2nd March 2024
Share

    TUMAKURU:SHAKTHIPEETA FOUNDATION

 ಕೆಐಡಿಬಿಯವರು ಗುಬ್ಬಿ ತಾಲ್ಲೂಕು ಬಿದರೆಹಳ್ಳಕಾವಲ್ ಜಮೀನಿನನ್ನು ಕೈಗಾರಿಕಾ ವಸಾಹತು ಮಾಡಲು ನೋಟಿಫಿಕೇಷನ್ ಮಾಡುವಾಗ ಮಾಡಿದ ಒಂದು ತಪ್ಪು ಇಡೀ ಬಿದರೆಹಳ್ಳಕಾವಲ್ ಜನತೆಯ ನಿದ್ದೆಗೆಡಿಸಿತು. ನಾನು ಸಚಿವರಿಗೆ ಬರೆದ ಪತ್ರದಲ್ಲಿ ಬಿದರೆಹಳ್ಳಕಾವಲ್ ಗ್ರಾಮ ಮತ್ತು ಅವರಿಗೆ ಈಗಾಗಲೇ ಮಂಜೂರಾಗಿರುವ ಜಮೀನು ಹೊರತು ಪಡಿಸಿ ಉಳಿದ ಜಮೀನನ್ನು ಕೈಗಾರಿಕಾ ವಸಾಹತು ಮಾಡಲು ಮನವಿ ಮಾಡಿದ್ದೆ.

  ಶ್ರೀ ಜಿ.ಎಸ್. ಬಸವರಾಜ್‌ರವರು ಸಹ ಯಾವಾಗಲೂ ಇದನ್ನೇ ಪ್ರತಿ ಪಾದಿಸುತ್ತಿದ್ದರು. ಕೆಐಡಿಬಿಯ ಶ್ರೀ ನರಸಿಂಹ ರೆಡ್ಡಿಯವರು ಮತ್ತು ಅವರ ತಂಡಕ್ಕೆ ನಾನು ಹತ್ತಾರು ಸಲ ಈ ಮಾತು ಹೇಳಿದರೂ ಎಲ್ಲಾ ಜಮೀನು ಸೇರಿ ನೋಟಿಫಿಕೇಷನ್ ಮಾಡಿ ಬಿಟ್ಟರು. ಕೆಐಡಿಬಿಯ  ನಿಯಾಮುನುಸಾರ ಮೊದಲು ನೋಟಿಫಿಕೇಷನ್ ಮಾಡಿ ಎರಡನೇ ಹಂತದಲ್ಲಿ  ಅಗತ್ಯವಿರುವ ಜಮೀನು ಪಡೆದು, ರೈತರು ಒಪ್ಪದ, ಉಳಿದ ಜಮೀನಿನ್ನು ಬಿಡುವುದು ವಾಡಿಕೆಯಂತೆ ಅವರ ವಾಡಿಕೆ ನನಗೆ ತಲೆನೋವಾಯಿತು.

   ಕೆಐಡಿಬಿಯವರು ಗುಬ್ಬಿ ತಾಲ್ಲೂಕು ಬಿದರೆಹಳ್ಳಕಾವಲ್ ಜಮೀನಿನನ್ನು ಕೈಗಾರಿಕಾ ವಸಾಹತು ಮಾಡಲು ಹಲವಾರು ಅಂಶಗಳು ಒಮ್ಮೇಲೆ ಬಂದವು, ತುಮಕೂರು ನಿಮ್ಜ್‌ಗೆ ಜಿಲ್ಲೆಯಲ್ಲಿ 12500 ಎಕರೆ ಜಮೀನಿನನ್ನು ನೋಟಿಫಿಕೇಷನ್ ಮಾಡಬೇಕಿತ್ತು. ಬಿಜೆಪಿಯ ಸರ್ಕಾರದ ಸಚಿವರಾದ ಶ್ರೀ ಮುಗೇಶ್ ನಿರಾಣಿಯವರ ಕನಸು ಲ್ಯಾಂಡ್ ಬ್ಯಾಂಕ್, ಸುವರ್ಣ ಕೈಗಾರಿಕಾ ಕಾರಿಡಾರ್ ಯೋಜನೆ, ಜೊತೆಗೆ ಶ್ರೀ ಜಿ.ಎಸ್.ಬಸವರಾಜ್‌ರವರು 4 ನೇ ಭಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು, ಜೊತೆಗೆ ಅವರು ಬಿಜೆಪಿ ಸಂಸದರಾಗಿದ್ದರಿಂದ ಈ ಭಾರಿ ಯಾವುದೇ ಯೋಜನೆಯಾಗಲಿ ಮಾಡೇ ಮಾಡುತ್ತಾರೆ ನಿಲ್ಲುವುದಿಲ್ಲ. ಎಂಬ ಖಚಿತ ನಿರ್ಧಾರಕ್ಕೆ ಅಲ್ಲಿನ ಬಂದರು.

