22nd December 2024
Share

TUMAKURU:SHAKTHIPEETA FOUNDATION

  ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಧರ್ಮಸಿಂಗ್ ನಂತರ ಅಧಿಕಾರಕ್ಕೆ ಬಂದ ಜನತಾದಳ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಶ್ರೀ ಬಿ.ಎಸ್.ಯಡಿಯೂಪ್ಪನವರು ಉಪ ಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರಾಗಿದ್ದರು. ಮಾನ್ಯ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯ ಮಂತ್ರಿಗಳಾಗಿದ್ದರು.

  ತುಮಕೂರಿಗೆ ವಿಶೇಷ ಪ್ಯಾಕೇಜ್ ಮಂಜೂರು ಮಾಡಿಸುವ ನಮ್ಮ ಹೋರಾಟ ನಿರಂತರವಾಗಿತ್ತು. ಸಿದ್ದಂಗಂಗಾ ಶ್ರೀಗಳ ಜನ್ಮಶತಮಾನೋತ್ಸವದ ಅಂಗವಾಗಿ ನೀಡಲೇಬೇಕು ಎಂದು ಸುಮಾರು 318 ಸಂಘ ಸಂಸ್ಥೆಗಳಿಂದ ಪತ್ರಚಳುವಳಿ ಆರಂಭಿಸಲಾಯಿತು.

  ನಮ್ಮ ತುಮಕೂರಿನ ಶಾಸಕರಾದ ಶ್ರೀ ಸೊಗಡು ಶಿವಣ್ಣನವರು ಅದೇ ರಾಗ ಅದೇ ಹಾಡು ಎನ್ನುವ ರೀತಿ ಯಾರು ವಿಶೇಷ ಪ್ಯಾಕೇಜ್ ನೀಡುತ್ತಾರೆ, ಯಾವುದಾದರೂ ನಿರ್ಧಿಷ್ಟ ಯೋಜನೆಗೆ ಮಂಜೂರು ಮಾಡುತ್ತಾರೆ ಇದೆಲ್ಲಾ ಬುರುಡೆ ಎಂದು ಹೇಳಿಕೆ ನೀಡಿಯೇ ಬಿಟ್ಟರು.

 ನಾವು ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಶ್ರೀ ಬಿ.ಎಸ್.ಯಡಿಯೂರಪ್ಪನರಿಗೆ ಮನವರಿಕೆ ಮಾಡಲು ಶ್ರಮಿಸಿದೆವು. ಶ್ರೀ ಜಿ.ಎಸ್.ಬಸವರಾಜ್‌ರವರು ಕಾಂಗ್ರೆಸ್‌ನಲ್ಲಿದ್ದರು. ಆವಾಗ ಅವರು ಮಾಜಿಯಾಗಿದ್ದರು. ಅವರನ್ನು ಬಳಸಿಕೊಳ್ಳಲು ಆಗಲಿಲ್ಲ.

   ದಿನಾಂಕ:16.03.2007 ರಂದು ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಂಡಿಸಿದ 2007-08 ಆಯವ್ಯಯದ ಪುಟ ಸಂಖ್ಯೆ 88 ರಲ್ಲಿ 221 ನೇ ವಿಷಯ: ನಮ್ಮ ಸರ್ಕಾರವೂ ತುಮಕೂರು ನಗರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು 54 ಕೋಟಿ ರೂಗಳನ್ನು ಒದಗಿಸಲು ಉದ್ದೇಶಿಸಿದೆ ಎಂದು ಘೋಷಣೆ ಮಾಡಿದರು. ಸಿದ್ಧಗಂಗಾ ಶ್ರೀಗಳ ಜನ್ಮ ಶತಮಾನೋತ್ಸವದ ಅಂಗವಾಗಿ ನಮ್ಮ ಬಹುದೊಡ್ಡ ಬೇಡಿಕೆ ಹೀಡೆರಿತು.

  ಫೋರಂ ವಿರುದ್ಧ ವಿಶೇಷ ಪ್ಯಾಕೇಜ್ ಬುರುಡೆ ಎಂದವರು ನಗರದ ಎಂ.ಜಿ.ರೋಡ್‌ನಲ್ಲಿ ಪಟಾಕಿ ಸುಟ್ಟು ಜೈಕಾರ ಹಾಕಿದರು. ಇಷ್ಟು ದೊಡ್ಡ ಮೊತ್ತದ ಅನುದಾನದ ಯೋಜನೆ ನಗರದ ಇತಿಹಾಸದಲ್ಲಿ ಮಂಜೂರಾಗಿರಲಿಲ್ಲ.  

