TUMAKURU:SHAKTHIPEETA FOUNDATION
ಬೆಂಗಳೂರು- ಪೂನಾ ರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚಲು ನಿಮಗೇನು ತೊಂದರೆ ಎಂದು ಅಧಿಕಾರಿಗಳನ್ನು ಸಂಸದ ಶ್ರೀ ಜಿ.ಎಸ್.ಬಸವರಾಜ್ ತೀವೃ ತರಾಟೆಗೆ ತೆಗೆದು ಕೊಂಡರು. ಪ್ರತಿ ದಿವಸ ಎಷ್ಟು ಜನ ಬಿದ್ದು ತೊಂದರೆ ಅನುಭವಿಸುತ್ತಿದ್ದಾರೆ. ಟೋಲ್ ಹಣ ವಸೂಲಿ ಮಾಡುವವರಿಂದ ರಸ್ತೆ ಗುಂಡಿ ಮುಚ್ಚಿಸಲು ನಿಮಗೆ ಸಾದ್ಯಾವಿಲ್ಲವೇ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ನೆಲಮಂಗಲ ಟೋಲ್ ನಿಂದ -ತುಮಕೂರು ರಾಜಾ ಟೈಲ್ಸ್ ವರೆಗೆ ಸುಮಾರು 44 ಕೀಮೀ ರಸ್ತೆಯನ್ನು 6 ಪಥದ ರಸ್ತೆಯಾಗಿ ಹಾಗೂ ಎರಡು ಕಡೆ ಸರ್ವಿಸ್ ರಸ್ತೆ ನಿರ್ಮಾಣ ಮಾಡುತ್ತಿರುವ ಹಿನ್ನಲೆಯಲ್ಲಿ ದಿನಾಂಕ:03.12.2022 ರಂದು ತುಮಕೂರು ನಗರದ ಬೆಸ್ಕಾಂ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೊರಗುಂಟೆ ಪಾಳ್ಯದ ಟ್ರಾಫಿಕ್ ಸಮಸ್ಯೆ, ಹಾಸನ-ಮಂಗಳೂರು, ತುಮಕೂರು-ಹೊನ್ನಾವರ, ಬೆಂಗಳೂರು-ಪೂಣೆ, ದಾಬಸ್ ಪೇಟೆ- ದೇವನಹಳ್ಳಿ ಹೀಗೆ ಹಲವಾರು ರಾಷ್ಟ್ರೀಯ ಹೆದ್ಧಾರಿಗಳ ಹೆಬ್ಬಾಗಿಲಿನಂತಿರುವ, ಈ ರಸ್ತೆಯ ಸಮಸ್ಯೆಗಳ ಬಗ್ಗೆ ಒಂದು ತಾಂತ್ರಿಕ ವರದಿ ಸಿದ್ಧಪಡಿಸಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ನಾನು ಬೆಳಿಗ್ಗೆ ಎದ್ದರೆ ರಾಜ್ಯದ 20 ಜಿಲ್ಲೆಗಳಿಗಿಂತ ಹೆಚ್ಚು ಜನಪ್ರನಿಧಿಗಳಿಂದ, ಸ್ನೇಹಿತರಿಂದ ಈ ರಸ್ತೆ ಗುಂಡಿಗಳ ಬಗ್ಗೆ ಕೇಳಿ ಕೇಳಿ ಸಾಕಾಗಿದೆ. ಇನ್ನೂ ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಿ ಎಂದು ಸೂಚಿಸಿದರು.