  ನೋಟಿಫಿಕೇಷನ್‌ನಲ್ಲಿ ಕರ್ನಾಟಕ ರಾಜ್ಯಪಾಲರ ಆದೇಶದ ಮೇರೆಗೆ ಎಂಬ ಪದ ಓದಿದ ಮೇಲೆ ಇವನು ಇನ್ನೂ ಬಿಡಲಪ್ಪ, ಎಂದು ಅವರ ಹೋರಾಟ ಆರಂಭಿಸಿದರು. ನನ್ನ ಹೋರಾಟ ನಾನು ಆರಂಭಿಸಿದೆ.

  ಜೊತೆಗೆ ಬಹಳ ಹಿಂದೆಯೇ ಬಿದರೆಹಳ್ಳ ಕಾವಲ್‌ನ ದಿ. ಕೆಂಪಯ್ಯನವರು ಒಂದು ದಿನ ನಮ್ಮ ಮನೆಗೆ ಬಂದರು, ನಾನು ತೋಟದಲ್ಲಿ ಇದ್ದೆ, ನಮ್ಮ ತಾಯಿ ತೋಟದಲ್ಲಿರುವ ವಿಚಾರ ತಿಳಿಸಿದಾಗ ನಮ್ಮ ತೋಟದ ಬಳಿ ಬಂದರು. ನಮ್ಮ ತಂದೆ ದಿ.ಕೆ.ಎಸ್.ರಾಮಲಿಂಗಯ್ಯನವರು, ನಮ್ಮ ಕಾಲೋನಿ ಸಿದ್ದಯ್ಯ ಮತ್ತು ನಾನು ತೋಟದಲ್ಲಿ ಕೆಲಸ ಮಾಡುತ್ತಿದ್ದೆವು.

   ಕೆಂಪಯ್ಯನವರು ಮಾತನಾಡುತ್ತಾ ಸ್ವಾಮಿ ನೀವು ನನಗೆ ಒಂದು ಭಾಷೆ ಕೊಡಬೇಕು, ನಿಮ್ಮ ಭಾಷೆ ತೆಗೆದು ಕೊಳ್ಳೋಕೆ ಬಂದೆ ಕೊಡಿ ಎಂದರು. ನಮ್ಮ ಸಿದ್ದಯ್ಯನವರು ಇದೇನು ಸ್ವಾಮಿ ಭಾಷೆ ಕೊಡು ಅಂದ್ರೆ ಏನು ವಿಚಾರ ಅಂತ ಹೇಳೋದು ಬೇಡವಾ?

  ನೀವು ಭಾಷೆ ಕೊಡ ತನಕ ನಾನು ಹೋಗಲ್ಲ, ನೀವು ಕೊಟ್ಟ ಮೇಲೆ ನಾನು ವಿಚಾರ ಹೇಳ್ತಿನಿ ಸ್ವಾಮಿ ಅಂತ ಚಂಡಿ ಹಿಡಿದು ಬಿಟ್ಟರು. ಕೊನೆಗೂ ನಾನೂ ಕೊಡಲಿಲ್ಲ, ಕೆಂಪಯ್ಯ ಕಣ್ಣೀರು ಹಾಕಿ ಸ್ವಾಮಿ ನಾನು ಮೂರು ಮದ್ವೆ ಆಗಿದಿನಿ, ಮಕ್ಕಳೊಂದಿಗ ಏನೋ ಕಷ್ಟಬಿದ್ದು ಜಮೀನು ಮಂಜೂರು ಮಾಡಿಸಿಕೊಂಡಿದ್ದೀನಿ, ನಮ್ಮ ಕಾಲೋನಿಯವರೇ ನಮ್ಮ ಮೇಲೆ ಬಿದ್ದವ್ರೆ, ನೀವು ನನಗೆ ಮತ್ತು ನಮ್ಮ ಕಾಲೋನಿಗೆ ಅನ್ಯಾಯ ಮಾಡಬೇಡಿ. ನಮ್ಮ ಜಮೀನು ಬಿಟ್ಟು ನೀವು ಏನಾರ ಮಾಡಿಸಿಸ್ವಾಮಿ.

