15th January 2025
Share

TUMAKURU:SHAKTHIPEETA FOUNDATION

ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರು 2022 ರೊಳಗೆ ದೇಶದ ಯಾವುದೇ ಒಂದು ಕುಟುಂಬ ನಮಗೆ ಸೂರು ಇಲ್ಲ ಎಂದು ಕೊರಗುಬಾರದು. ಪ್ರತಿಯೊಬ್ಬರಿಗೂ ಕನಿಷ್ಟ ಒಂದು ಮನೆ ಇರಲೇಬೇಕು ಎಂಬ ಮಹತ್ತರವಾದ ಘೋಷಣೆಯನ್ನು 2014 ರಲ್ಲಿ ಮಾಡಿದ್ದಾರೆ.

ಘೋಷಣೆ ಮಾಡಿ ಬರೋಬ್ಬರಿ 8 ವರ್ಷಗಳು ಆಗಿವೆ. ತುಮಕೂರು ಜಿಲ್ಲೆಯಲ್ಲಿ ಯಾವ ನಗರದಲ್ಲಿ/ಗ್ರಾಮದಲ್ಲಿ, ಎಷ್ಟು ಜನರು ನಿವೇಶನ/ವಸತಿ ರಹಿತರಿದ್ದಾರೆ, ಆ ಗ್ರಾಮದ/ನಗರದ ಯಾವ ಸರ್ಕಾರಿ ಸರ್ವೇನಂಬರ್ ಜಮೀನಿನಲ್ಲಿ ಅಂಥವರಿಗೆ ನಿವೇಶನ ನೀಡಲಾಗಿದೆ ಅಥವಾ ನೀಡಲು ಉದ್ದೇಶಿಸಲಾಗಿದೆ.

ಸರ್ಕಾರಿ ಜಮೀನು ಇಲ್ಲದ ನಗರ/ಗ್ರಾಮಗಳಲ್ಲಿ ಯಾವ ಖಾಸಗಿ ಸರ್ವೇನಂಬರ್ ಜಮೀನು ಭೂಸ್ವಾಧೀನ ಮಾಡಿಕೊಳ್ಳಬೇಕು. ಅದಕ್ಕೆ ತಗುಲುವ ವೆಚ್ಚವೆಷ್ಟು ಎಂದು ಪ್ರಸ್ತಾವನೆ ಸಲ್ಲಿಸುವುದು   ನಿಯಮ. ಪ್ರಸ್ತಾವನೆ ಸಲ್ಲಿದ ನಂತರ ಕೊಡದೇ ಇದ್ದಲ್ಲಿ ಅದು ರಾಜ್ಯ ಅಥವಾ ಕೇಂದ್ರ ಸರ್ಕಾರದ ವೈಫಲ್ಯವಾಗಲಿದೆ.

ಜೊತೆಗೆ ವಸತಿ ರಹಿತರು ಎಂದು ಕೇಂದ್ರ ಸರ್ಕಾರದ ಪೋರ್ಟಲ್‌ನಲ್ಲಿ ನೊಂದಾಯಿಸಿಕೊಂಡಿರುವವರಲ್ಲಿ ಎಷ್ಟು ಜನ ಅರ್ಹರು, ಎಷ್ಟು ಜನ ಅನರ್ಹರು ಎಂದು ತಪಾಸಣೆ ಮಾಡಿ ನೈಜ ಅರ್ಹರಪಟ್ಟಿ ಪ್ರಕಟಿಸುವುದು ಕರ್ತವ್ಯ.

ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಅಧ್ಯಕ್ಷತೆಯಲ್ಲಿರುವ, ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯು ಈ ಯೋಜನೆಯ ಪಗ್ರತಿಪರಿಶೀಲನೆ ಮಾಡುವ ಪರಮಾಧಿಕಾರ ಹೊಂದಿದೆ. ಜಿಲ್ಲಾ ಮಟ್ಟದ ಐದು ದಿಶಾ ಸಮಿತಿ ಸಭೆಗಳು ಮುಗಿದಿವೆ. ಆರನೇ ಸಭೆ ದಿನಾಂಕ:22.01.2021 ರಂದು ನಡೆಯಲಿದೆ. ಆರನೇ ಸಭೆಯಲ್ಲೂ ಕಥೆ ಕೇಳಿ ಹೋಗುವುದು ಉಚಿತವಲ್ಲ.

 ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಲೋಕಸಭಾ ಸದಸ್ಯರಿಗೆ ರೂ 971 ಕೋಟಿ ವೆಚ್ಚದಲ್ಲಿ ನೂತನ ಸಂಸತ್ ಭವನವನ್ನು 2022 ರೊಳಗೆ ಕಟ್ಟಲಿದ್ದಾರೆ. ರಾಜ್ಯದ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಸುಮಾರು ರೂ 500 ಕೋಟಿ ವೆಚ್ಚದಲ್ಲಿ ಬಸವಣ್ಣನವರ ಅನುಭವ ಮಂಟಪವನ್ನು 2022 ರೊಳಗೆ ನಿರ್ಮಾಣ ಮಾಡಲಿದ್ದಾರೆ. ಅಯೋಧ್ಯೆಯಲ್ಲಿ ಶ್ರೀ ರಾಮನಿಗೆ 2022 ರೊಳಗೆ ಎಷ್ಟೇ ಹಣ ಖರ್ಚಾದರೂ ಶ್ರೀರಾಮಮಂದಿರ ನಿರ್ಮಾಣವಾಗಲಿದೆ ಇವೆಲ್ಲಾ ಒಂದು ತಪಸ್ಸು.

