು ನಿಜಕ್ಕೂ ಆಳ ಉದ್ದ ಹರಿಯದೇ ಈ ಸಾಹಸ ಕಾರ್ಯದಲ್ಲಿ ತೊಡಗಿಸಿಕೊಂಡು ಕಷ್ಟಕರವಾದರೂ ಎಂಜಾಯ್ ಮಾಡುತ್ತಿದ್ದೇನೆ.
ನಾವು ಹುಟ್ಟುವಾಗ ಬರೀ ಕೈಯಲ್ಲಿ ಬರುತ್ತೇವೆ, ಅದು ನಮಗೆ ಗೊತ್ತಿರುವುದಿಲ್ಲ. ಸಾಯುವಾಗಲೂ ಎಲ್ಲವನ್ನೂ ಬಿಟ್ಟು ಹೋಗುತ್ತೇವೆ, ಅದು ನಮಗೆ ತಿಳಿಯುತ್ತದೆ. ಆದರೂ ‘ದೇವರು ಹುಟ್ಟುವಾಗಲೇ ರಿಟರ್ನ್ ಟಿಕೆಟ್ ಕೊಟ್ಟೇ’ ಕಳುಹಿಸಿದ್ದಾನೆ. ಎರಡು ಮಾತಿಲ್ಲ. ಮಧ್ಯೆ ಇರುವ ಸಮಯದಲ್ಲಿ ಈ ಪುಣ್ಯದ ಕೆಲಸ ಮಾಡಲು ತಾಯಿ ನನಗೆ ಸೂಚಿಸಿರುವುದು ಬಹಳ ತೃಪ್ತಿ ತಂದಿದೆ.
ತುಮಕೂರಿನ ಕಸ್ತೂರು ಬಾ ನರ್ಸಿಂಗ್ ಹೋಮ್ ನಮ್ಮ ಕುಟುಂಬದ ಡಾಕ್ಟರ್ ಶ್ರೀ ದುರ್ಗಾದಾಸ್ ಅಸ್ರಣ್ಣರವರದ್ದು. ನಮ್ಮ ತಾಯಿ ಪಾರು ನಮ್ಮನ್ನು ಬಿಟ್ಟು ಹೋಗುವ ಕಾಲ ಬಹಳ ಹತ್ತಿರದಲ್ಲಿ ಇತ್ತು. ಬಹುತೇಕ ಅವರಿಗೂ ತಿಳಿದಿತ್ತು ಎನಿಸುತ್ತಿದೆ. ನರ್ಸಿಂಗ್ ಹೋಂನಲ್ಲಿ ಮಲಗಿದ್ದವರು ಎದ್ದು ಕುಳಿತರು ಎಲ್ಲಿ ಶಕ್ತಿಪೀಠ ತೋರಿಸು ಎಂದರು,
ನಾನು ಮೊಬೈಲ್ನಲ್ಲಿ ಶಕ್ತಿದೇವತೆಯ ಚಿತ್ರ ತೋರಿಸಿದಾಗ ಬೇಗ ಓಪನ್ ಮಾಡಲು ಆಗುವುದಿಲ್ಲವಾ, ನಾನು ನೋಡಿ ಸಾಯಬೇಕು ಅನ್ನಿಸುತ್ತಿದೆ ಎಂದರು. ನಾನು ಮೌನಿಯಾದೆ, ನಡೀ ಮನೆಗೆ ಹೋಗು ಸ್ನಾನ ಮಾಡಿ ಶಕ್ತಿಪೀಠ ಪೂಜೆ ಮಾಡು ಎಂದರು, ರಾತ್ರಿ 9 ಗಂಟೆಯಾಗುತ್ತಾ ಬಂದಿತ್ತು. ನಮ್ಮ ತಾಯಿಯವರ ನೆಚ್ಚಿನ ಡಾಕ್ಟರ್ ಶ್ರೀ ಸಿದ್ದೇಶ್ವರ್ ಸ್ವಾಮಿರವರು ಈಗ ಬರುತ್ತಾರೆ, ಅವರು ಬಂದ ನಂತರ ಮನೆ ಹೋಗೋಣ ಎಂದು ಸಮಾಧಾನ ಪಡಿಸಿದೆ.