  ಎಂಪಿಯವರಿಗೂ ನಾನು ಹೇಳಿದಿನಿ ಅವರನ್ನು ಯಾವ ದಾರಿಗಾದರೂ ತರಬಹುದು, ಆದರೇ ನೀವು ಏನು ಮಾಡುತ್ತಿರೋ ಅನ್ನೋ ಭಯ ಅಂದಾಗ, ನಮ್ಮ ತಂದೆ ಏ ಕೊಟ್ಟುಬಿಡೋ ಆ ಜಮೀನಿನ ಸುದ್ದಿಗೆ ನೀನು ಹೋಗಬೇಡ, ಉಳಿದ ಜಮೀನಿನನಲ್ಲಿ ನಿಮ್ಮ ಎಂಪಿಗೆ ಹೇಳಿ ಏನಾದರೂ ಮಾಡಿಸು ಎಂದಾಗ ವಿಧಿಯಿಲ್ಲದೆ. ನಾನು ಕೆಂಪಯ್ಯನಿಗೆ ಭಾಷೆ ಕೊಟ್ಟು ನನ್ನ ಮಾತು ನಡೆದರೆ ಆ ಕೆಲಸ ಮಾಡೋಕೆ ಬಿಡಲ್ಲ ಅಂತ ಬಹಳ ಹಿಂದೆಯೇ ಹೇಳಿದ್ದೆ.

  ಬಿದರೆಹಳ್ಳಕಾವಲ್‌ನ ಕೆಲವರು ಕೆಂಪಯ್ಯನ ಮೇಲೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಕೇಸ್ ಹಾಕಿ ನನ್ನ ಬಳಿ ಬಂದಾಗಲೂ ನಾನು ಅವರಿಗೂ ಹೇಳಿದ್ದೆ, ನಾನು ಈ ವಿಚಾರಕ್ಕೆ ಬರಲ್ಲ ಕೆಂಪಯ್ಯನಿಗೆ ಭಾಷೆ ಕೊಟ್ಟಿದ್ದೀನಿ ಅಂತ, ಎಂಪಿಯವರಿಗೂ ಹೇಳಿದ್ದೆ ಬೇಡ ಬಿಡಿ ಸಾರ್ ಅವರ ಕಾಲೋನಿ ವಿಚಾರಕ್ಕೆ ನಾವು ಹೋಗುವುದು ಬೇಡ, ಉಳಿದ ಜಮೀನಿಗೆ ಸೀಮೀತವಾಗೋಣ ಅಂತ ಅವರು ಸರಿ ಎಂದು ಕೊನೆವರೆಗೂ ಅದೇ ವಿಚಾರಕ್ಕೂ ಬದ್ಧರಾಗಿದ್ದಾರೆ. ಇಂದಿಗೂ ಸಹ ಎಂಪಿಯವರು ಹೇಳುವುದು ಅದೇ ಒಂದು ವೇಳೆ ಶೇಕಡ 80 ಕ್ಕಿಂತ ಜಾಸ್ತಿ ಜನ ಒಪ್ಪಿ ಬಂದರೆ ಮಾತ್ರ ಯೋಚಿಸ ಬಹದು ಇಲ್ಲದೇ ಇದ್ದರೆ ಅದರ ಅಗತ್ಯವಿಲ್ಲ ಎಂಬುದು ಅವರ ಗಟ್ಟಿ ನಿರ್ಧಾರ.

