22nd December 2024
Share

TUMAKURU:SHAKTHIPEETA FOUNDATION

ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಗಳೊಂದಿಗೆ ನದಿ ನೀರಿನ ಲೆಕ್ಕದ ಬಗ್ಗೆ ಸಮಾಲೋಚನೆ ಮಾಡುತ್ತಿರುವ ಶ್ರೀ ಜಿ.ಎಸ್.ಬಸವರಾಜ್

ರಾಜ್ಯ ಸರ್ಕಾರದ ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು ಮತ್ತು ಪ್ರಾಥಮಿಕ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ.ನಾಗೇಶ್ ರವರು, ತಮ್ಮ ತಮ್ಮ ಕ್ಷೇತ್ರದ ಬಹುತೇಕ ಎಲ್ಲಾ ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದಾರೆ. ಇದೊಂದು ಒಳ್ಳೆಯ ಯೋಜನೆ.

ಇದೇ ಮಾದರಿಯಲ್ಲಿ ತುಮಕೂರು ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಕೆರೆ-ಕಟ್ಟೆಗಳಿಗೂ ನದಿ ನೀರು ತುಂಬಿಸುವ ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿ ಎಂಬುದು ತುಮಕೂರು ಜಿಲ್ಲೆಯ ಜನತೆಯ ಅಭಿಲಾಷೆ.

ಈ ಬಗ್ಗೆ ಕೆಲವು ಮಾಹಿತಿಗಳ ಸಂಗ್ರಹ ಇಲ್ಲಿದೆ, ಇದು ಸರಿಯೋ, ತಪ್ಪೋ ಆಯಾ ಇಲಾಖೆಗಳು ಧೃಡೀಕರಿಸ ಬೇಕು. ಈ ಬಗ್ಗೆ  ತುಮಕೂರು ಜಿಲ್ಲೆಯ ಎಲ್ಲಾ ಹಾಲಿ ಮತ್ತು ಮಾಜಿ ಚುನಾಯಿತ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅದಕ್ಕೂ ಮುನ್ನ ಸಾರ್ವಜನಿಕರ ಅಭಿಪ್ರಾಯ, ಸಲಹೆ, ಮಾರ್ಗದರ್ಶನಕ್ಕಾಗಿ ಮನವಿ.

