TUMAKURU:SHAKTHIPEETA FOUNDAION
ತುಮಕೂರು ಜಿಲ್ಲೆಯ ಎಲ್ಲಾ 330 ಗ್ರಾಮ ಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲೂ ಮನೆ ಮನೆಗೆ ಸಮೀಕ್ಷೆ ನಡೆಸಿ, ನಿರುದ್ಯೋಗಿಗಳ ಪಟ್ಟಿ ಮಾಡಿ, ಉದ್ಯೋಗ ಮೇಳದ ಜೊತೆಗೆ ಸ್ವಯಂ ಉದ್ಯೋಗ ಮೇಳ ನಡೆಸಿ ಎಂದು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಜಿಲ್ಲಾ ಉದ್ಯೋಗಾಧಿಕಾರಿ ಶ್ರೀಮತಿ ಕವಿತಾರವರಿಗೆ ಸೂಚಿಸಿದರು.
ಕೇಂದ್ರ ಸರ್ಕಾರದ ಮಿಷನ್ ಅಂತ್ಯೋದಯ ಯೋಜನೆಯಡಿ ಪ್ರತಿಯೊಂದು ಗ್ರಾಮದ ಸಮೀಕ್ಷೆ ನಡೆಸಲು ಮಾರ್ಗಸೂಚಿಯಲ್ಲಿದೆ. ಎಲ್ಲೋ ಕುಳಿತು ಅಂಕಿಅಂಶ ನೀಡುವ ಬದಲು ತಾಜಾ ಮಾಹಿತಿಯನ್ನು ತಮ್ಮ ಇಲಾಖೆಯಲ್ಲಿ ನೊಂದಾಯಿಸಿಕೊಂಡು ಪ್ರತಿ ತಿಂಗಳು ಎಷ್ಟು ಜನ ನಿರುದ್ಯೋಗಿಗಳು ಸರ್ಕಾರಿ ಉದ್ಯೋಗ, ಖಾಸಗಿ ಉದ್ಯೋಗ, ಸ್ವಯಂ ಉದ್ಯೋಗ, ಕೃಷಿ ಉದ್ಯೋಗ ಮತ್ತು ಹೊರದೇಶಗಳಲ್ಲಿ ಉದ್ಯೋಗ ಪಡೆದಿದ್ದಾರೆ ಎಂಬ ಮಾಹಿತಿ ನೀಡಿ ಎಂದು ತಾಕೀತು ಮಾಡಿದರು.
ಇದು ಜಿಲ್ಲೆಯಾಧ್ಯಂತ ಒಂದು ಆಂದೋಲನ ರೀತಿಯಲ್ಲಿ ನಡೆಯಬೇಕು, ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ ಸಭೆಯಲ್ಲಿ ಈಗಾಗಲೇ ನಿರ್ಣಯ ಮಾಡಲಾಗಿದೆ. ಇನ್‌ಕುಬೇಷನ್‌ಸೆಂಟರ್‌ನಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ನಿರಂತರವಾಗಿ ಚಟುವಟಿಕೆ ನಡೆಯುತ್ತಿರಬೇಕು.
ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿಮಗೆ ಏನೇನು ಸವಲತ್ತು ಬೇಕು ಎಂಬ ಪ್ರಸ್ತಾವನೆ ಸಿದ್ಧಪಡಿಸಿ, ಜಿಲ್ಲಾಧಿಕಾರಿಗಳೊಂದಿಗೆ ಮತ್ತು ಜಿಲ್ಲಾ ಪಂಚಾಯತ್ ಸಿಇಓ ರವರೊಂದಿಗೆ ಮಾತನಾಡಿ ಗ್ರಾಮೀಣ ಮತ್ತು ನಗರ ವಿಭಾಗಗಳ ಎನ್.ಆರ್.ಎಲ್.ಎಂ ವಿಭಾಗದವರನ್ನು ಜೊತೆಯಲ್ಲಿಟ್ಟುಕೊಂಡು ವಿಶೇಷ ಕಾರ್ಯಕ್ರಮ ರೂಪಿಸಿ.
