27th July 2024
Share

TUMAKURU:SHAKTHIPEETA FOUNDATION

ರಾಜ್ಯದ ನದಿ ಜೋಡಣೆ- ಬಹಿರಂಗ ಡೈರಿ ಭಾಗ-2  ದಿನಾಂಕ: 09.10.2020

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರಿಗೆ ಅಚ್ಚು-ಮೆಚ್ಚಿನ ರಾಜಕೀಯ ಗುರುಗಳಲ್ಲಿ ದಿ.ಕೆ.ಹೆಚ್.ಪಾಟೀಲ್‌ರವರು ಪ್ರಮುಖರು. ಬಹುಷಃ ಅವರನ್ನು ಜ್ಞಾಪಿಸಿ ಕೊಂಡಾಗಲೆಲ್ಲಾ ಬಸವರಾಜ್‌ರವರಿಗೆ ಕಣ್ಣೀರು ಗ್ಯಾರಂಟಿ.

 ಜೊತೆಗೆ ನೀರಾವರಿ ತಜ್ಞ ಜಿ.ಎಸ್.ಪರಮಶಿಯ್ಯನವರ ಯೋಜನೆಗೆ ತಿರುವು ಕೊಟ್ಟವರಲ್ಲಿ ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಎಸ್.ಎಂ.ಕೃಷ್ಣರವರು ಮತ್ತು ಮಾಜಿ ಜಲಸಂಪನ್ಮೂಲ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್‌ರವರು ಮೊದಲಿಗರು ಎಂದರೆ ತಪ್ಪಾಗಲಾರದು.

 2೦೦೦ ನೇ ಇಸವಿಯಲ್ಲಿ ಶ್ರೀ ಹೆಚ್.ಕೆ.ಪಾಟೀಲ್‌ರವರ ಅಧ್ಯಕ್ಷತೆಯಲ್ಲಿ ಮಾಜಿ ವಿಧಾನಸಭಾ ಅಧ್ಯಕ್ಷರಾದ ದಿ. ಎಂ.ವಿ.ವೆಂಕಟಪ್ಪನವರ ಮನೆಯಲ್ಲಿ  ಮಧ್ಯೆ ಕರ್ನಾಟಕದ ಸುಮಾರು 10 ಜಿಲ್ಲೆಗಳ ಸಂಸದರು, ಸಚಿವರು, ಶಾಸಕರು ಮತ್ತು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಸಭೆ ನಡೆಯುತ್ತಿತ್ತು, ಜಿ.ಎಸ್.ಪರಮಶಿಯ್ಯನವರ ವರದಿ ಆಧಾರಿತ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳನ್ನು ಬಯಲು ಸೀಮೆಗೆ ತರುವ ಬಗ್ಗೆ ಸುದೀರ್ಘ ಚರ್ಚೆ.

 ಈಗ ರಾಜ್ಯದ ನೀರಾವರಿ ಸಲಹಾಗಾರರಾಗಿರುವ ಶ್ರೀ ರಾಮಯ್ಯನವರು ಅಂದು ಒಂದು ಕಡತ ಹಿಡಿದುಕೊಂಡು ಓದಲು ಆರಂಭಿಸಿದರು. ಅದು ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ನೀರನ್ನು ಕೃಷಿಗೆ ಮತ್ತು ವಿದ್ಯುತ್ ಉತ್ಪಾದನೆ ಮಾಡಲು ಬಳಸುವುದಿಲ್ಲಾ ಎಂದು ನ್ಯಾಯಾಲಕ್ಕೆ ಅಫಿಡೆವಿಟ್‌ನ್ನು ರಾಜ್ಯ ಸರ್ಕಾರ ಹಾಕಿದ ವಿಚಾರ.

 ಇದನ್ನು ಓದಿದಾಗ ಶ್ರೀ ಜಿ.ಎಸ್.ಬಸವರಾಜ್‌ರವರು ತಾಳ್ಮೆ ಕಳೆದುಕೊಂಡರು. ಅದೆಷ್ಟು ಸಾರಿ ಹೇಳುತ್ತಿರಿ, ನಾವೂ ಆ ನೀರು ಉಪಯೋಗಿಸುವುದು ಕುಡಿಯುವ ನೀರಿಗಾಗಿ ಮತ್ತು ಅಂತರ್ಜಲ ಅಭಿವೃದ್ಧಿಗಾಗಿ’ ಆ ಪುಣ್ಯಾತ್ಮ ಶ್ರೀ ಹೆಚ್.ಡಿ.ದೇವೆಗೌಡರು ಹಾಗಂತ ಅಫಿಡೆವಿಟ್ ಹಾಕಿಲ್ಲವಲ್ಲ ಎಂದು ಜೋರು ಧ್ವನಿಯಲ್ಲಿ ಹೇಳಿದರು.

 ಸಭೆಯಲ್ಲಿ ಹಾಜರಿದ್ದ ನೀರಾವರಿ ತಜ್ಞರಾದ ಶ್ರೀ ಕ್ಯಾಪ್ಟನ್‌ರಾಜರಾವ್‌ರವರು ಹಾಗಲ್ಲ ಬಸವರಾಜ್‌ರವರೇ ಎಂದು ಏನೋ ಹೇಳಲು ಎದ್ದು ನಿಂತರು. ಆಗ ಬಸವರಾಜ್‌ರವರು   ನೋಡ್ರಿ ನನಗೂ ಸಾಕಾಗಿ ಹೋಗಿದೆ ಎಂದು ತೋಳು ಮುದರಿ ನಿಂತರು. ನಾನು ಸಹ ಅವರಿಗೆ ಬೆಂಬಲಿಸಿ ಮಾತನಾಡಿದೆ.