 ಇಷ್ಟೆಲ್ಲಾ ಆಗಿದ್ದು ಬಿದರೆ ಹಳ್ಳಕಾವಲ್‌ನ ಶ್ರೀ ರಂಗಸ್ವಾಮಿರವರು ಮತ್ತು ಶ್ರೀ ಶಂಕರ್‌ರವರಿಗೂ ಗೊತ್ತಿತ್ತು. ಆದರೂ ಗುಬ್ಬಿ ತಾಲ್ಲೂಕು ಕಚೇರಿ ಮುಂದೆ ಹೋಗಿ ಪ್ರತಿಭಟನೆ ಮಾಡಿ, ಪ್ಲೆಕ್ಸ್‌ನಲ್ಲಿ ನನ್ನ ಫೋಟೋ ಹಾಕಿ ಸುಟ್ಟು  ಧಿಕ್ಕಾರ ಕೂಗಿದರಂತೆ ಅಲ್ಲಿ ಏನೇನು ನಡೆತು ಅಂತ ಈಗ ಯಾರಾದರೂ ಹೇಳಿದರೆ ಬರೆಯ ಬಹುದು. ನನಗೆ ಪೂರ್ಣ ವಿಚಾರ ಗೊತ್ತಿಲ್ಲ ಈಗ ಎಲ್ಲಾ ಖುಷಿಯಾಗಿದ್ದಾರೆ.

  ಪೋಲೀಸ್ ಇಲಾಖೆಯವರು ಹೇಳಿದ ಪ್ರಕಾರ ಸಾರ್ ಅವರಿಗೆ ನಿಮ್ಮೊಬ್ಬರ ಮೇಲೆ ಸಿಟ್ಟು, ಎಂಪಿಯವರು ಮೇಲೂ ಇಲ್ಲ, ಸಚಿವರು ಮೇಲೂ ಇಲ್ಲ, ನಿಮ್ಮ ಮೇಲೆ ಕತ್ತಿ ಮಸಿತಾ ಅವರೇ ಸಾರ್. ನಾನು ನನ್ನದೇ ಆದ ತಂತ್ರಗಾರಿಕೆಯಿಂದ ಬಿದರೆ ಹಳ್ಳಕಾವಲ್‌ನಲ್ಲಿರುವ ಪ್ರತಿಯೊಬ್ಬರ ಅನಿಸಿಕೆ, ಅಭಿಪ್ರಾಯಗಳನ್ನು ಸಂಗ್ರಹ ಮಾಡಿದ್ದೆ.

  ಅಲ್ಲಿರುವ ಬಡವರಿಗೆ ಬಹಳ ಅನ್ಯಾಯ ಆಗಿತ್ತು. ಉಳ್ಳವರಿಗೆ ಮಾತ್ರ ಅನೂಕೂಲವಾಗಿತ್ತು, ಇದರ ವಿರುದ್ದ ಬಂಡೆದ್ದವರೆಲ್ಲಾ ಒಂದಲ್ಲ ಒಂದು ದಿನ ನನ್ನ ಬಳಿ ಬಂದು ಅವರ ಅಹವಾಲು ಹೇಳಿಕೊಂಡಿದ್ದರು, ಭಾಷೆ ಪ್ರಭಾವ ನಾನು ಮಾತು ಬದಲಾಯಿಸಲಿಲ್ಲ, ಅದು ಎಲ್ಲರಿಗೂ ಗೊತ್ತಿತ್ತು.

  ಇನ್ನೊಂದು ವಿಶೇಷ ಸಂಗತಿ ಎಂದರೆ ಹಿಂದೆ ಎಲ್ಲರೂ ಸೇರಿ ಬೈಕೊಳ್ಳತ್ತಿದ್ದವರು, ಕೆಲವರ ಕಣ್ತಪ್ಪಿಸಿ ಸಾಗರನಹಳ್ಳಿ ಗೇಟ್‌ಗೆ ಬಂದು ನನ್ನ ಕಾರಿನಲ್ಲಿ ಕುಳಿತು ಕೊಂಡು ಬಂದು ಅವರ ಸಮಸ್ಯೆ ಹೇಳುತ್ತಿದ್ದರು. ತುಮಕೂರಿಗೆ ಬಂದು ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು.

     ಯಾರಿಗೆ ನಾನು ಭಾಷೆ ಕೊಟ್ಟಿದ್ನೋ ಅದೇ ದಿ.ಕೆಂಪಯ್ಯನವರ ಮಗ ಶ್ರೀ ರಮೇಶ್‌ರವರು ಮತ್ತು ದಿ.ಪೂಜೆ ವೆಂಕಟಯ್ಯನವರ ಮಗ ಶ್ರೀ ಪರಮೇಶ್‌ರವರು ಕುಂದರನಹಳ್ಳಿ ರಮೇಶ್ ಕಾರಿಗೆ ಬೆಂಕಿ ಇಡೋಣ ಏನಾಗುತ್ತೇ ನೋಡೇ ಬಿಡೋಣ ಅನ್ನುತ್ತಿದ್ದರಂತೆ.