ಡಾಕ್ಟರ್ ಬಂದು ನೋಡಿದ ನಂತರ ನಾನು ಮನೆಗೆ ಕರೆದುಕೊಂಡು ಬಂದು ಸ್ನಾನ ಮಾಡಿ ಪೂಜೆ ಮಾಡಿ, ದೇವಿ ಪುಸ್ತಕ ಓದಿ, ಅಜ್ಜಿಯ ಜೊತೆ ಮಾತನಾಡಲು ಆರಂಭಿಸಿದಾಗ ಸುಮಾರು ರಾತ್ರಿ 12 ಗಂಟೆ ಸಮಯ.
ದೇವಿಯ ಕೆಲಸ ಹುಡುಗಾಟವಲ್ಲ, ಆದರೂ ನೀನು ಸಣ್ಣವನಿದ್ದಾಗಿನಿಂದ ಪೂಜಿಸುತ್ತಾ ಬಂದಿದ್ದೀಯಾ, ಊರಿನಲ್ಲಿ ಗಂಗಮಲ್ಲಮ್ಮ ದೇವಾಲಯ ಪೂರ್ಣಗೊಳಿಸಬೇಕು, ಶಕ್ತಿಪೀಠ ಕೆಲಸ ಪೂರ್ಣಗೊಳಿಸಬೇಕು. ಸೋನಿ (ನನ್ನ ಮಗ ಚಿ.ಕೆ.ಆರ್.ಸೋಹನ್) ಮತ್ತು ಮುನ್ನಿಗೆ (ನನ್ನ ಮಗಳು ಶ್ರೀಮತಿ ಇಂಚರ) ಶಕ್ತಿಪೀಠ ದ ಬಗ್ಗೆ ಇಷ್ಟ ಇದೆಯಾ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಲು ಆರಂಭಿಸಿದರು.
ನಾನು ಯಾಕಜ್ಜಿ ನೀನೆ ಶಕ್ತಿಪೀಠವನ್ನು ಅದೆಲ್ಲೋ ಹಿರಿಯೂರಿನಲ್ಲಿ ಮಾಡುತ್ತಾನಂತೆ, ನಮ್ಮ ಊರಿನಲ್ಲಿ ಮಾಡದೇ ಎಂದು ಬೈಯುತ್ತಿದ್ದೆ, ಎಂದಾಗ ಅವರು ಹೇಳಿದ್ದು ಮೊದ, ಮೊದಲು ನನಗೆ ಹಾಗೆ ಅನ್ನಿಸಿತ್ತು. ನಂತರ ನಾನು ಬಂದು ಆ ಸ್ಥಳ ನೋಡಿದಾಗ ನನಗೆ ಖುಷಿಯಾಗಿದೆ. ಎಷ್ಟೇ ಕಷ್ಟವಾದರೂ ಮಾಡಪ್ಪ ಎಂದು ಹಾರೈಸಿದರು. ನಿಜಕ್ಕೂ ನನಗೆ ಆದ ತೃಪ್ತಿ ಅಷ್ಟಿಷ್ಟಲ್ಲ.