 ಶ್ರೀ ಹೆಚ್.ಕೆ.ಪಾಟೀಲ್‌ರವರು ಮಾತನಾಡಿ ಬಸವರಾಜ್‌ರವರು ಹಿರಿಯರು, ಸಂಸದರು ಅವರು ಏನು ಬೇಕಾದರೂ ಹೇಳುವ ಹಕ್ಕಿದೆ, ನೀನೂ ಮಾತನಾಡುವುದು ಬೇಡಪ್ಪ ಕುಳಿತು ಕೋ ಎಂದು ರೇಗಿದರು. ಶ್ರೀ ರಾಮಯ್ಯನವರನ್ನು ಕುಳಿತು ಕೊಳ್ಳಲು ಹೇಳಿದರು, ಅಧಿಕಾರಿಗಳಿಗೆ ಡಿಕ್ಟೇಟ್ ಮಾಡಿ ಮಧ್ಯೆ ಕರ್ನಾಟಕದ ಸುಮಾರು 10 ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಮತ್ತು ಅಂತರ್ಜಲ ಅಭಿವೃದ್ಧಿಗಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ನೀರನ್ನು ಉಪಯೋಗಿಸಲು ಡಿಪಿಆರ್ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿ, ಶ್ರೀ ವೆಂಕಟಪ್ಪನವರಿಗೆ ಊಟ ಮಾಡಬಹುದಾ ಸಾರ್ ಎಂದಾಗ ಭಾಗವಹಿಸಿದ್ದ ಎಲ್ಲರೂ ಜೋರು ತಪ್ಪಾಳೆಯೊಂದಿಗೆ ಭಾರಿ ಭೋಜನ ಸವಿದು ಖುಷಿಯಾಗಿ ಹೊರಟರು. ಆ ದಿನದ ಸಭೆಯ ಪ್ರತಿಫಲ ಇಂದು ಎತ್ತಿನ ಹೊಳೆ ಯೋಜನೆ ಆರಂಭವಾಗಿದೆ.

‘ಸಾಕ್ಷಿಯಾಗಿ ಇಂದು ಶ್ರೀ ಕ್ಯಾಪ್ಟನ್‌ರಾಜರಾವ್‌ರವರು, ಶ್ರೀ ರಾಮಯ್ಯನವರು ಇಬ್ಬರೂ ಇದ್ದಾರೆ. ಈಗಲೂ ಬಸವರಾಜ್‌ರವರ ಚಿಂತನೆಗೆ ಇವರಿಬ್ಬರೂ ಸಹಕರಿಸುತ್ತಿದ್ದಾರೆ

 ಆ ದಿನ ನಮಗೆ ಜೀವನದಲ್ಲಿ ಮರೆಯದ ದಿನ. ಈ ಹಿನ್ನೆಲೆಯಲ್ಲಿ ಹೆಚ್.ಕೆ.ಪಾಟೀಲ್‌ರವರ ಜೊತೆ ಇಂದು(09.11.2020) ಅವರ ಬೆಂಗಳೂರಿನ ಮನೆಯಲ್ಲಿ ಸಮಾಲೋಚನೆ ನಡೆಸಲಾಯಿತು, ಅವರ ಜೊತೆ ಸುಧೀರ್ಘವಾಗಿ ಬಹುತೇಕ ರಾಜ್ಯದ ಪ್ರತಿಯೊಂದು ಹನಿ ನೀರು ಬಳಕೆ ಬಗ್ಗೆ ಮಾತನಾಡಿದೆವು.

 ಅವರು ಇಂದು ಹೇಳಿದ ಮಾತು 20 ವರ್ಷದ ಹಿಂದೆ, ಪಟ್ಟ ಶ್ರಮ ಎತ್ತಿನಹೊಳೆ ಯೋಜನೆ ಜಾರಿಯಾಗುತ್ತಿದೆ, ಇಂದಿನ ಸಭೆಯ ಫಲ ಮುಂದೆ ಹಣ್ಣು ನೀಡಲಿದೆ. ನಿಮಗೆ ಯಡಿಯೂರಪ್ಪನವರು ಹತ್ತಿರದಲ್ಲಿ ಇದ್ದಾರೆ, ನೀರಿನ ಯುದ್ಧ ಆರಂಭಿಸಿ ಎಂದು ಹಾಸ್ಯ ಚಟಾಕಿ ಹಾರಿಸಿದರು. ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ಒಂದು ವಾಕ್ಯವನ್ನು ಸೇರಿಸಲು ಸಲಹೆ ನೀಡಿದರು’

 ಈ ತಿಂಗಳ 30 ರೊಳಗೆ ಅವರು ಸಹ ರಾಜ್ಯದ ನದಿಜೋಡಣೆ ಬಗ್ಗೆ ಒಂದು ದೃಢ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಮುಂದೆ ಅವರೇ ಹೇಳಬಹುದು.