20th May 2024
Share

TUMAKURU:SHAKTHIPEETA FOUNDATION

ಶ್ರೀ ಜಿ.ಎಸ್.ಬಸವರಾಜ್‌ರವರು 772 ಎಕರೆ ಜಮೀನು ದಾಖಲೆ ಕಳುಹಿಸಿದ್ದಾರೆ ಎಂದು ಖುಷಿಯಾಗಿದ್ದರು. ಆ ಕಡೆ ಜಿಲ್ಲಾಧಿಕಾರಿ ಸತ್ಯಮೂರ್ತಿ ಒಂದು ರಹಸ್ಯ ಸಭೆ ಕರೆದು, ಆ ಸಭೆಯಲ್ಲಿ ನೋಡಿ ದೊಡ್ಡವ್ರು’ ಹೇಳಿದ್ದಾರೆ, ಗುಬ್ಬಿ ತಾಲ್ಲೂಕು ಬಿದರೆಹಳ್ಳಕಾವಲ್‌ನಲ್ಲಿ ಹೆಚ್.ಎ.ಎಲ್ ಆಗಬಾರದು, ಏನು ಮಾಡಬಹುದು ಹೇಳಿ, ಇಲ್ಲಿ ಲಿಂಗಾಯಿತರು ಯಾರು ಇದ್ದೀರಾ? ಸಾರ್ ನಾನು ಅಂತ ಒಬ್ಬರು ಹೇಳಿದ್ದಾರೆ, ನೀನು ನಮ್ಮ ಕಡೆ ಪರವಾಗಿಲ್ಲ. ನಾನು ಎಂಪಿಯವರಿಗೆ ಹೇಳುತ್ತೇನೆ ಅವರನ್ನು ಒಪ್ಪಿಸುವ ಜವಾಬ್ಧಾರಿ ನನ್ನದು. ಆದರೆ ಅವನಿಗೆ ಮಾತ್ರ ಗೊತ್ತಾಗೊದು ಬೇಡ’ ನಡೀರಿ ಜಾಗಕ್ಕೆ ಹೋಗಿ ಬರೋಣ ಸ್ಥಳಕ್ಕೆ ಹೋಗಿದ್ದಾರೆ.

  ನನಗೆ ಫೋನ್ ಬಂತು ಡಿಸಿ ಏನೋ ಕತರ್ನಾಗ್ ಕೆಲಸ ಮಾಡುತ್ತಾರೆ ನೋಡಿ, ಆದರೆ ದಾಖಲೆ ಇಲ್ಲದೆ ಎಂಪಿಯವರಿಗೂ ಏನೂ ಹೇಳಲಿಲ್ಲ. ಎಸಿಯವರಾಗಿದ್ದ ಶ್ರೀ ನಕುಲ್‌ರವರು ಈ ದ್ವೇಷದ ಕೆಲಸ ಬೇಡ ಎಂದು ಬಹಳ ಹೇಳಿದ್ದಾರೆ ಎಂಬ ಸುದ್ಧಿ ಬಂತು, ಆದರೂ ಕೇವಲ 20 ದಿನದೊಳಗಾಗಿ ಸರ್ಕಾರಕ್ಕೆ ಅಸತ್ಯದ ವರದಿ’ ರವಾನೆ ಆಯಿತು.

 ರವಾನೆ ಆದ ತಕ್ಷಣ ಎಂಪಿಯವರ ಗಮನಕ್ಕೆ ತರಬೇಕಾಗಿತ್ತು, ಇಬ್ಬರೂ ಬೆಂಗಳೂರಿಗೆ ಹೋಗುತ್ತಿದ್ದೆವು,  ಸಾರ್ ಡಿಸಿಯವರಿಗೆ ಮಾತಾಡಿ ಜಮೀನು ದಾಖಲೆ ಯಾವ ಮಟ್ಟಕ್ಕೆ ಬಂತು ಕೇಳಿ ಎಂದೆ. ಅವರು ಡಿಸಿಯವರಿಗೆ ಫೋನ್ ಮಾಡಿದ್ರೆ ಡಿಸಿಯವರು ಅಲ್ಲಿ ಜಮೀನು ಇಲ್ಲಾ ಸಾರ್ ಕುಂದರನಹಳ್ಳಿ ರಮೇಶ್ ಎಲ್ಲಾ ಮಿಸ್ ಗೈಡ್ ಮಾಡಿದ್ದಾರೆ. ಎಂಪಿಯವರು ಅರೇ ನೀವೇ ಕಳುಹಿಸಿದ್ದೀರಿ 772 ಎಕರೆ ಇದೆ ಅಂತ, ಈಗ ನೋಡಿದ್ರೆ ಇಲ್ಲ  300 ಎಕರೆ ಮಾತ್ರ ಇದೆ ಹೆಚ್.ಎ.ಎಲ್ ಘಟಕಕ್ಕೆ ಆಗಲ್ಲ ಅಂತಿರಾ. 