  ನಮ್ಮ ತಾಯಿ ಶ್ರೀಮತಿ ಪಾರ್ವತಮ್ಮನವರು ಸಹ ಎಲ್ಲಾ ಹಿಗಂತರೆ ನಿನಗೆ ಯಾಕಪ್ಪ ಬೇಕು ಇದೆಲ್ಲಾ ಎಂದು ಹೇಳಿ ಕಣ್ಣೀರು ಹಾಕಿದರು. ನಾನು ಅವರಿಗೆ ಹೇಳಿದೆ ನಾನು ಗಂಗಮಲ್ಲಮ್ಮ ದೇವಿಗೆ, ರಾಮೇಶ್ವರ, ಆಂಜನೇಯ ಸ್ವಾಮಿಗೆ ಪೂಜಿಸಿದ್ದೇನೆ, ಬಿದರೆಹಳ್ಳಕಾವಲ್‌ನವರು ಶನಿಮಹಾತ್ಮನನ್ನು ಪೂಜಿಸುತ್ತಾರೆ, ಇವರೆಲ್ಲರ ರಕ್ಷಣೆ ನನಗಿದೆ ಸುಮ್ಮನಿರಿ ಏನೂ ಆಗಲ್ಲ ಎಂದು  ಸಮಾಧಾನ ಪಡಿಸಿದೆ.

  ಬಿದರೆಹಳ್ಳ ಕಾವಲ್ ಜನ ಯಾರು ಸಹ ಸ್ಥಳೀಯರಲ್ಲ, ಒಂದಲ್ಲ ಒಂದು ದಿವಸ ಜಿಲ್ಲೆಯ ಹಲವಾರು ಗ್ರಾಮಗಳಿಂದ ವಲಸೆ ಬಂದವರು. ಆದರೂ ಕಷ್ಟಜೀವಿಗಳು, ಒಳ್ಳೆಯ ರೈತರು, ಒಳ್ಳೆಯ ಉಪಕಸುಬು ಮಾಡುವವರು ಬಹುತೇಕ ಎಲ್ಲರ ಕೈಲೂ ಕರಣೆ ಹಿಡಿದವರು, ಕಟ್ಟಡದ ಕೆಲಸ ಅವರ ಜೀವನಾಡಿ. ನನಗೆ ಅವರ ಮೇಲೆ ಪ್ರೀತಿ ಇದೆ. ಯಾವುದೇ ಕಾರಣಕ್ಕೂ ಏನೂ ಅಗಲ್ಲ ಎಂದು ಹೇಳಿದೆ. ನಮ್ಮ ತಾಯಿನೂ ದೇವಿ ಇದ್ದಾಳೆ ಹೋಗು ಬಿಡಬೇಡ ಏನಾದರೂ ಮಾಡಿಸಿ ಎಂದು ಆಶೀರ್ವದಿಸಿದರು.

   ಹೊರಗಡೆ ಪ್ರಪಂಚಕ್ಕೆ ಅವರೆಲ್ಲಾ ಒಗ್ಗಟ್ಟು, ನಿಜವಾಗಿ ಹೇಳಬೇಕೆಂದರೆ ಅವರಲ್ಲಿ ನೋವು ತಿಂದವರು ಜಾಸ್ತಿ, ಅಲ್ಲಿನ ಗುಂಪುಗಳು ಹಲವಾರು. ಅವರಿಗೂ ಗೊತ್ತಿತ್ತು ನಮಗೆ ಮಂಜೂರಾಗಿರುವ ಜಮೀನು ಮತ್ತು ಗ್ರಾಮವನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು, ಆದರೂ ನನ್ನ ಆತ್ಮೀಯರು ಅವರಿಗೆ ಗಲಾಟೆ ಮಾಡಿ ಎಂದು ಆಗಾಗ್ಗೆ ಟಾನಿಕ್’ ಕೊಡುತ್ತಿದ್ದರು. ಆದನ್ನು ಸಹ ಪ್ರಾಮಾಣಿಕವಾಗಿ ಇಂಥವರು ಬಂದು ಎತ್ತಿಕಟ್ಟುತ್ತಿದ್ದಾರೆ ಕಣಣ್ಣ ಉಷಾರಾಗಿರಿ ಅಂತಲೂ ಹೇಳುತ್ತಿದ್ದರು.

