27th July 2024
Share

TUMAKURU:SHAKTHIPEETA FOUNDATION

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಕನಸಿನ ನೀರಾವರಿ ಯೋಜನೆಗಳ ಬಗ್ಗೆ ಒಂದು ಪುಸ್ತಕವನ್ನು ದಿನಾಂಕ:06.12.2004 ರಂದು ಸುಮಾರು 18 ವರ್ಷಗಳ ಹಿಂದೆ ನಾನೇ ಬರೆದಿದ್ದೆ. ಅಂದು ನನ್ನ ಜೊತೆಯಲ್ಲಿ ಅಪ್ನಾಸ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಹಾಗೂ ಪರಮಶಿವಯ್ಯನವರ ಜೊತೆಯಲ್ಲಿ ಇಲಾಖಾ ಇಂಜಿನಿಯರ್‍ಗಳಾದ  ಶ್ರೀ ಹೆಚ್.ಬಿ.ಮಲ್ಲೇಶ್, ಶ್ರೀ ವೆಂಕಟೇಶ್, ಶ್ರೀ ನಯಾಜ್, ಶ್ರೀ ಕಿರ್ಸೋರ್, ಶ್ರೀ ಶಶಿಧರ್, ಶ್ರೀ ಬಿ.ಎಂ.ರವಿ, ಶ್ರೀ ಚೌಡಪ್ಪ, ಸಲಹಾಗಾರರಾದ ಶ್ರೀ ವೇದಾನಂದಾ ಮೂರ್ತಿ, ಶ್ರೀ ಬಸವರಾಜ್ ಸುರಣಗಿ, ಶ್ರೀ ಸತ್ಯಾನಂದ್, ಡ್ರೈವರ್‍ಗಳಾದ ಶ್ರೀ ಶ್ರೀನಿವಾಸ್ ಮತ್ತು ಶ್ರೀ ಗಿರೀಶ್ ಇನ್ನೂ ಮುಂತಾದವರು ಸದಾ ಇರುತ್ತಿದ್ದರು.

ಅಂದು ಸಹ ಶ್ರೀ ಜಿ.ಎಸ್.ಬಸವರಾಜ್ ರವರು ನಮ್ಮೆಲ್ಲರ ಕ್ಯಾಪ್ಟನ್ ಆಗಿದ್ದರು, ಇಂದು ಸಹ ಅವರೇ ಆಗಿದ್ದಾರೆ. ಈ ಟೀಮ್ ನ ಬಹುತೇಕ ಜನರು ಜೊತೆಯಲ್ಲಿಯೇ ಇದ್ದೇವೆ, ಕೆಲವರು ದೂರದ ಊರಿನಲ್ಲಿದ್ದಾರೆ. ಇನ್ನೂ ಕೆಲವರು ಹೊಸದಾಗಿ ನಮ್ಮ ಟೀಮ್ ಜೊತೆ ಸೇರ್ಪಡೆಯಾಗಿದ್ದಾರೆ. ಒಂದೆರಡು ತಿಂಗಳಲ್ಲಿ ಇವರನ್ನು ಸೇರಿಸಿಕೊಂಡು ಒಂದು ವಿಷನ್ ಗ್ರೂಪ್ ರಚಿಸಲಾಗುವುದು. ಹೊಸದಾಗಿ ಶಕ್ತಿಪೀಠ ಫೌಂಡೇಷನ್ ಸೇರ್ಪಡೆಯಾಗಿದೆ.

ಅಂದು ಬರೆದ ಪುಸ್ತಕದ ಅಂಶಗಳ/ಯೋಜನೆಗಳ ಮೌಲ್ಯಮಾಪನ ಮಾಡುವ ಅವಕಾಶ ಈ ಟೀಮ್ ಗೆ ಲಭಿಸಿದೆ ಎಂದರೆ ನಿಜಕ್ಕೂ ಒಂದು ಹೆಮ್ಮೆಯ ವಿಚಾರ. ಅಂದು ಈ ಎಲ್ಲಾ ವರದಿಗಳನ್ನು ನನ್ನ ಪತ್ನಿ ಶ್ರೀಮತಿ ಬಿ.ಸುಜಾತಕುಮಾರಿ ಟೈಪ್ ಮಾಡುತ್ತಿದ್ದರು, ಇಂದು ನನ್ನ ಪುತ್ರ ಮೌಲ್ಯಮಾಪನ ಮಾಡುವ ತಂಡದ ಟೀಮ್‍ನ ನೇತೃತ್ವ ವಹಿಸಿದ್ದಾರೆ.

ಬೆಂಗಳೂರಿನ ಇಐ ಟೆಕ್ನಾಲಜಿಯ ಶ್ರೀ ಎನ್.ರಂಗನಾಥ್‍ರವರು ಕಲ್ಪನಾ ವರದಿ ಮತ್ತು ಮ್ಯಾಪ್‍ಗಳನ್ನು ಸಿದ್ಧಪಡಿಸುತ್ತಿದ್ದಾರೆ. ಶ್ರೀ ಹರೀಶ್ ರವರು ಹೊಸ ಸೇರ್ಪಡೆಯಾಗಿದ್ದಾರೆ, ಈ ವರದಿಯ ಕರಡು ಪ್ರತಿಯನ್ನು ರಾಜ್ಯದ 31 ಜಿಲ್ಲೆಗಳಲ್ಲಿಯೂ ಪ್ರಚಾರ ಮಾಡಿ ವಿವಿಧ ವರ್ಗದವರ ಅಭಿಪ್ರಾಯ ಸಂಗ್ರಹಿಸಲು ಶ್ರೀ ಜಿ.ಎಸ್.ಬಸವರಾಜ್ ರವರು ಸಲಹೆ ನೀಡಿದ್ದಾರೆ. ಶಕ್ತಿಪೀಠ ಫೌಂಡೇಷನ್ ಸಮರ್ಥವಾಗಿ ಕಾರ್ಯ ನಿರ್ವಹಿಸಲಿದೆ.