9th October 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯಲ್ಲಿರುವ ತಲಪುರಿಕೆಗಳನ್ನು ಯಾವ ಇಲಾಖೆ ಪುನಶ್ಛೇತನ ಮಾಡಬೇಕು. ಇವುಗಳು ಯಾವ ಇಲಾಖೆ ವ್ಯಾಪ್ತಿಗೆ ಸೇರುತ್ತವೆ, ಇದೂವರೆಗೂ ಯಾವ ಇಲಾಖೆಯಾದರೂ ತಲಪುರಿಕೆಗಳ ಪುನಶ್ಚೇತನಕ್ಕೆ ಯೋಜನೆ ರೂಪಿಸಲಾಗಿದಿಯೇ, ಎಂಬ ಸ್ವಾರಸ್ಯಕರವಾದ ಪ್ರಶ್ನೆಗಳನ್ನು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಕೇಳಿದ ಪ್ರಸಂಗ ನಡೆಯಿತು.

ಅವರು ದಿನಾಂಕ:21.06.2022 ರಂದು ಕೊರಟಗೆರೆ ತಾಲ್ಲೋಕು, ಕುರುಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಲತಾಳ್ ಗ್ರಾಮದ ಶ್ರೀ ಡಾ.ಸಿದ್ಧಗಂಗಪ್ಪನವರ ಜಮೀನಿನಲ್ಲಿರುವ ತಲಪುರಿಕೆ ವೀಕ್ಷಣೆ ಮಾಡಿ ಮಾತನಾಡಿದರು.

ಸಂಸದರ ಆದರ್ಶ ಗ್ರಾಮ ಯೋಜನೆಯಡಿ ತಲಪುರಿಕೆಗಳಿಗೆ ಜೀವ ತುಂಬಲು, ಈ ಭಾಗದ ಹಿರಿಯರನ್ನು ಸೇರಿಸಿ, ತಲಪುರಿಕೆಗಳ ಬಗ್ಗೆ ಸಂಶೋಧನೆ ಮಾಡಿರುವ ಮತ್ತು ಆಳವಾದ ಜ್ಞಾನವಿರುವ ರೈತರ ಅಭಿಪ್ರಾಯ ಸಂಗ್ರಹ ಮಾಡಿದರು.

ಕುರುಂಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಗಿರಿಜರವರು ಮಾತನಾಡಿ, ನಮಗೆ ತಲಪುರಿಕೆಗಳ ಬಗ್ಗೆ ತಿಳಿದಿರಲಿಲ್ಲ, ಶ್ರೀ ಜಿ.ಎಸ್.ಬಸವರಾಜ್ ರವರು ಈ ತೋಟಕ್ಕೆ ಬಂದು ಸಭೆ ಮಾಡುತ್ತಿರುವುದು ನಮಗೆ ಹೆಮ್ಮೆ ಎಂದರು.

ಸುಮಾರು 97 ವರ್ಷದ ನಿವೃತ್ತ ಉಪಾದ್ಯಾಯರಾದ ಶ್ರೀ ದೊಡ್ಡನರಸಪ್ಪವರನ್ನು ವೇದಿಕೆ ಮೇಲೆ ಕುಳ್ಳಿರಿಸಿ ತಲಪುರಿಕೆಗಳ ಬಗ್ಗೆ ಮಾತನಾಡಿಸುವ  ಒಂದು ವಿಶೇಷತೆ ಇತ್ತು. ದೊಡ್ಡನರಸಪ್ಪನವರು ಮಾತನಾಡಿ, ಈ ತಲಪುರಿಕೆಗಳಿಗೆ ಯಜಮಾನರು ಯಾರು ಎಂಬ ಬಗ್ಗೆ ಜನರಿಗೆ ಮನವರಿಕೆ ಮಾಡಲು ಸಂಸದರಿಗೆ ಸಲಹೆ ನೀಡಿದರು.

ಡಾ.ಸಿದ್ದಗಂಗಪ್ಪನವರು ಹಲವಾರು ತಲಪುರಿಕೆಗಳ ಬಗ್ಗೆ ಜ್ಞಾನವಿರುವ ರೈತರನ್ನು ಸೇರಿಸಿ, ಅವರ ಅನುಭವಗಳನ್ನು ಹಂಚಿಕೊಂಡರು.ತಲಪುರಿಕೆಯ ನೀರನ್ನು ರಾಜ್ಯದ ಹಲವಾರು ಜನ ಕುಡಿಯಲು ಇಲ್ಲಿಗೆ ಬಂದು ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಅಂಶವನ್ನು ಬಹಿರಂಗ ಪಡಿಸಿ, ಎಲ್ಲರೂ ಚಿಂತನೆ ಮಾಡುವ ಹಾಗೆ ಮಾಡಿದರು.

ಇಷ್ಟೊಂದು ಔಷಧೀಯ ಗುಣಗಳು ಇದ್ದರೆ ಏಕೆ ತಲಪುರಿಕೆ ಬ್ರ್ಯಾಂಡ್ ಮಾಡಿ, ಕುಡಿಯಲು ಈ ನೀರು ಬಳಸಬಾರದು, ಎಷ್ಟು ಪ್ರಮಾಣದ ನೀರು ಯಾವ ವೇಳೆ ದೊರೆಯಲಿದೆ.  ಈ ನೀರಿನಲ್ಲಿ ಯಾವ ಅಂಶಗಳು ಇವೆ ಎಂಬ ಬಗ್ಗೆ ಅಧ್ಯಯನ ನಡೆಸಬೇಕಿದೆ ಎಂಬ ಬಗ್ಗೆ ಕೆಲವರು ಅಭಿಪ್ರಾಯ ಪಟ್ಟರು.