  1. ತುಮಕೂರು ಜಿಲ್ಲೆಯಲ್ಲಿ ವಾರ್ಷಿಕವಾಗಿ ಬೀಳುವ ಮಳೆ ನೀರಿನಿಂದ ಉತ್ಪತ್ತಿಯಾಗುವ ನೀರು 30 ರಿಂದ 45 ಟಿ.ಎಂ.ಸಿ ಅಡಿ ನೀರು. 
  2. ತುಮಕೂರು ಜಿಲ್ಲೆಯಲ್ಲಿರುವ ಅಧಿಕೃತ ಮತ್ತು ಅನಧಿಕೃತವಾಗಿರುವ 419107 ಬೋರ್ ವೆಲ್ ಗಳಿಂದ, ಪ್ರತಿ ವರ್ಷ ಬಳಕೆಯಾಗುವ ಅಂತರ್ಜಲ ಸುಮಾರು 30 ಟಿ.ಎಂ.ಸಿ ಅಡಿ ನೀರು.
  3. ಹರಿಯುವ ನೀರನ್ನು ತಡೆದು, ತಡೆದ ನೀರನ್ನು ಹಿಂಗಿಸಿದರೂ, 419107 ಬೋರ್ ವೆಲ್ ಬಕಾಸುರರಿಂದ ಸಂಗ್ರಹ ಮಾಡಿದ ಮಳೆ ನೀರು, ಕೆಲವೇ ದಿವಸಗಳಲ್ಲಿ  ನಾಪತ್ತೆಯಾಗಲಿದೆ.
  4. ಈ ಹಿನ್ನಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿರುವ ಸುಮಾರು 4345 ಜಲಸಂಗ್ರಹಾಗಾರಗಳ 48.20 ಟಿ.ಎಂ.ಸಿ.ಅಡಿ ನೀರು ಸಾಮಾಥ್ರ್ಯದ ನೀರು ಸಂಗ್ರಹ ಮರೀಚಿಕೆಯಾಗಿದೆ. ಹೀಗೆ ಮುಂದು ವರೆದರೆ ಮುಂದೊಂದು ದಿವಸ ಮರು ಭೂಮಿಯಾಗಲಿದೆ ಎಂಬ ಆತಂಕ ಇದೆ.
  5. ತುಮಕೂರು ಜಿಲ್ಲೆಗೆ ಕುಡಿಯುವ ನೀರು ಮತ್ತು ಕೆರೆಗಳಿಗೆ ತುಂಬಲು ಅಲೋಕೇಷನ್ ಆಗಿರುವ ವಿವಿಧ ನದಿಗಳಾದ ಹೇಮಾವತಿ-5.610 ಟಿ.ಎಂ.ಸಿ.ಅಡಿ ಎತ್ತಿನಹೊಳೆ-4.920 ಟಿ.ಎಂ.ಸಿ.ಅಡಿ ಭಧ್ರಾ ಮೇಲ್ದಂಡೆ-3.025 ಟಿ.ಎಂ.ಸಿ.ಅಡಿ, ತುಂಗಭಧ್ರಾ-0.70 ಟಿ.ಎಂ.ಸಿ.ಅಡಿ ಮತ್ತು ಕೊಳಚೆ ನೀರು ಸಂಸ್ಕರಣೆ-1.0 ಟಿ.ಎಂ.ಸಿ.ಅಡಿ ಹಾಗೂ ಹೇಮಾವತಿ ನದಿ ಪಾತ್ರದ ಸುಮಾರು 19.073 ಟಿ.ಎಂ.ಸಿ.ಅಡಿ ನೀರಿನ ಪ್ಲಡ್ ಇರ್ರಿಗೇಷನ್ ಅನ್ನು ರದ್ದು ಪಡಿಸಿ, ಮೈಕ್ರೋ ಇರ್ರಿಗೇಷನ್ ಗೆ ಬದಲಾವಣೆ ಮಾಡಿದರೆ ಉಳಿಯುವ ಸುಮಾರು 3 ರಿಂದ 4 ಟಿ.ಎಂ.ಸಿ ಅಡಿ ನೀರು ಸೇರಿದಂತೆ ದೊರೆಯುವ ಸುಮಾರು 20 ಟಿ.ಎಂ.ಸಿ.ಅಡಿ ನೀರಿನಲ್ಲಿ, ತುಮಕೂರು ಜಿಲ್ಲೆಯಲ್ಲಿನ ಹಾಲಿ ಇರುವ 4375 ಕೆರೆ-ಕಟ್ಟೆಗಳು ಮತ್ತು ಯಾವುದೇ ರೀತಿಯ ಜಲಸಂಗ್ರಹಾಗಾರಗಳು ಇಲ್ಲದ ಸುಮಾರು 550 ಗ್ರಾಮಗಳಲ್ಲಿ ಹೊಸದಾಗಿ ನಿರ್ಮಾಣ ಮಾಡುವ ಕೆರೆ-ಕಟ್ಟೆಗಳೂ ಸೇರಿಸಿದಂತೆ, ಶೇ 40 ರಷ್ಟು ನದಿ ನೀರು ತುಂಬ ಬಹುದಂತೆ. ಶೇ 100 ರಷ್ಟು ನದಿ ನೀರು ತುಂಬಲು ಇನ್ನೂ 30 ಟಿ.ಎಂ.ಸಿ ನದಿ ನೀರು ಬೇಕಂತೆ.
