TUMAKURU:SHAKTHIPEETA FOUNDATION
ಒಂದು ವರ್ಗದ ಜನ ಸದಾ ಕೇಳುವುದು, ಏನ್ ಸಾರ್ ಎತ್ತಿನಹೊಳೆ ಯೋಜನೆಗೆ ನೀರೆಲ್ಲಿದೆ? ಅಂತಾರೆ, ನೀರೇ ಬರಲ್ವಂತೆ ನಿಜನಾ! ಕೇಳಿ ಕೇಳಿ ನನಗೆ ಸಾಕಾಗಿ ಹೋಗಿದೆ. ’ಎತ್ತಿನಹೊಳೆ’ ಯೋಜನೆಯ ಹೆಸರು ಇದಕ್ಕೆ ನೇತ್ರಾವತಿ ನದಿ ಪಾತ್ರದ ಹಲವಾರು ಹಳ್ಳಗಳ ನೀರು ಬರುತ್ತದೆ. ಅಲ್ಲಿ ಸಾಕಷ್ಟು ನೀರು ಇದೆ. ’ಮಳೆ ಮಾಪನಗಳನ್ನು ಅಳವಡಿಸಿ ಡಿಜಿಟಲ್ ಆಗಿ ಖಾತರಿ’ ಪಡಿಸಿಕೊಳ್ಳಲಾಗಿದೆ.
ಎಲ್ಲರಿಗೂ ಇರುವ ಆತಂಕ ಮಳೆ ನೀರನ್ನು ಲಿಪ್ಟ್ ಮಾಡುವ ವಿಧಾನದ ಬಗ್ಗೆ. ಇದು ಸಾಮಾನ್ಯ ಜನರು ಯೋಚನೆ ಮಾಡುವ ಕೆಲಸವಲ್ಲ, ನೂತನ ’ಅವಿಷ್ಕಾರ’ ಮಾಡುವ ಜನರಿಗೆ ಬಿಟ್ಟು ಬಿಡಿ. ಯಾವುದೇ ಗಾಬರಿ ಬೇಡ, ನಿರಂತೂ ಬಂದೇ ಬರುತ್ತದೆ.
ನಮ್ಮ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು ಇಸ್ರೋಗೆ ಬಂದು ನಿದ್ದೆಗೆಟ್ಟು ಕುಳಿತರು, ಜೊತೆಗೆ ದೇಶದ ಬಹುತೇಕ ಜನರು ಇಡೀ ರಾತ್ರಿ ಕಾಯುತ್ತಿದ್ದರು. ಇಸ್ರೋ ಉಡಾವಣೆ ಮಾಡಿದ ಚಂದ್ರಯಾನ-2 ರೋವರ್ ಕೈಕೊಟ್ಟಿತು. ಮೋದಿಯವರು ಇಸ್ರೋ ಅಧ್ಯಕ್ಷರಿಗೆ ಬೆನ್ನು ತಟ್ಟಿ ಮುಂದುವರೆಯಿರಿ ಎಂದು ಹೇಳಿದ ಅವೀಸ್ಮರಣೀಯ ಗಳಿಗೆಗೆ ನಾವೂ ನೀವೂ ಸಾಕ್ಷಿಯಲ್ಲವೇ?
ಆಂಧ್ರ ಪ್ರದೇಶದಲ್ಲಿ ಶ್ರೀ ರಾಜಶೇಖರ ರೆಡ್ಡಿಯವರ ಕಾಲದಲ್ಲಿ ಒಂದು ನೀರಾವರಿ ಯೋಜನೆಯ ಆಕ್ವಿಡೆಕ್ಟ್ ಕುಸಿಯಿತು. ಮುಖ್ಯಮಂತ್ರಿಯವರು ಸ್ಥಳ ತನಿಖೆಗೆ ಬಂದಾಗ ಬಹುತೇಕ ಎಲ್ಲಾ ಇಂಜಿನಿಯರ್‌ಗಳು ಬೆವರುತ್ತಿದ್ದರಂತೆ. ಯಾರು ಸಸ್ಪೆಂಡ್ ಆಗುತ್ತಾರೆ, ಯಾರಿಗೆ ಶಿಕ್ಷೆ ಕಾದಿದೆ ಎಂಬ ಕುತೂಹಲ ಎಲ್ಲರಲ್ಲಿ ಇತ್ತಂತೆ.