  ಗುಬ್ಬಿ ತಾಲ್ಲೂಕಿನ ಬಹುತೇಕ ನಾಯಕರು  ಆ ಬಿದರೆ ಹಳ್ಳಕಾವಲ್ ಪೂರ್ತಿ ವಕ್ಕಲೆಬ್ಬಿಸಿ  ಅಂತ ಹೇಳಿದವರೇ ಜಾಸ್ತಿ, ಕೆಲವರು ಸುತ್ತಮತ್ತಲಿನ ಜನ ಬಂದು ನನಗೆ ಆ ಕಾಲೋನಿಯನ್ನು ಎತ್ತಿಸಿಬಿಡು ಎಂದು ಹೇಳಿದಾಗಲೂ ನಾನು ಅವರಿಗೂ ಹೇಳಿದ್ದೆ, ಯಾವುದೇ ಕಾರಣಕ್ಕೂ ನಾನು ಆ ಕೆಲಸ ಮಾಡಲು ಹೋಗುವುದಿಲ್ಲ. ಅವರಿಗೆ ಮಂಜೂರಾಗಿರುವುದನ್ನು ಬಿಟ್ಟು ಉಳಿದ ಜಮೀನಿನನಲ್ಲಿ ಒಂದಲ್ಲ ಒಂದು ಉದ್ದಿಮೆ ಮಾಡಿಸುವುದೇ ಎಂಪಿಯವರ ಮತ್ತು ನನ್ನ ಗುರಿ ಬೇಡ ಹೋಗಿ ಎಂದೇ ನೇರವಾಗಿ ಹೇಳಿದ್ದೇನೆ.

  ಇನ್ನೂ ಕೆಲವರು ಬಂದು ಅದರ ಸಹವಾಸ ಹೋಗಬೇಡ ಬಿಟ್ಟುಬಿಡು, ಅವರು ಕ್ರೂರಿಗಳು ಎಂದು ಹೇಳುತ್ತಿದ್ದರೂ ನಾನು ಅವರಿಗೂ ಹೇಳುತ್ತಿದ್ದೆ, ಅವರು ಕ್ರೂರಿಗಳಲ್ಲ ಇಲ್ಲಿನ ಕೆಲವರ ತಂತ್ರಗಾರಿಕೆ ಅದು ನನಗೂ ಗೊತ್ತು. ಆದರೂ ಅವರು ಉಳುಮೆ ಮಾಡುತ್ತಿದ್ದಾರೆ, ಆ ಜಮೀನು ಹೋಗುತ್ತೆ ಅಂದರೆ ಸಿಟ್ಟು ಬರುವುದು ಸಹಜ, ಬೈತರೆ, ಬೈಲಿಬಿಡು, ಎಲ್ಲಾ ಸರಿಯಾದ ಮೇಲೆ ಅವರೇ ಸರಿ ಹೋಗುತ್ತಾರೆ ಎಂದು ಹೇಳುತ್ತಿದ್ದೆ. ಕೆಲವು ತಿಂಗಳುಗಳ ಕಾಲ ನಾನು ಊರಿಗೆ ಹೋದರೆ ೪-೫ ಜನ ಗುಂಪು ನನ್ನ ಜೊತೆಗೆ ಸದಾ ಇರುತ್ತಿದ್ದರು.

