27th July 2024
Share

TUMKURU:SHAKTHIPEETA FOUNDATION

ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರ ಸಂಸದರ ಕನಸಿನ ಆದರ್ಶ ಗ್ರಾಮ ಯೋಜನೆಯ ಅನುಷ್ಠಾನಕ್ಕೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.

ಗುಬ್ಬಿ ತಾಲ್ಲೋಕಿನ ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ, ತಿಪಟೂರು ತಾಲ್ಲೋಕಿನ ಅರಳಗುಪ್ಪೆ ಗ್ರಾಮಪಂಚಾಯಿತಿ, ಚಿಕ್ಕನಾಯಕನಹಳ್ಳಿ ತಾಲ್ಲೋಕಿನ ಗೋಡೆಕೆರೆ ಗ್ರಾಮಪಂಚಾಯಿತಿ, ಕೊರಟಗೆರೆ ತಾಲ್ಲೋಕಿನ ಕುರುಂಕೋಟೆ ಗ್ರಾಮಪಂಚಾಯಿತಿ ಮತ್ತು ಮಧುಗಿರಿ ತಾಲ್ಲೋಕಿನ ಗಂಜಲಗುಂಟೆ ಗ್ರಾಮಪಂಚಾಯಿತಿ ಸೇರಿದಂತೆ ಐದು ಗ್ರಾಮಪಂಚಾತಿಯಿಗಳ ಅಭಿವೃದ್ಧಿಗೆ ಶ್ರಮಿಸಲು ಗ್ರಾಮಪಂಚಾಯಿತಿ ಜೊತೆಗೆ ಪ್ರತಿ ಗ್ರಾಮದ ಕಾಲೋನಿಗಳ, ತಾಂಡಾಗಳ, ಹಟ್ಟಿಗಳು ಸೇರಿದಂತೆ ಆಸಕ್ತ ಸಂಘಸಂಸ್ಥೆಗಳು ಅಥವಾ ವ್ಯಕ್ತಿಗಳಿಗೆ ಹೊಣೆಗಾರಿಕೆ ನೀಡಲು ಸುಧೀರ್ಘವಾಗಿ ಸಮಾಲೋಚನೆ ನಡೆಸಿದರು.

ದಿನಾಂಕ:04.06.2022 ರಂದು ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ನಿರ್ಣಯಕೈಗೊಂಡ ಹಿನ್ನಲೆಯಲ್ಲಿ ಇಂದು(22.06.2022) ರಂದು ಅವರ ಗೃಹ ಕಚೇರಿಯಲ್ಲಿ ಐದು ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸ್ವಯಂ ಸೇವಾಕಾಂಕ್ಷಿಗಳ ಸಭೆ ಕರೆದು ಜಿ.ಎಸ್.ಬಸವರಾಜ್ ರವರು ಸಂಸದರ ಆದರ್ಶ ಗ್ರಾಮ ಪಂಚಾಯಿತಿಯ ಬಗ್ಗೆ ಉಪನ್ಯಾಸ ನೀಡಿದರು.

ಜೊತೆಗೆ ಸದಸ್ಯರು ಮತ್ತು ಸೇವಾಕಾಂಕ್ಷಿಗಳ ಅಭಿಪ್ರಾಯ ಆಲಿಸಿದರು. 5 ಗ್ರಾಮಪಂಚಾಯಿತಿವಾರು ಪ್ರತ್ಯೇಕವಾಗಿ ಕುಳ್ಳಿರಿಸಿ ಗ್ರಾಮಪಂಚಾಯಿತಿವಾರು ಅಟೆಂಡೆನ್ಸ್ ಪಡೆದಂತೆ ಇತ್ತು. ಮುಂದಿನ ಸಭೆ ವೇಳೆಗೆ ಈ ಕೆಳಕಂಡ ಮಾಹಿತಿಗಳೊಂದಿಗೆ ಸಭೆ ಕರೆಯುವುದಾಗಿ ಷರತ್ತು ವಿಧಿಸಿದರು.