  ನಂತರ ವಿಶೇಷ ಪ್ಯಾಕೇಜ್ ಬಳಕೆ ಬಗ್ಗೆ ಪಬ್ಲಿಕ್ ಟಾಸ್ಕ್ ಪೋರ್ಸ್ ರೀತಿ ಕೆಲಸ ಮಾಡಲು ಪ್ರಜಾಪ್ರಗತಿ ಸಂಪಾದಕರಾದ ಶ್ರೀ ಎಸ್.ನಾಗಣ್ಣನವರು, ವರದಿಗಾರರಾದ ಶ್ರೀ ಆರ್.ಎಸ್.ಅಯ್ಯರ್‌ರವರ ಬಳಿ ಸಮಾಲೋಚನೆ ಮಾಡಿ ತುಮಕೂರು ನಗರದ ನಿವೃತ್ತ ಇಂಜಿನಿಯರ್‌ಗಳ ಅಸೋಶಿಯೇಷನ್ ರಚಿಸಲಾಯಿತು.

  ನಿವೃತ್ತ ಇಂಜಿನಿಯರ್‌ಗಳ ಅಸೋಶಿಯೇಷನ್ ಕಾರ್ಯವೈಖರಿಗೆ ಬೆಚ್ಚಿಬಿದ್ದು ನಮ್ಮ ಅಸೋಶಿಯೇಷನ್, ಫೋರಂ  ಮತ್ತು ನನ್ನ ವಿರುದ್ಧ ಗುತ್ತಿಗೆದಾರರು ನಗರಸಭೆ ಮುಂದೆ ಚಳುವಳಿ ನಡೆಸಲು ಸಜ್ಜಾದರು. ಒಬ್ಬ ಮಾಧ್ಯಮ ಸ್ನೇಹಿತ ಬಂದು ರಾಜಿ ಮಾಡಿಕೊಳ್ಳಿ ಸುಖಾ ಸುಮ್ಮನೆ ಅವರನ್ನು ವಿರುದ್ಧ ಹಾಕಿಕೊಳ್ಳುವುದು ಬೇಡ ಎಂಬ ಸಂದೇಶ ಹೊತ್ತು ಬಂದರು.

  ಆತನಿಗೆ ಮಂಗಳಾರತಿ ಮಾಡಿ ಕಳುಹಿಸಿದೆ, ಪ್ರತಿಭಟನೆ ಮಾಡಿದರು ಆದರೇ ಏಕೋ ನನ್ನ ಹೆಸರು ಅಥವಾ ನಮ್ಮ ಸಂಸ್ಥೆಯ ಹೆಸರು ಎತ್ತದೆ ಕೆಲವು ಸಂಘಟನೆಗಳು ವಿನಾಕಾರಣ ಅಭಿವೃದ್ಧಿಗೆ ತೊಂದರೆ ಕೊಡುತ್ತಿವೆ ಎಂದು ಕೂಗಾಡಿ ಹೋದರು.

  ಕೆಲವು ಗುತ್ತಿಗೆದಾರರಿಗೆ ಕೋಟಿಗಟ್ಟಲೆ ನೀರಾಳವಾಗಿ ಬರುವ ಹಣಕ್ಕೆ ಕೊಕ್ಕೆ ಬಿತ್ತು. ಅವರು ಇಂದಿಗೂ ನನ್ನ ಮೇಲೆ ಗರಂ ಆಗಿದ್ದಾರೆ. ಪಾಪ ಅವರಿಗೆ ತೊಂದರೆ ಆಗಿರಬಹುದು. ಆದರೂ ನಗರ ಸ್ವಲ್ಪ ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕಿತು.