ನಾನು ಅವರಿಗೆ ಹೇಳಿದೆ ಇನ್ನೂ ಒಂದು ಪರ್ಸೆಂಟ್ ಕೆಲಸ ಆಗಿಲ್ಲ. ಮೊದಲು ಎಲ್ಲಾ 108 ಶಕ್ತಿಪೀಠಗಳಿಗೂ ಬೇಟಿ ನೀಡಬೇಕು, ಎಂದಾಗ ನಾನು ಬರಬೇಕು ಅಂದುಕೊಂಡಿದ್ದೆ, ಆ ಕೊರೊನಾ ಹಾಳು ಮಾಡಿತು. ಈಗ ಬರಲು ನನಗೆ ಶಕ್ತಿ ಇಲ್ಲ, ಆಗಲ್ಲ, ಹೋಗುವಾಗ ಅಮ್ಮಯ್ಯನನ್ನು (ಸೊಸೆ ಶ್ರೀಮತಿ ಸುಜಾತ ಕುಮಾರಿ) ಕರೆಕೊಂಡು ಹೋಗು, ‘ತಾಯಿ ಬದುಕಿಸಿದರೆ ನಾನು ಮನೆಯಲ್ಲಿ ಇರುತ್ತೇನೆ. ಸಾಯಿಸಿದರೆ ಇನ್ನೇನು ಮಾಡೋಕೆ ಆಗಲ್ಲ ಎಂದಾಗ ಕರಳು ಕಿತ್ತು’ ಬಂತು.
ನಮ್ಮ ಹಟ್ಟಿ ಶ್ರೀ ಸಿದ್ಧಯ್ಯನವರು ಅಜ್ಜಿ ಸಾಯುವಾಗ ಏನಾದರೂ ಹೇಳಿದರಾ ಸ್ವಾಮಿ ಎಂದರು, ಸುಮಾರು 40 ವರ್ಷ ಅಜ್ಜಿ ಮಾಡಿದ, ನಾನು ತಿಂದ ಊಟ/ತಿಂಡಿ ತಿಂದು ನಮ್ಮ ತೋಟದ ಕೆಲಸ ಮಾಡಿದವರ ಮಾತು. ಒಂದು ಕಾಲದಲ್ಲಿ ಕೆಲವರಿಗೆ ತಂಗಳು ತಿಂಡಿ/ಊಟ ಅಥವಾ ಅವರಿಗೆ ಬೇರೆ, ಮನೆಯವರಿಗೆ ಬೇರೆ ಹಾಕುವ ಕಾಲವೊಂದಿತ್ತು. ಆದರೇ ನಮ್ಮ ಪಾರು ಒಂದು ದಿವಸವೂ ಹಾಗೆ ಮಾಡಲಿಲ್ಲ. ಪ್ರತ್ಯಕ್ಷ ಸಾಕ್ಷಿಯೇ ನಮ್ಮ ಹಟ್ಟಿ ಸಿದ್ಧಯ್ಯ. ಹೌದಪ್ಪಾ ಇದೇ ಅವರು ನನಗೆ ಹೇಳಿದ್ದು.
ದಿನಾಂಕ:08.05.2022 ರಂದು ನನ್ನ ಹುಟ್ಟೂರು ಕುಂದರನಹಳ್ಳಿಯ ರಾಮೇಶ್ವರ, ಗಂಗಮಲ್ಲಮ್ಮ ದೇವಿ ಮತ್ತು ಆಂಜನೇಯ ದೇವರಿಗೆ ಪೂಜಿಸಿ, ದಿವಂಗತ ನನ್ನ ತಂದೆ-ತಾಯಿಗೂ ನಮಿಸಿ, ವಿಶ್ವದ 6-7 ದೇಶಗಳಲ್ಲಿರುವ 108 ಶಕ್ತಿಪೀಠಗಳು ಮತ್ತು ಗೊಂದಲದಲ್ಲಿ ಇರುವ ಶಕ್ತಿಪೀಠಗಳ ಸ್ಥಳಗಳಿಗೆ ‘ಶಕ್ತಿಪೀಠ ಯಾತ್ರೆ’ಯನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ. ಅಂದು ತಾವೂ ಬಂದು ಆಶೀರ್ವದಿಸಲು ನಮ್ರತೆಯ ಮನವಿ.
