22nd November 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಬಿದರೆಹಳ್ಳ  ಕಾವಲ್‌ನಲ್ಲಿ ಸರ್ಕಾರಿ ಜಮೀನು ಇದೆ, ಇಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಸ್ವಾಮ್ಯದ ಹೆಚ್.ಎ.ಎಲ್.ವತಿಯಿಂದ ಯುದ್ಧ ಹೆಲಿಕ್ಯಾಪ್ಟರ್ ತಯಾರಿಸುವ ಘಟಕವನ್ನು ಆರಂಭಿಸಬಹುದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಬಂಧಿಸಿದ ಎಲ್ಲಾ ಇಲಾಖೆಯ ಚುನಾಯಿತ ಜನಪ್ರತಿನಿಧಿಗಳು ಮತ್ತು ಎಲ್ಲಾ ಹಂತದ ಅಧಿಕಾರಿಗಳಿಗೆ ಮನವರಿಕೆ ಮಾಡುವಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಒಂದು ರೀತಿಯಲ್ಲಿ ಯಶಸ್ವಿಯಾದರೂ ಜಮೀನು ಬಗ್ಗೆ ದಾಖಲೆ ಮಾಡಿಸುವಲ್ಲಿ ಹಿನ್ನಡೆಯಾಯಿತು ಅಂದರೆ ತಪ್ಪಗಲಾರದು.

  ತುಮಕೂರು ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ರಾಜುರವರು ಮತ್ತು ಶ್ರೀ ಸೋಮಶೇಖರ್‌ರವರ ಅವಧಿಯಲ್ಲಿ ಕರ್ನಾಟಕ ಸರ್ಕಾರದಿಂದ ಪತ್ರ ಬಂದಿದ್ದರೂ ಇವರ ಅವಧಿಯಲ್ಲಿ ಇವರಿಬ್ಬರೂ ಏನು ಮಾಡಿದ್ದಾರೆ ಎಂಬ ಮಾಹಿತಿ ಇದೂವರೆಗೂ ಸಂಸದರಿಗೂ ಮತ್ತು ನನಗೂ ಗೊತ್ತಿಲ್ಲ.

  ಬಹುತೇಕ ಎಲ್ಲಾ ಸಮಾಧಾನಕರ ಬೆಳವಣಿಗೆಗಳು ನಡೆದ ನಂತರ ಶ್ರೀ ಜಿ.ಎಸ್.ಬಸವರಾಜ್‌ರವರು ಫೋನ್ ಮಾಡಿ ಜಮೀನಿನ ದಾಖಲೆ ಯಾವ ಹಂತದಲ್ಲಿದೆ ಎಂದು ಕೇಳಿದರು ನನಗೆ ಗಾಬರಿಯಾಯಿತು, ವಿಚಾರಿಸಿ ಹೇಳ್ತಿನಿ ಸಾರ್ ಎಂದಾಗ ಒಳ್ಳೆ ಗಿರಾಕಿ ಕಣಯ್ಯಾ ಒಳ್ಳೆ ಸಮಯದಲ್ಲಿ ಹುಳಿಯಾಳು ಅನ್ನುವ’ ಹಾಗೆ ಆಯಿತು, ಮೊದಲು ನೋಡು ಅಂದರು.

 ಆಗ ನಾನು ಜಿಲ್ಲಾಧಿಕಾರಿಯಾಗಿದ್ದ ಶ್ರೀ ಕೆ.ಎಸ್.ಸತ್ಯಮೂರ್ತಿಯವರಿಗೆ ಫೋನ್ ಮಾಡಿ ಸಾರ್ ಹೆಚ್.ಎ.ಎಲ್ ಘಟಕಕ್ಕೆ ಜಮೀನು ನೀಡುವ ಕಡತ ಯಾವ ಹಂತದಲ್ಲಿದೆ ಸಾರ್ ಎಂದು ಕೇಳಿದೆ. ಅವರು ನೀವು ಯಾರು ಅಂದರೂ ನಾನು ಕುಂದರನಹಳ್ಳಿ ರಮೇಶ್ ಅಂತ ಸಾರ್, ಎಂಪಿಯವರಿಗೆ ಈ ಬಗ್ಗೆ ಮಾಹಿತಿ ಬೇಕಾಗಿತ್ತು,  ಎಂದಾಗ ಅವರು ನನಗೆ ಈ ಬಗ್ಗೆ ಗೊತ್ತಿಲ್ಲ ವಿಚಾರಿಸಿ ಹೇಳ್ತೀನಿ ಅಂದರು, ಸರಿ ಸಾರ್ ಅಂತ ಹೇಳಿದೆ.

 ಮೂರು ದಿವಸ ಬಿಟ್ಟು ಪುನಃ ಡಿಸಿಯವರಿಗೆ ಮಾತನಾಡಿದೆ, ಅವರು ಎಲ್ಲಾ ನೋಡಿದೆ, ಅಲ್ಲಾ ಮಾರಾಯ ಇಬ್ಬರು ಡಿಸಿಗಳು ನಿಮ್ಮವರೇ ಇದ್ದರೂ ಸರ್ಕಾರದಿಂದ ಬಹಳ ಹಿಂದೆ ಪತ್ರ ಬಂದಿದ್ದರೂ ಇನ್ನೂ ಯಾಕೆ ರೆಕಾರ್ಡ್ ಮಾಡಿಸಿಲ್ಲ, ಎಂದು ತಮಾಷೆ ಮಾಡಿದರು. ಆಯಿತು ನಿಮಗೆ ಎಷ್ಟು ದಿವಸದಲ್ಲಿ ರೆಡಿಯಾಗಬೇಕು ಹೇಳಿ, ಒಳ್ಳೆ ಯೋಜನೆ ಮಾಡಿ ಕಳುಹಿಸುತ್ತೇನೆ ಎಂಪಿಯವರು ಮಾತನಾಡಿದ್ದಾರೆ ಎಂದರು. ಸಾರ್ ಒಂದು ವಾರದಲ್ಲಿ ಅಂದೆ ನೋಡೋಣ ಅಂದರು.

  ಸುಮಾರು 8-10 ದಿವಸ ಬಿಟ್ಟು ಡಿಸಿಯವರೇ ಫೋನ್ ಮಾಡಿ ಸರ್ಕಾರಕ್ಕೆ ದಾಖಲೆಯನ್ನು ಕಳುಹಿಸಿದ್ದೇನೆ, ಸುಮಾರು  772 ಎಕರೆ 3 ಗುಂಟೆ ಸರ್ಕಾರಿ ಜಮೀನು ಇದೆ ಎಂದು ಹೇಳಿದಾಗ ನನಗೆ ಬಹಳ ಖುಷಿಯಾಯಿತು ಥ್ಯಾಂಕ್ಸ್ ಸಾರ್ ಅಂದು ಹೇಳಿದೆ.

ಎಂಪಿಯವರು ಮತ್ತು ನಾನು ಕಂದಾಯ ಇಲಾಖೆಗೆ ಹೋಗಿ ವಿಚಾರಿಸಿದಾಗ ದಾಖಲೆ ಬಂದಿದೆ ಕಂದಾಯ ಸಚಿವರ ಅನುಮತಿ ಪಡೆದು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯವುದಾಗಿ ತಿಳಿಸಿದರು.