ಮುಖ್ಯ ಮಂತ್ರಿಯವರು ಸ್ಥಳ ವೀಕ್ಷಣೆ ಮಾಡಿ, ಕೂಲಾಗಿ ಮುಂದೇನು ಎಂದರಂತೆ. ಭವಿಷ್ಯದ ಯೋಜನೆ ಪ್ರಸ್ತಾವನೆಯ ಬಗ್ಗೆ ಇಂಜಿನಿಯರ್‌ಗಳು ಮಾಹಿತಿ ನೀಡಿದರಂತೆ, ಅಷ್ಟೇ ಕೂಲಾಗಿ ತಕ್ಷಣ ಆರಂಭಿಸಿ ಇವೆಲ್ಲಾ ಇದ್ದಿದ್ದೆ, ಮನಸ್ಸಿಗೆ ಯಾರು ತೆಗೆದುಕೊಳ್ಳಬೇಡಿ ಎಂದು ಹೇಳಿ ಹೊರಟರಂತೆ.
ಎತ್ತಿನಹೊಳೆ ಯೋಜನೆಯೂ ಸಹ ವಿಶಿಷ್ಠವಾದ ಯೋಜನೆ, ಯಾವುದೇ ಅಣೆಕಟ್ಟು ನಿರ್ಮಾಣ ಮಾಡಿಲ್ಲ, ಸುಮಾರು ಏಳೆಂಟು ಕಡೆ ಸಾಮಾನ್ಯ ಒಂದೊಂದು ಪಿಕ್‌ಅಫ್ ನಿರ್ಮಾಣ ಅಷ್ಟೆ. ಒಂದು ವಾರದ ನೀರನ್ನು ಸಂಗ್ರಹಣೆ ಮಾಡುವ ಗೋಜಿಗೂ ಹೋಗಿಲ್ಲ, ಮಳೆ ಬಂದಾಗ ಬರುವ ನೀರು ಬಂದಹಾಗೆ ಎತ್ತಲೂ ಧೈತ್ಯಾಕಾರದ ಪಂಪ್ ಮೋಟಾರ್ ’ರಣಹದ್ದು’ ಗಳಂತೆ ಈಗಾಗಲೇ ಕಾಯುತ್ತಾ ಕುಳಿತಿವೆ.
ನೀರನ್ನು ಕೆಲವು ಕಡೆ ಎರಡು ಮತ್ತು ಕೆಲವು ಕಡೆ ಮೂರು ಬಾರಿ ಲಿಪ್ಟ್ ಮಾಡ ಬೇಕಾಗುತ್ತದೆ. ಎಲ್ಲಾ ಕಡೆಯೂ ಇದೇ ಕಥೆ. ಇದೊಂದು ’ಇನ್ನೋವೇಷನ್’ ಯೋಜನೆ. ಅಂದು ಕೊಂಡಂತೆ ಆದರೇ ಇದೊಂದು ’ಪವಾಡ’ ಯೋಜನೆಯ ಜನಕರಿಗೆ ’ನಾಗರೀಕ ಪ್ರಶಸ್ತಿ’ ನೀಡಲೇಬೇಕು. ನಮ್ಮ ರಾಜ್ಯದಲ್ಲೂ ಇಂಥಹ ’ಅದ್ಭುತ’ ಯೋಜನೆಗೆ ಕೈಹಾಕಿದ್ದಾರಲ್ಲ ಎಂದು ಹೆಮ್ಮೆ ಪಡಲೇಬೇಕು.
ಒಂದು ವೇಳೆ ಕೈಕೊಟ್ಟರೇ ಪ್ರಪಂಚ ಮುಳುಗುವುದಿಲ್ಲಾ. ಯಾವುದು ಹಾಳಾಗುವುದಿಲ್ಲ, ಪಂಪ್ ಮಾಡುವ ಎಲ್ಲಾ ಸ್ಥಳದಲ್ಲಿ ಕನಿಷ್ಠ ಒಂದು ವಾರದ ಮಳೆ ನೀರು ಸಂಗ್ರಹ ಮಾಡಲು ’ಪರ್‍ಯಾಯ ಯೋಜನೆ ರೂಪಿಸಲೇ ಬೇಕು’ ಇದಕ್ಕೆ ಈಗಿನಿಂದಲೇ ಅಧ್ಯಯನ ಮಾಡಿ ಯೋಜನೆಯನ್ನು ಬೆರಳ ತುದಿಯಲ್ಲಿ ಇಟ್ಟು ಕೊಂಡಿರಬೇಕು ಅಷ್ಟೆ. ಪಶ್ಚಿಮಘಟ್ಟದಲ್ಲಿ ಇರುವುದು ಸುಮಾರು 2೦೦೦ ಟಿ.ಎಂ.ಸಿ ಅಡಿ ನೀರು.