  1. ಸಂಸದರ ಆದರ್ಶ ಗ್ರಾಮ ಪಂಚಾಯಿತಿಯ ವಿಲೇಜ್ ಡೆವಲಪ್‍ಮೆಂಟ್ ಪ್ಲಾನ್ ಪ್ರತಿಯೊಬ್ಬರ ಕೈಯಲ್ಲೂ ಇರಬೇಕು.
  2. ಸಂಸದರ ಆದರ್ಶ ಗ್ರಾಮ ಪಂಚಾಯಿತಿ ಮಾರ್ಗದರ್ಶಿ ಸೂತ್ರ ಕೈಪಿಡಿ ಪ್ರತಿಯೊಬ್ಬರ ಕೈಯಲ್ಲೂ ಇರಬೇಕು.
  3. ಗ್ರಾಮಪಂಚಾಯಿತಿಯ ಪ್ರತಿ ಗ್ರಾಮದ ಕಾಲೋನಿಗಳ, ತಾಂಡಾಗಳ, ಹಟ್ಟಿಗಳು ಸೇರಿದಂತೆ ಆಯಾ ವಿಭಾಗದಲ್ಲಿನ ಕಾಮಗಾರಿಗಳ ಪಟ್ಟಿ ಪ್ರತ್ಯೇಕವಾಗಿ ಇರಬೇಕು. ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಆಧ್ಯತೆ ನೀಡಲಾಗುವುದು.
  4. ಐದು ಗ್ರಾಮಪಂಚಾಯಿತಿಗಳು ಜಿಐಎಸ್ ಜ್ಞಾನವಿರುವ ಪರಿಣಿತರ ಸೇವೆ ಪಡೆಯಲು ಸ್ವಲ್ಪ ಮುಂಗಡ ಹಣ ನೀಡಿ, ಯೋಜನೆ ಮಂಜೂರು ಮಾಡಿಸಿದಾಗ ಶೇ—- ಸೇವಾಶುಲ್ಕ ನೀಡುವುದಾಗಿ ಎಂ.ಓ.ಯು ಮಾಡಿಕೊಂಡು ಜಿಲ್ಲಾ ಪಂಚಾಯತ್ ಅನುಮತಿ ಪಡೆಯುವುದು.
  5. ಐದು ಗ್ರಾಮಪಂಚಾಯಿತಿಗಳು ಜಿಐಎಸ್ ನಕ್ಷೆಗಳನ್ನು ಗ್ರಾಮಪಂಚಾಯಿತಿಯಲ್ಲಿ ಪ್ರದರ್ಶನ ಮಾಡಬೇಕು.
  6. ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್, ಎನ್.ಆರ್.ಡಿ.ಎಂ.ಎಸ್. ಮತ್ತು ಮಾಹಿತಿ ಕಣಜದ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿ ಎಲ್ಲಾ ಮಾಹಿತಿಗಳನ್ನು ಅಫ್ ಲೋಡ್ ಮಾಡ ಬೇಕು.
  7. ಐದು ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗ್ರಾಮವಾರು ಕನಿಷ್ಠ 250 ಗಿಡಗಳನ್ನು ಸರ್ಕಾರಿ ಜಮೀನಿನಲ್ಲಿ ಅಥವಾ ರೈತರ ಜಮೀನಿನಲ್ಲಿ ಹಾಕಿಸಲು ಯೋಜನೆ ರೂಪಿಸಬೇಕು.
  8. ದಿನಾಂಕ:04.06.2022 ರಂದು ಜಿಲ್ಲಾ ಮಟ್ಟದಲ್ಲಿ ಕೈಗೊಂಡಿರುವ ಎಲ್ಲಾ ಯೋಜನೆಗಳ ನಿಖರ ಮಾಹಿತಿಯೊಂದಿಗೆ ಮುಂದಿನ ಸಭೆಗೆ ಹಾಜರಾಗ ಬೇಕು.
  9. ವಿವಿಧ ಇಲಾಖಾ ಅಧಿಕಾರಿಗಳಿಗೆ ವಿಡಿಪಿ ಪಟ್ಟಿ ರವಾನಿಸಿ, ಅವರವರ ಇಲಾಖೆ ಕೈಗೊಳ್ಳುವ ಕಾಮಗಾರಿಗಳ ಸೂಕ್ತ ವರದಿಯೊಂದಿಗೆ ಸಭೆಗೆ ಬರಲು ಸೂಚನೆ ನೀಡುವುದು.

ಮುಂದಿನ ಸಭೆಗೆ ಐದು ಗ್ರಾಮಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪ್ರತಿ ಗ್ರಾಮದ ಕಾಲೋನಿಗಳ, ತಾಂಡಾಗಳ, ಹಟ್ಟಿಗಳವಾರು ಸ್ವಯಂ ಸೇವಕರ ತಂಡ, ಪಿಡಿಓಗಳು, ನೋಡೆಲ್ ಆಫೀಸರ್ ಮತ್ತು ಲೈನ್ ಡಿಪಾರ್ಟ್‍ಮೆಂಟ್ ಅಧಿಕಾರಿಗಳು ಸಭೆಯಲ್ಲಿ ಇರುತ್ತಾರೆ.