  ಒಂದು ದಿವಸ ನಮ್ಮ ಮನೆ ಮುಂದೆ ನಗರಸಭೆ ಆಯುಕ್ತರಾದ ಶ್ರೀಮತಿ ತುಳಸಿ ಮದ್ದಿನೇನಿ, ಟೂಡಾ ಆಯುಕ್ತರಾದ ಶ್ರೀ ಆದರ್ಶಕುಮಾರ್, ಇಂಜಿನಿಯರ್‌ಗಳಾದ ಶ್ರೀ ಹರೀಶ್, ಶ್ರೀ ಪ್ರಕಾಶ್‌ರವರು ಕಾರಿನಲ್ಲಿ ಹೋಗುವಾಗ ಮೇಡಂ ಇದೇ ಕುಂದರನಹಳ್ಳಿ ರಮೇಶ್‌ರವರ ಮನೆ ಎಂದಿದ್ದಾರೆ.

 ಇವರ ಮನೆ ರಸ್ತೆ ಏಕೆ ಅಭಿವೃದ್ಧಿ ಮಾಡಿಲ್ಲ ಎಂದು ಕೇಳಿದರಂತೆ, ಅವರಿಗೂ ಶಾಸಕರಿಗೂ ಅಂತಹ ಆತ್ಮೀಯತೆ ಇದೆ ಎಂದು ಹೇಳಿದ್ದಾರೆ. ಮೇಡಂ ನನಗೆ ಕೇಳಿದರು ನಿಮ್ಮ ಮನೆ ರಸ್ತೆ ಅಭಿವೃದ್ಧಿ ಮಾಡುತ್ತೇವೆ ಎಂದಾಗ ನನಗೆ ನಗು ಬಂತು. ಶಾಸಕರನ್ನು ಮೊದಲು ಕೇಳಿ ಎಂದೆ ಅವರು ನಕ್ಕರು.

  ಮೇಡಂ ಈ ರಸ್ತೆ 60 ಅಡಿ ಅಗಲ ಇದೆ, ಎರಡು ಮನೆಗಳು ಅಡ್ಡಬರುತ್ತವೆ, ಅವುಗಳನ್ನು ಭೂ ಸ್ವಾದೀನ ಮಾಡಿಕೊಳ್ಳಬೇಕು. ಒಬ್ಬರೂ ರಸ್ತೆಗೆ ಪಾಯ ಮಾಡಿದ್ದಾರೆ. ಈ ರಸ್ತೆಯಲ್ಲಿ ಮಾಜಿ ಶಾಸಕರಾದ ಶ್ರೀ ಎಸ್.ಷಫಿ ಅಹಮ್ಮದ್‌ರವರ ಮನೆ ಇದ್ದರೂ ರಸ್ತೆ ಮಾಡೋಕೆ ಆಗಿಲ್ಲ ಎಂದು ಮಾಹಿತಿ ನೀಡಿದೆ.

  ಕೊನೆಗೂ ಎಲ್ಲಾ ಸಮಸ್ಯೆ ಬಗೆ ಹರಿಸಿ, ತುಮಕೂರಿನ ಇತಿಹಾಸದಲ್ಲಿ ಒಂದು ಬಡಾವಾಣೆಯ ರಸ್ತೆಯ ಮನೆಗಳನ್ನು ಭೂಸ್ವಾಧಿನ ಪಡಿಸಿಕೊಂಡು, ತೆರವುಗೊಳಿಸಿ ಈ ತಂಡ ರಸ್ತೆ ಅಭಿವೃದ್ದಿ ಮಾಡಲು ಟೆಂಡರ್ ಕರೆದರೆ ಯಾರು ಟೆಂಡರ್ ಹಾಕಲು ಮುಂದೆ ಬರಲಿಲ್ಲ. ಕೊನೆಗೆ ಗುತ್ತಿಗೆದಾರರಾದ ಶ್ರೀ ನಾರಾಯಣಪ್ಪನವರು ಟೆಂಡರ್ ಹಾಕಿ ರಸ್ತೆ ಮಾಡಿದರು. ಕೊನೆಗೂ ವಿಶೇಷ ಪ್ಯಾಕೇಜ್‌ನಲ್ಲಿ ನಮ್ಮ ಮನೆ ಮುಂದಿನ ರಸ್ತೆಯೂ ಅಭಿವೃದ್ಧಿ ಆಯಿತು.

ಕನಸು ಕಂಡರೇ ಒಂದಲ್ಲ ಒಂದು ದಿನ ಖಂಡಿತ ಪ್ರತಿಫಲ ಸಿಗಲಿದೆ.