 ನಾನು ಊರಿಗೆ ಹೋಗಬೇಕಾದರೆ ಬಿದರೆಹಳ್ಳ ಕಾವಲ್‌ನವರಿಗೆ ಫೋನ್ ಮಾಡಿ, ಇವತ್ತು ಊರಿಗೆ ಬರುತ್ತಾ ಇದ್ದೀನಿ ಕಾರಿಗೆ ಬೆಂಕಿ ಹಿಡರೋ ಬರ್ರಪ್ಪ, ಎಲ್ಲಿಗೆ ಬರನಪ್ಪ ಎಂದು ಹೇಳುತ್ತಲೇ ಇದ್ದೆ.  ಅಷ್ಟಾದರೂ ಎಲ್ಲೂ ಯಾವುತ್ತೂ ಒಂದು ಅಹಿತಕರ ಘಟನೆ ಆಗಲಿಲ್ಲ, ಕಾರಣ ನಾನು ಶಕ್ತಿ ಪೀಠಗಳ’ ಆರಾಧಕನಾದರೇ, ಅವರು ಶನಿಮಹಾತ್ಮನ’ ಆರಾಧಕರೂ ಅವಿರಬ್ಬರ ಆಶಿರ್ವಾದ ಅವರಿಗೂ ಒಳ್ಳೆಯದಾಯಿತು, ಎಂಪಿಯವರ ಮತ್ತು ನನ್ನ ಕನಸಿನ ಯೋಜನೆಗೂ ಮುಕ್ತಿ ದೊರಕಿತು.

   ಶ್ರೀ ಜಿ.ಎಸ್.ಬಸವರಾಜ್‌ರವರು ನೀಡಿರುವ ವಚನವನ್ನು ಖಂಡಿತ ಪಾಲಿಸಲೇಬೇಕು. ಬಿದರೆಹಳ್ಳ ಕಾವಲ್ ಜಮೀನು ಸಂತ್ರಸ್ಥರು, ಹೆಚ್.ಟಿ.ಲೈನ್ ಸಂತ್ರಸ್ಥರು ಮತ್ತು ಸುತ್ತಮತ್ತಲಿನ ಗ್ರಾಮಗಳ ಜನತೆಗೆ ಸ್ಮಾರ್ಟ್ ವಿಲೇಜ್‌ನಲ್ಲಿ ನಿವೇಶನ ಮತ್ತು ಮನೆ ನಿರ್ಮಿಸಿ ಕೊಡುವುದು  ಅವರ ಆಧ್ಯ ಕರ್ತವ್ಯ. ದಿನಾಂಕ:28.02.2020 ರಂದು ನಡೆದ ತುಮಕೂರು ಜಿಲ್ಲಾ ದಿಶಾ ಸಮಿತಿ ಸಭೆಯಲ್ಲಿ ಹೆಚ್.ಎ.ಎಲ್ ಸುತ್ತಮುತ್ತ ಮೂರು ಕೀಮೀ ದೂರದವರೆಗೆ ಇರುವ ಸರ್ಕಾರಿ ಜಮೀನು ಗುರುತಿಸಿ ಪಟ್ಟಿಮಾಡಲು ನಿರ್ಣಯ ಕೈಗೊಳ್ಳಲಾಗಿದೆ.

  ವಸತಿ ಸಚಿವರಾದ ಶ್ರೀ ವಿ.ಸೋಮಣ್ಣನವರು ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ. ಯುಗಾದಿ ಹಬ್ಬದ ದಿವಸ ಫೋನ್ ಮಾಡಿ ಕೊರೊನಾ ಮುಗಿದ ತಕ್ಷಣ ನಿಮ್ಮ ಹೆಚ್.ಎ.ಎಲ್ ಮನೆಗಳ ಕೆಲಸ ಶುರು ಮಾಡೋಣ ಎಂದು ಅವರೇ ಹೇಳಿದ್ದಾರೆ.

  ಉದ್ಯೋಗದ ಬಗ್ಗೆ ಮಾನ್ಯ ಪ್ರಧಾನ ಮಂತ್ರಿಗಳು ಮತ್ತು ಮಾನ್ಯ ಮುಖ್ಯ ಮಂತ್ರಿಗಳೇ ನಿರ್ಣಯ ಮಾಡಬೇಕು ನೋಡೋಣ. ಶ್ರೀ ಜಿ.ಎಸ್.ಬಸವರಾಜ್‌ರವರು, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು, ಶಾಸಕರಾದ ಶ್ರೀ ಎಸ್.ಆರ್.ಶ್ರಿನಿವಾಸ್‌ರವರು ಮತ್ತು ತುರುವೇಕೆರೆ ಶಾಸಕರಾದ ಶ್ರೀ ಮಸಾಲೇ ಜಯರಾಂರವರು ಎಲ್ಲರೂ ಸೇರಿ ಒಂದು ನಿರ್ಧಾರ ಕೈಗೊಳ್ಳಬೇಕಿದೆ.

About The Author