ಎಲ್ಲಾ ಗ್ರಾಮಪಂಚಾಯಿತಿಗಳ ಪ್ರಗತಿ ಪರಿಶೀಲನೆ ಮಾಡಿ, ಯಾವ ಸದಸ್ಯರು ಉತ್ತಮವಾಗಿ ಕೆಲಸ ನಿರ್ವಹಣೆ ಮಾಡಿಕೊಂಡು ಬರುತ್ತಾರೋ ಅಂಥಹ ಸದಸ್ಯರಿಗೆ ರೂ 50000 ಹಣವನ್ನು ಮೊದಲನೇ ಕಂತಿನಲ್ಲಿ ಮಂಜೂರು ಮಾಡಲಾಗುವುದು. ಕೆಲಸ ಮಾಡದ ಸದಸ್ಯರ ವ್ಯಾಪ್ತಿಗೆ, ಕೆಲಸ ಮಾಡಿದ ನಂತರ ಮಂಜೂರು ಮಾಡಿಸಲಾಗುವುದು.

22 ಜನ ಸದಸ್ಯರಿರುವ ಗ್ರಾಮಪಂಚಾಯಿತಿಯ ಎಲ್ಲಾ ಸದಸ್ಯರು ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದರೆ, ಸುಮಾರು 11 ಲಕ್ಷ ಹಣವನ್ನು ಅವರು ಹೇಳಿದ ಕಾಮಗಾರಿಗೆ ಮಂಜೂರಾತಿ ನೀಡಲಾಗುವುದು ಎಂದು ಸಂಸದರು ಸಲಹೆ ನೀಡಿದರು.

ಐದು ಗ್ರಾಮಪಂಚಾಯಿತಿಗಳಿಗೆ ಉಚಿತವಾಗಿ ಸದಾಕಾಲ ಸೂಕ್ತ ಸಲಹೆ, ಮಾರ್ಗದರ್ಶನ ನೀಡುವುದಾಗಿ, ರಾಜ್ಯ ದಿಶಾ ಸಮಿತಿ ಸದಸ್ಯ ಹಾಗೂ ಶಕ್ತಿಪೀಠ ಫೌಂಡೇಷನ್ ಸಂಸ್ಥಾಪಕ ಕುಂದರನಹಳ್ಳಿ ರಮೇಶ್ ತಿಳಿಸಿದರು.

 ಎಲ್ಲಾ ಇಲಾಖೆಗಳ ಅನುದಾನ ಸೇರಿದಂತೆ ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಗೆ ವಿಡಿಪಿಯಲ್ಲಿರುವ ಮೊತ್ತದ ಕೋಟಿಗಳ ಯೋಜನೆ ಮಂಜೂರು ಮಾಡಿಸಿಕೊಳ್ಳಲೇ ಬೇಕು ಎಂಬ ಪ್ರತಿಜ್ಞೆ ಮಾಡಲು ಸದಸ್ಯರಿಗೆ ಸಲಹೆ ನೀಡಿದರು.

ದೇಶದಲ್ಲಿ ಯಾವೋಬ್ಬ ಸಂಸದರು ಏಕ ಕಾಲದಲ್ಲಿ ಐದು ಗ್ರಾಮಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು, ಈ ರೀತಿ ಎಲ್ಲರ ಸಹಕಾರ ದೊಂದಿಗೆ ಸಂಸದರ ಆದರ್ಶ ಗ್ರಾಮ ಪಂಚಾಯಿತಿಗೆ ಶ್ರಮಿಸಿದ ಉದಾಹರಣೆ ನಾನು ಇದೂವರೆಗೂ ನೋಡಿಲ್ಲ ಎಂದು ಬಿಜೆಪಿ ಹಿರಿಯ ನಾಯಕರಾದ ಶ್ರೀ ಶಿವಪ್ರಸಾದ್ ರವರು ತಿಳಿಸಿದರು. ಈ ಇಳಿವಯಸ್ಸಿನಲ್ಲಿ ಸಂಸದರ ಕಾರ್ಯವೈಖರಿ ನೋಡಿದರೆ ನಮಗೆ ಖುಷಿಯಾಗುತ್ತಿದೆ ಎಂದರು.