  6. ತುಮಕೂರು ಜಿಲ್ಲೆಯಲ್ಲಿ ಸುಮಾರು 165 ಟಿ.ಎಂ.ಸಿ ಅಡಿ ನೀರು ನಿಲ್ಲಿಸುವ ವಾಟರ್ ಬ್ಯಾಂಕ್ ನಿರ್ಮಾಣ ಮಾಡಬಹುದಂತೆ, ಈ ವಾಟರ್ ಬ್ಯಾಂಕ್ ಗೆ, ಸುಮಾರು 200 ಟಿ.ಎಂ.ಸಿ ನದಿ ನೀರು ತರುವ ವಿವಿಧ ಪ್ರಸ್ತಾವನೆಗಳು ಸರ್ಕಾರಗಳ ಹಂತದಲ್ಲಿ ಚರ್ಚೆಯಲ್ಲಿ ಇವೆಯಂತೆ.
  7. ಈ ನದಿ ನೀರಿನ ಲೆಕ್ಕವನ್ನು, ಆಯಾ ಇಲಾಖೆಗಳು ಧೃಡೀಕರಿಸಿದ ನಂತರ, ತುಮಕೂರು ಜಿಲ್ಲೆಯ ಚುನಾಯಿತ ಜನ ಪ್ರತಿ ನಿಧಿಗಳು ಮತ್ತು ಮಾಜಿ ಚುನಾಯಿತ ಜನಪ್ರತಿನಿಧಿಗಳು ಪಕ್ಷಬೇದ ಮರೆತು ಶ್ರಮಿಸಿದರೆ ಮಾತ್ರ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಜಾರಿಯಾಗಲಿದೆ. ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ನೀಡಬಹುದಾಗಿದೆ.
  8. ಸಣ್ಣ ನೀರಾವರಿ ಇಲಾಖೆ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು, ವಿವಿಧ ಇಲಾಖೆಗಳ ಪ್ರಸ್ತಾವನೆಯೊಂದಿಗೆ, ಅವರ ಇಲಾಖೆಯಿಂದ ಹಾಗೂ ವಿವಿಧ ಇಲಾಖೆಗಳಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಅಗತ್ಯವಾಗಿದೆ.
  9.  ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಕೇಂದ್ರ ಸರ್ಕಾರದಿಂದ, ತುಮಕೂರು ಜಿಲ್ಲೆಯ ಎಲ್ಲಾ ಕೆರೆಗಳಿಗೆ ನದಿ ನೀರು ತುಂಬಿಸುವ, ಜಲಜೀವನ್ ಮಿಷನ್ ಕಾರಿಡಾರ್ ಅಥವಾ ಅಂತರ್ಜಲ ಅಭಿವೃದ್ಧಿ ಕಾರಿಡಾರ್ ನಿರ್ಮಾಣ ಮಾಡುವ ಮತ್ತು ಪ್ಲಡ್ ಇರ್ರಿಗೇಷನ್ ನಿಂದ ಮೈಕ್ರೋ ಇರ್ರಿಗೇಷನ್ ಯೋಜನೆಗೆ ಹಣ ಮಂಜೂರು ಮಾಡಿಸಿಕೊಂಡು ಬರಲು ರಾಜ್ಯದ ಎಲ್ಲಾ ನಾಯಕರ ಸಹಕಾರ ಪಡೆದು ಶ್ರಮಿಸುವುದು ಸೂಕ್ತವಾಗಿದೆ. 

  ತುಮಕೂರು ಜಿಲ್ಲೆಯ ಜನರ ಹಿತದೃಷ್ಠಿಯಿಂದ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ, ಐತಿಹಾಸಿಕ ದಾಖಲೆ ಮಾಡಲಿರುವ ಯೋಜನೆಗೆ ಮುನ್ನುಡಿ ಬರೆಯಲು ಜಲಾಸಕ್ತರು ಕೈ ಜೋಡಿಸುವಿರಾ?