ಕೊರಟಗೆರೆ ತಾಲ್ಲೋಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ವೆಂಕಟೇಶ್ ರವರು ಮಾತನಾಡಿ, ಶ್ರೀ ಜಿ.ಎಸ್.ಬಸವರಾಜ್ ರವರೇ ತಲಪುರಿಕೆ ಸ್ಥಳಕ್ಕೆ ಬಂದು ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆಯುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದು ಹರ್ಷ ವ್ಯಕ್ತ ಪಡಿಸಿದರು.

ಶಕ್ತಿಪೀಠ ಫೌಂಡೇಷನ್ ಸಂಸ್ಥಾಪಕ ಹಾಗೂ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ತಲಪುರಿಕೆಗಳ ಜಿಯೋ ಟ್ಯಾಗಿಂಗ್ ಮಾಡಿ, ಅವುಗಳ ಇತಿಹಾಸ ಸಂಗ್ರಹಿಸಲು ಶ್ರೀ ವೇದಾನಂದಾ ಮೂರ್ತಿರವರು, ಶ್ರೀ ಸತ್ಯಾನಂದ್ ರವರು, ಶ್ರೀ ಬಸವರಾಜ್ ಸುರಣಗಿಯವರು ಇಲ್ಲಿಗೆ ಆಗಮಿಸಿದ್ದಾರೆ. ಅವರಿಗೆ ನಿಮ್ಮ ಅನುಭವಗಳನ್ನು ಧಾರೆ ಎರೆಯಿರಿ ಎಂದು ರೈತರಿಗೆ ಮನವಿ ಮಾಡಿದರು.

ಮಣುವಿನ ಕುರಿಕೆ ಶಿವರುದ್ರಪ್ಪನವರು ಮತ್ತು ಅವರ ಗ್ರಾಮದ ರೈತರು ಮಣುವಿನಕುರಿಕೆ ಕುಡಿಯುವ ನೀರಿನ ಅಡಚಣೆ ಬಗ್ಗೆ ಸಂಸದರ ಗಮನ ಸೆಳೆದರು.

 ತಲಪುರಿಕೆ ಸಂಶೋಧಕರಾದ ತೋವಿನಕೆರೆ ಶ್ರೀ ಪದ್ಮರಾಜ್ ರವರು ಮಾತನಾಡಿ, ಶ್ರೀ ಮಲ್ಲಿಕಾರ್ಜುನ ಹೊಸಪಾಳ್ಯ ರವರು ಸೇರಿದಂತೆ, ತಲಪುರಿಕೆ ಬಗ್ಗೆ ಅಧ್ಯಯನ ಮಾಡಿರುವ ಎಲ್ಲರ ಸಹಕಾರ ಪಡೆದು ಕುಂದರನಹಳ್ಳಿ ರಮೇಶ್ ರವರಿಗೆ ನೀಡುತ್ತೇವೆ. ಇವುಗಳಿಗೆ ಜೀವ ಕೊಡಿಸಿ ಎಂದು ಸಂಸದರಲ್ಲಿ ಮನವಿ ಮಾಡಿದರು.

ಗ್ರಾಮಪಂಚಾಯಿತಿ ಪಿಡಿಓ ಶ್ರೀ ರಂಗಸ್ವಾಮಿರವರು, ಅಧ್ಯಕ್ಷರು, ಉಪಾಧ್ಯಾಕ್ಷರು, ಸದಸ್ಯರು ಸೇರಿದಂತೆ ಹಲವಾರು ತಲಪುರಿಕೆ ರೈತ ಸಂಶೋಧಕರನ್ನು ಆಹ್ವಾನಿಸಿ ಅಚ್ಚುಕಟ್ಟಾಗಿ ಸಭೆ ಆಯೋಜಿಸಿದ್ದರು. ಇದೊಂದು ತಲಪುರಿಕೆ ಅವಿಭಕ್ತ ಕುಟುಂಬವರ ಸಭೆಯಂತೆ ಇತ್ತು.

ಅಟಲ್ ಭೂ ಜಲ್ ಯೋಜನೆಯ ಸಮೀಕ್ಷೆ ಮಾಡುವ ಎನ್.ಜಿ.ಓ ಗಳಿಗೆ, ನಾವು ಎಂಥಾ ತಪ್ಪು ಮಾಡಿದೆವು. ಈ ಬಗ್ಗೆ ನಮಗೆ ಯಾರು ಇದೂವರೆಗೂ ಹೇಳಿರಲಿಲ್ಲ ಎಂಬ ಆಶ್ಚರ್ಯ ವ್ಯಕ್ತಪಡಿಸಿದರು.ಇನ್ನೂ ಮುಂದೆ ಒಂದೇ ಒಂದು ತಲಪುರಿಕೆಯನ್ನು ಬಿಡದ ಹಾಗೆ ಹುಡುಕಿ ಪೋರ್ಟಲ್‍ನಲ್ಲಿ ಅಫ್ ಲೋಡ್ ಮಾಡುವುದಾಗಿ ತಿಳಿಸಿದರು.