ದಿಶಾ ಸಮಿತಿ ಸದಸ್ಯರಾದ ಶ್ರೀ ಟಿ.ಆರ್.ರಘೋತ್ತಮ ರಾವ್ ರವರು ಐದು ಪಂಚಾಯಿತಿಗಳ, ಒಂದೊಂದು ಹೊಣೆಗಾರಿಕೆಯನ್ನು  ಒಬ್ಬೋಬ್ಬ ದಿಶಾ ಸಮಿತಿ ನಾಮ ನಿರ್ದೇಶನ ಸದಸ್ಯರು ಪಡೆಯಲು ಚಿಂತನೆ ಮಾಡಲಾಗುತ್ತಿದೆ. ಮುಂದಿನ ಸಭೆಯ ವೇಳೆಗೆ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದು ತಿಳಿಸಿದರು. ಯಾವ ಯೋಜನೆ ಮಂಜೂರು ಮಾಡಿಸಿಕೊಳ್ಳಬಹುದು ಎಂಬ ಸಲಹೆಯನ್ನು ನಾನು ಉಚಿತವಾಗಿ ನೀಡುತ್ತೇನೆ ಎಂದು ಘೋಷಣೆ ಮಾಡಿದರು.

ಹಲವಾರು ಸದಸ್ಯರು ಮಾತನಾಡಿ ಸೂಕ್ತ ಸಲಹೆ ನೀಡಿದರು. ಸಭೆಯಲ್ಲಿ ಶ್ರೀ ಸತ್ಯಾನಂದ್ ರವರು ಮತ್ತು ಜಿಐಎಸ್ ತಜ್ಞ ಶ್ರೀ ಬಸವರಾಜ್ ಸುರಣಗಿಯವರು ಮಾತನಾಡಿ, ಸಂಸದರು ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚನೆ ಮಾಡಿ, ನಂತರ ನಮಗೆ ಯಾವ ರೀತಿ ಸೇವಾಶುಲ್ಕ ನೀಡಬೇಕು ಎಂಬ ಬಗ್ಗೆ ನಿರ್ಧಾರ ಮಾಡುವುದಾಗಿ ತಿಳಿಸಿದ್ದಾರೆ.

ಈಗ ನಮಗೆ ಓಡಾಡಲು ಮತ್ತು ಪ್ರಿಂಟ್ ಮಾಡಲು ತಗಲುವ ವೆಚ್ಚವನ್ನು ಮಾತ್ರ ನೀಡಿ, ಯೋಜನೆ ಮಂಜೂರಾದ ಮೇಲೆ ಇಷ್ಟು ಹಣವನ್ನು ಸೇವಾಶುÀಲ್ಕವಾಗಿ ನೀಡಲು ಪಿಪಿಪಿ ಮಾದರಿಯಲ್ಲಿ ಎಂ.ಓ.ಯು ಮಾಡಿಕೊಂಡು ಸರ್ಕಾರದ ಅನುಮತಿ ಪಡೆಯೋಣ, ಯೋಜನೆ ಮಂಜೂರಾಗದಿದ್ದರೆ, ಅದು ನಮ್ಮ  ಸೇವೆ ಎಂದು ಸಹಕಾರ ನೀಡಲು ಮುಂದೆ ಬಂದಿದ್ದೇವೆ.

ಇದು ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಶ್ರೀ ಕುಂದರನಹಳ್ಳಿ ರಮೇಶ್ ರವರ ಸಲಹೆ ಯಾಗಿದೆ. ಅವರು ಹೇಳಿದ ಕೆಲಸ ಮಾಡಲು ನಮಗೂ ಖುಷಿಯಾಗಿದೆ ಎಂಬ ಅಭಿಪ್ರಾಯ ಮಂಡಿಸಿದರು.

ಶ್ರೀ ರಕ್ಷಿತ್ ರಾಮುಲು ವರಿಗೆ ವಾಟ್ಸ್ ಅಫ್ ಗ್ರೂಪ್ ರಚಿಸಿ, ಎಲ್ಲಾ ಐದು ಗ್ರಾಮ ಪಂಚಾಯಿತಿಗಳ ಜೊತೆ ಡಿಜಿಟಲ್ ಚರ್ಚೆ ನಡೆಸಲು ಸಂಸದರು ಸೂಚಿಸಿದರು.