ಪಿಡಿಓಗಳಿಗೆ ಜಿಲ್ಲಾ ಪಂಚಾಯತ್ ಸಿಇಓ ರವರಿಂದ ಮತ್ತು ಜಿಲ್ಲಾಧಿಕಾರಿಗಳಿಂದ ನಗರ ಸ್ಥಳಿಯ ಸಂಸ್ಥೆಗಳಿಗೆ ಪತ್ರ ಬರೆಸಲು ಎರಡು ಇಲಾಖೆಯ ಯೋಜನಾ ನಿರ್ದೇಶಕರ ಸಹಕಾರ ಪಡೆಯಿರಿ ಎಂದು ಸೂಚಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಮತ್ತು ಕೌಶಲ್ಯ ಇಲಾಖೆಯ ಅಧಿಕಾರಿಗಳೊಂದಿಗೂ ಸಮಾಲೋಚನೆ ನಡೆಸಿ, ವಿಶ್ವದ ಬೆಸ್ಟ್ ಪ್ರಾಕ್ಟೀಸಸ್ ಯೋಜನೆಗಳ ಮಾಹಿತಿ ಸಂಗ್ರಹಿಸಿ. ಕಾಲಮಿತಿ ಯೋಜನೆ ನಿಗದಿ ಪಡಿಸಲು ಸೂಚಿಸಿದರು.
ತುಮಕೂರು ಇಂಡಸ್ಟ್ರಿಯಲ್ ನೋಡ್‌ನಲ್ಲಿ ಕೈಗಾರಿಕೆ ಸ್ಥಾಪಿಸಲು ಮುಂದೆ ಬರುವ ಜಿಲ್ಲೆಯ ಪ್ರತಿಯೊಬ್ಬರಿಗೂ ನಿವೇಶನ ಸಹಿತ ಅಗತ್ಯ ಸೌಲಭ್ಯ ನೀಡುವುದು ನಮ್ಮ ಆಧ್ಯ ಕರ್ತವ್ಯವಾಗಬೇಕು. ಇದು ಆತ್ಮನಿರ್ಭರ ಭಾರತದ ಮೊದಲ ಆಧ್ಯತೆ. ಇದು ಪ್ರಧಾನಿ ಮೋದಿಯವರ ಕನಸು ಆಗಿದೆ. ಯೋಜನೆಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಟೀಮ್‌ಆಗಿ ಕಾರ್ಯನಿರ್ವಹಿಸಬೇಕು ಎಂಬ ಸ್ಪಷ್ಟ ಸಂದೇಶ ನೀಡಿದರು.
ತುಮಕೂರು ಜಿಲ್ಲಾ ದಿಶಾ ಸಮಿತಿಯ ನಿರ್ಣಯದ ಮೇರೆಗೆ ಈಗಾಗಲೇ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ಉದ್ಯೋಗಾಧಿಕಾರಿಯವರು ಸಂಸದರಿಗೆ ವಿವರಿಸಿದರು.
ಸಂಸದರ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶ್ರೀ ಹೆಬ್ಬಾಕ ರವೀಶ್‌ರವರು, ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯರಾದ ಕುಂದರನಹಳ್ಳಿ ರಮೇಶ್, ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೊಕೊನಟ್ ಸ್ಪೆಷಲ್ ಎಕನಾಮಿಕ್ ಝೋನ್ ಬಗ್ಗೆ ಸಂಸದರ ಸೂಚನೆ ಮೇರೆಗೆ ವಿಶೇಷ ಕಲ್ಪನಾ ವರದಿ ಸಿದ್ಧಪಡಿಸುತ್ತಿರುವ ಶ್ರೀ ಪ್ರಣೀತ್‌ರವರು ಮತ್ತು ಶ್ರೀ ರಾಜಶೇಖರ್ ಇನ್ನೂ ಮುಂತಾದವರು ಇದ್ದರು.