ಶಕ್ತಿಪೀಠ ಸಂಶೋಧಕರಾದ ಶ್ರೀ ಅಶೋಕ್ರವರು ಮತ್ತು ಅವರ ಶ್ರೀ ಮತಿಯವರು, ಶ್ರೀ ಸತ್ಯಾನಂದ್ರವರು, ನನ್ನ ಮಗ ಸೋಹನ್ ಗೂಗಲ್ ಮ್ಯಾಪ್ ಸಹಿತ, ಈಗಾಗಲೇ ಸುಮಾರು 18 ರಿಂದ 20 ಪ್ಯಾಕೇಜ್ ನಕ್ಷೆ ಸಿದ್ಧಪಡಿಸುತ್ತಿದ್ದಾರೆ. ಒಂದು ಬಾರಿ 5 ದಿವಸದಿಂದ 15 ದಿವಸದವರೆಗೂ ಸಮಯ ಬೇಕಾಗುತ್ತದೆ. ಪ್ರತಿ ತಿಂಗಳು ಒಂದೊಂದು ಪ್ಯಾಕೇಜ್ ಯಾತ್ರೆ ಮಾಡುವ ಗುರಿ ನನ್ನದಾಗಿದೆ.
ನಮ್ಮ ಸಿದ್ಧು ತೋಟದ ಜವಾಬ್ದಾರಿ ನನಗೆ ಬಿಡು, ನೀವೂ ಯಾತ್ರೆಗೆ ಹೋಗಿ ಬನ್ನಿ ಎಂದು ಕಳುಹಿಸಲು ಸಿಧ್ದವಾಗಿದ್ದಾರೆ. ನಮ್ಮೂರಿನ ಮಾದಿಗ ಜನಾಂಂಗದ ಶ್ರೀ ಸಿದ್ಧಯ್ಯನವರು ಮತ್ತು ನಮ್ಮ ದೊಡ್ಡಪ್ಪನವರ ಮಗ ನನ್ನ ತಮ್ಮ ಶ್ರೀ ಸಿದ್ಧರಾಮಯ್ಯನವರು ಇಬ್ಬರು ನನ್ನ ಅನ್ನದಾತರು, ಇವರನ್ನು ಕರೆಯುವಾಗ ಹಟ್ಟಿ ಸಿದ್ಧ, ನಮ್ಮ ಸಿದ್ಧ ಎಂದು ಕರೆಯುವುÀದು ವಾಡಿಕೆ.
ನಾನು ನಮ್ಮ ಸಿದ್ಧನಿಗೆ ಹೇಳಿದ್ದೇನೆ ಅಜ್ಜಿ ನಮ್ಮನ್ನು ಬಿಟ್ಟು ಹೋದಾಗ ಶಕ್ತಿಪೀಠ ಯಾತ್ರೆ ಆರಂಭಿಸುತ್ತಿದ್ದೇನೆ, ನೀನು ಹೊಸ ಮನೆ ಕಟ್ಟುವುದರೊಳಗೆ ಯಾತ್ರೆ ಪೂರ್ಣಗೊಳಿಸಲು ಶ್ರಮಿಸುತ್ತೇನೆ. ತಾಯಿ ಏನು ಮಾಡುತ್ತಾಳೆ ನೋಡೋಣ ಎಂದಿದ್ದೇನೆ.
ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ, ಪ್ರವಾಸೋಧ್ಯಮ ಇಲಾಖೆ, ಕೇಂದ್ರ ಸರ್ಕಾರದ ಆರ್ಕಿಯಾಲಾಜಿಕಲ್ ಇಲಾಖೆ, ಮಿನಿಸ್ಟ್ರಿ ಆಫ್ ಕಲ್ಚರ್ ಇಲಾಖೆಯ ಸಹಯೋಗದೊಂದಿಗೆ ವಿದೇಶಗಳಿಗೆ ಹೋಗಿ ಅಧ್ಯಯನ ನಡೆಸಲು ಅನುಮತಿ ಪಡೆಯಲು ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ.
ಆಸಕ್ತ ಅಧ್ಯಯನಗಾರರು ಸಂಪರ್ಕಿಸ ಬಹುದು.
ಜೈ ಮಾತಾಜಿ!