ಆದರೂ ಸ್ಕಾಡಾದ ಸಹಾಯದಿಂದ ಮಳೆ ಯಾವ ಪ್ರಮಾಣದಲ್ಲಿ ಬಿದ್ದರೂ, ಅಷ್ಟು ನೀರು ಎತ್ತುವ ಪಂಪ್ ಆನ್ ಆಗಲಿವೆ. ಮಳೆ ನೀರು ಕಡಿಮೆಯಾದಾಗ ಆಟೋಮ್ಯಾಟಿಕ್ ಆಗಿ ಆಫ್ ಆಗಲಿವೆಯಂತೆ. ಶ್ರೀ ಡಿ.ಎಸ್. ಹರೀಶ್‌ರವರು ಹೇಳುವ ಮಾತನ್ನು ಕೇಳುತ್ತಿದ್ದರೇ ನನಗೆ ಇದೊಂದು ಮ್ಯಾಜಿಕ್ ಅನ್ನಿಸುತ್ತಿದೆ. ನಾನು ಸ್ವತಃ ಕನಸುಗಾರ ನನಗಂತೂ ಪೂರ್ಣ ಭರವಸೆಯಿದೆ.
ಈಗ ಕೇವಲ ರೂ 3೦೦ ಕೋಟಿ ವ್ಯಯಮಾಡಿದರೇ, ಇಂಜಿನಿಯರ್‌ಗಳು ಹಗಲು ರಾತ್ರಿಯೆನ್ನದೇ ಶ್ರಮಿಸಿದರೇ, ಆ ಕಾಲ ಮುಂದಿನ ವರ್ಷದ ಮಳೆ ಆರಂಭವಾಗುವ ವೇಳೆಗೆ ಬರಲಿದೆ. ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮತ್ತು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರಿಗೆ ಆ ಅಧೃಷ್ಟ ಇರಬಹುದು.
’ಎತ್ತಿನಹೊಳೆ ನೀರು ವೇದಾವತಿ ನದಿ ಮೂಲಕ ನೈಸರ್ಗಿಕವಾಗಿ ಮಧ್ಯ ಕರ್ನಾಟಕದ ವಾಟರ್‌ಬ್ಯಾಂಕ್ ಎಂದೇ ಖ್ಯಾತಿಪಡೆದಿರುವ ವಾಣಿವಿಲಾಸಕ್ಕೆ ಗಂಗಾಮಾತೆಯಾಗಿ ಪ್ರವೇಶ ಮಾಡುವ ಅವಕಾಶಕ್ಕೆ ಎಲ್ಲರೂ ಕಾತುರದಿಂದ ಇದ್ದಾರೆ’
ಹಣ ಬಿಡುಗಡೆ ಮತ್ತು ಕಾಲಮಿತಿ ನಿಗದಿಯಂತೆ ಕೆಲಸ ಪೂರ್ಣಗೊಳಿಸುವ ಕಡೆ ಹದ್ದಿನ ಕಣ್ಣಿಡಲು ಶಕ್ತಿಪೀಠ ಫೌಂಡೇಷನ್ ಟಾಸ್ಕ್ ಪೋರ್ಸ್‌ನಂತೆ ಕಾರ್ಯನಿರ್ವಹಿಸಲಿದೆ. ಭೈರಗೊಂಡ್ಲು ಡ್ಯಾಂ ಗೆ ನೀರು ಬರುವ ವೇಳೆಗೆ ಎತ್ತಿನಹೊಳೆ ನೀರಿನ ಹೆಡ್‌ವರ್ಕ್ಸ್ ಯೋಜನೆಗಳ ಎಲ್ಲಾ ವದಂತಿ ದೂರವಾಗಲಿವೆ.
ಜೊತೆಗೆ ಶ್ರೀ ಜಿ.ಎಸ್.ಬಸವರಾಜ್‌ರವರು ಪರಮಶಿವಯ್ಯನವರ ವರದಿಯ ಆಧಾರದ ಮೇಲೆ ಈಗಿನಿಂದಲೇ ಪರ್‍ಯಾಯ ಯೋಜನೆ ರೂಪಿಸಲು ಸರ್ಕಾರದ ಮೇಲೆ ನಿರಂತರ ಒತ್ತಡ ತರುತ್ತಿದ್ದಾರೆ. ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡುವ ಭರವಸೆಯಿದೆ. ಆದರೇ ಕೇಂದ್ರ ಸರ್ಕಾರದಿಂದ ಯೋಜನೆ ಮಂಜೂರು ಮಾಡಿಸುವ ಹೊಣೆಗಾರಿಕೆ ರಾಜ್ಯದ ಎಲ್ಲಾ ಲೋಕಸಭಾ ಸದಸ್ಯರಿಗೆ ಸೇರಿದ್ದು.
ರಾಜ್ಯದ 4೦ ಜನ ಸಂಸದರ ಮೇಲೆ ಒತ್ತಡ ತರಲು ಪಕ್ಷಬೇಧ ಮರೆತು ನಾಡಿನ ಜನತೆ ಅಂಕುಶ ಹಿಡಿಯಲೇ ಬೇಕು.