 ‘ದೇಶದ ಪ್ರಧಾನಿವರೇ ಘೋಷಣೆ ಮಾಡಿದ್ದರೂ 2022 ರೊಳಗೆ ವಸತಿ ರಹಿತ ಬಡವರಿಗೆ ವಸತಿ ನೀಡದೇ ಇದ್ದಲ್ಲಿ ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಯಾವ ನೈತಿಕತೆ ಇರಲಿದೆ. ಆತ್ಮಾವಲೋಕನ ಮಾಡಿಕೊಳ್ಳಲೇ ಬೇಕಾಗಿದೆ.’

ಜಿಲ್ಲೆಯ ಪ್ರತಿಯೊಂದು ಗ್ರಾಮವಾರು/ನಗರವಾರು ಆನ್‌ಲೈನ್ ಮೂಲಕವಾಗಲಿ, ಆಫ್‌ಲೈನ್ ಮೂಲಕವಾಗಲಿ  ವಸತಿ ರಹಿತರು, ನಿವೇಶನ ರಹಿತರಿಗೆ ನಿವೇಶನ ನೀಡಲು ಅಗತ್ಯವಿರುವ ಸರ್ಕಾರಿ ಜಮೀನು ಅಥವಾ ಖಾಸಗಿ ಜಮೀನು ಭೂಸ್ವಾಧೀನ ಮಾಡಿಕೊಳ್ಳುವ ಮಾಹಿತಿ ನೀಡಲೇ ಬೇಕು. ಈಗ ನಡೆದಿರುವ 5 ದಿಶಾ ಸಮಿತಿ ಸಭೆಗಳಲ್ಲೂ ಗಂಭೀರವಾಗಿ ಈ ಬಗ್ಗೆ ಚರ್ಚೆ ನಡೆದಿದೆ. ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರಾದ ಶ್ರೀಮತಿಶುಭ ಕಲ್ಯಾಣ್‌ರವರೇ, 6 ನೇ ಸಭೆಯಲ್ಲಿಯೂ ಹಾರಿಕೆ ಉತ್ತರಬೇಡ ನಿಖರವಾದ ಮಾಹಿತಿ ನೀಡಿ.

ಇಲ್ಲದೇ ಇದ್ದಲ್ಲಿ ಇದಕ್ಕೆ ಹೊಣೆಗಾರರಾದ ಗ್ರಾಮೀಣ ಪ್ರದೇಶಗಳಲ್ಲಿ ಪಿಡಿಓ. ಇಓ, ಜಿಲ್ಲಾಪಂಚಾಯತ್ ಪಿಡಿಯವರು ಮತ್ತು ಜಿಲ್ಲಾ ಪಂಚಾಯತ್ ಸಿಇಓರವರು. ಹಾಗೇಯೇ ನಗರ ಪ್ರದೇಶಗಳಲ್ಲಿ. ಚೀಫ್ ಆಫೀಸರ್, ಆಯುಕ್ತರು,  ಡಿಯುಡಿಸಿ ಪಿಡಿಯವರು ಮತ್ತು ಜಿಲ್ಲಾಧಿಕಾರಿಗಳು. ಸಂಸದರು ಸಹ ನೇರ ಜವಾಬ್ಧಾರಿ ಹೊರಲೇ ಬೇಕು ಅಲ್ಲವೇ?

 ಜೊತೆಗೆ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರುಗಳ ಅಧ್ಯಕ್ಷತೆಯಲ್ಲಿರುವ ಆಶ್ರಯ ಸಮಿತಿಗಳು ಎಂಬ ತಿಳುವಳಿಕೆ ನನ್ನದಾಗಿದೆ. ಇವರಲ್ಲಿ ಯಾರು ಕೆಲಸಮಾಡಿದ್ದಾರೆ, ಯಾರು ಕೆಲಸ ಮಾಡಿಲ್ಲ, ಏಕೆ ಮಾಡಿಲ್ಲ ಅಥವಾ ಯಾವಾಗ ಮಾಡಲಿದ್ದಾರೆ ಎಂಬ ಬಗ್ಗೆ ಸಭೆನಡವಳಿಕೆ ಮಾಡಲೇ ಬೇಕಾಗುತ್ತದೆ.

ಇದು ಜಿಲ್ಲೆಯ ಬಡವರ ಧ್ವನಿ ಶುಭ ಮೇಡಂ, ದಯವಿಟ್ಟು ಉದಾಸೀನ ಬೇಡ.