ತುಮಕೂರು ನಗರ ಮಟ್ಟದ ಸಮಸ್ಯೆಗಳಾದ ಅಕ್ಕತಂಗಿ ಕೆರೆ ಪಕ್ಕದ ಸರ್ವೀಸ್ ರಸ್ತೆ, ಜಗನ್ನಾಥಪುರದ ಕೇಳ ಸೇತುವೆ, ತುಮಕೂರು ನಗರದ ಎಂಟ್ರೆಸ್, ಬಟವಾಡಿ ಬಳಿ ಸ್ಕೈವಾಕ್, ವಿವಿಧ ಕೆಳಸೇತುವೆಗಳಲ್ಲಿ ನಿಲ್ಲುವ ನೀರು, ಕರಾಬುಹಳ್ಳಗಳಲ್ಲಿ ಅಗತ್ಯ ಸಾಮಾಥ್ರ್ಯದ ಸೇತುವೆ ನಿರ್ಮಾಣ ಮಾಡದೆ ಮಳೆಯಿಂದ ಆದ ಪರಿಣಾಮಗಳು ಇತ್ಯಾದಿ ಬಗ್ಗೆ ಅರ್ಥಗರ್ಭಿತವಾಗಿ ಶಾಸಕರು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
ದಾಬಸ್ ಪೇಟೆ ಕೈಗಾರಿಕಾವಲಯದ ಟ್ರಾಫಿಕ್, ದಾಬಸ್ ಪೇಟೆಯಿಂದ ವಿಮಾನ ನಿಲ್ದಾಣ ರಸ್ತೆ ಸಂಪರ್ಕ,ವೇ ಸೈಡ್ ಅಮೆನಿಟೀಸ್, ಹೊಸ ರಿಂಗ್ ರಸ್ತೆ ಸಂಪರ್ಕ, ಹೀಗೆ 44 ಕೀಮೀ ರಸ್ತೆಯ ಸಮಸ್ಯೆಗಳ ಬಗ್ಗೆ ಶಾಸಕರು ಅಧಿಕಾರಿಗಳ ಗಮನ ಸೆಳೆದರು.
ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ರವರು ಸಂಸದರು, ಶಾಸಕರು, ದಿಶಾ ಸಮಿತಿ ಸದಸ್ಯರು ಹೇಳಿರುವ ಪ್ರತಿಯೊಂದು ಅಂಶಗಳ ಸಾಧಕ-ಭಾದಕಗಳ ಬಗ್ಗೆ ನಕ್ಷೆ ಸಹಿತ ಮಾಹಿತಿ ಸಿದ್ಧಪಡಿಸಿ, ಜಿಲ್ಲಾಡಳಿತದಿಂದ ಅನುಮೋದನೆ ಪಡೆಯಲು ಸೂಚಿಸಿದರು.
ಯಾವುದೇ ಇಲಾಖೆಯ ಯಾವುದೇ ಸಮಸ್ಯೆಗಳಿದ್ದರೂ, ತಕ್ಷಣ ನನ್ನ ಗಮನಕ್ಕೆ ತನ್ನಿ, ತಕ್ಷಣ ಸಂಭಂದಿಸಿದ ಎಲ್ಲಾ ಇಲಾಖೆಗಳ ಸಭೆ ನಡೆಸಿ ಸೂಕ್ತ ಪರಿಹಾರ ನೀಡಲಾಗುವುದು. ತುಮಕೂರು ಕಡೆಯಿಂದಲೂ ಕಾಮಗಾರಿ ಆರಂಭಿಸಿ, ಎರಡು ಕಡೆಯಿಂದಲೂ ಕೆಲಸ ಆರಂಭವಾದರೆ ಬೇಗ ಕಾಮಗಾರಿ ಪೂರ್ಣಗೊಳ್ಳಲು ಸಹಕಾರಿಯಾಗಲಿದೆ ಎಂಬ ಬಗ್ಗೆ ಸಲಹೆ ನೀಡಿದರು.
ನಿವೃತ್ತ ಜಲಸಂಪನ್ಮೂಲ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಹೆದ್ಧಾರಿ ಮುಖ್ಯ ಇಂಜಿನಿಯರ್ ಆಗಿದ್ದ ಶ್ರೀ ಕೆ.ಜೈಪ್ರಕಾಶ್‍ರವರು ಎಳೆ, ಎಳೆಯಾಗಿ ಹಲವಾರು ಸಮಸ್ಯೆಗಳ ಬಗ್ಗೆ ವಿವರಿಸಿದರು, ಅವುಗಳಿಗೆ ಏನು ಪರಿಹಾರ ಕಂಡುಕೊಳ್ಳಲಾಗಿದೆ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಶ್ರೀಮತಿ ವಿದ್ಯಾಕುಮಾರಿರವರು, ರಾಜ್ಯ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ಚಿತ್ರದುರ್ಗ ಪಿಡಿ ಶ್ರೀ ಗೌರವ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.