 ಎಂಪಿಯವರು ಫೋನ್ ಕಟ್ ಮಾಡಿ ಏನಪ್ಪಾ ಡಿಸಿ ಹೀಗೆ ಹೇಳುತ್ತಾರೆ, ಅಂದಾಗ ಸಾರ್ ನಾಳೆ ಡಿಸಿ ಆಫೀಸ್‌ಗೆ ಬರುತ್ತೇನೆ ಎಲ್ಲಾ ಅಧಿಕಾರಿಗಳನ್ನು ಮಿಟಿಂಗ್ ಕರೆಯೋಕೆ ಹೇಳಿ ಹಾಗೆ ನನಗೂ ಕರೆಯೋಕೆ ಹೇಳಿ ಸಾರ್ ಎಂದೆ. ಅವರು ಅದೇ ಮಾತನ್ನು ಜಿಲ್ಲಾಧಿಕಾರಿಗಳಿಗೆ ಹೇಳಿದರು.

 ಎಂಪಿಯವರಿಗೂ ತಲೆ ಬಿಸಿಯಾಯಿತು, ಏನು ಕಥೆ ಇದು ಅಂದಾಗ ಕಾರಿನಲ್ಲಿ ಯಾರ್‍ಯಾರೋ ಇದ್ದರು, ನಾನು ಇರಲಿ ಬಿಡಿ ಸಾರ್ ನಾಳೆ ನೋಡೋಣ ಅಂದು ಸುಮ್ಮನಾದೆ. ಎರಡೇ ನಿಮಿಷಕ್ಕೆ ಜಿಲ್ಲಾಧಿಕಾರಿ ಕಚೇರಿಯಿಂದ ಫೋನ್ ಬಂತು ಸಾರ್ ನಾಳೆ ೧೦ ಗಂಟೆಗೆ ಮಿಟಿಂಗ್ ಇದೆ ನೀವು ಬರಬೇಕಂತೆ ಡಿಸಿಯವರು ಹೇಳಿದ್ದಾರೆ. ಆಯಿತು ಸಾರ್ ಬರುತ್ತೇನೆ ಎಂದೆ. 

  ಬೆಂಗಳೂರಿನಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಕಚೇರಿಗೆ ಹೋಗಿ ಕೇಳಿದಾಗ ಸತ್ಯದ ವರದಿ’ ಗೆ ಬದಲಾಗಿ ಇನ್ನೊಂದು  ಅಸತ್ಯದ ವರದಿ’ ಮುಂದೆ ಇಟ್ಟರು. ನಾನು ನನಗೆ ಗೊತ್ತಿದ್ದ ಎಲ್ಲಾ ಕಥೆ ಹೇಳಿದೆ ಆಮೇಲೆ ನಡಿರಿ ಸಾರ್ ದೇವಿ’ ಇದ್ದಾಳೆ ನೋಡೋಣ ಎಂದು ಆ ವಿಷಯ ಮರೆತೆವು. ನನಗೆ ಸಾಯಂಕಾಲ ನಿದ್ದೆ ಬರಲಿಲ್ಲ, ರಾತ್ರಿ ಪೂರ್ತಿ ದೇವಿ ಪುಸ್ತಕ ಓದಿದೆ,

  ಬೆಳಿಗ್ಗೆ ಸಭೆಗೆ ಹೋಗುವಾಗ ನಾನು ಶ್ರೀ ಟಿ.ಆರ್.ರಘೋತ್ತಮರಾವ್, ಶ್ರೀ ಎಂ.ಎಸ್.ರುದ್ರಮೂರ್ತಿ, ಶ್ರೀ ಶಿವಕುಮಾರ್‌ರವರನ್ನು ಕರೆದೆ ಇವರೆಲ್ಲಾ ಒಂದು ರೀತಿ ನನಗೆ ಅಭಿವೃದ್ಧಿ ಪಂಡಿತರು. ಎಂಪಿಯವರ ಜೊತೆಯಲ್ಲಿ ಶ್ರೀ ಕೊಪ್ಪಳ್ ನಾಗರಾಜು ಮತ್ತು ಶ್ರೀ ಬಿ.ಎಸ್.ಕೈಲಾಸ್ ಬಂದರು.

  ಎಂಪಿಯವರು ಜಿಲ್ಲಾಧಿಕಾರಿ ಚೇಂಬರ್‌ಗೆ ಹೋದರು, ನಾವು ಸಭಾಂಗಣದಲ್ಲಿ ಕುಳಿತುಕೊಂಡೆವು, ಜಿಲ್ಲಾಧಿಕಾರಿ ಕಚೇರಿಯವರು ಸಾರ್ ತಾವು ಬರಬೇಕಂತೆ ಎಂಪಿಯವರು ಕರೆತಿದ್ದಾರೆ ನಾನು ಇಲ್ಲ ಅಂತ ಹೇಳಿಬಿಡಿ ಅಂದೆ.

 ಸಭೆಗೆ ಎಲ್ಲಾ ಅಧಿಕಾರಿಗಳು ಬಂದಿದ್ದರು, ಎಂಪಿಯವರು ಸೇರಿದಂತೆ ಅದೊಂದು ತುಂಬಿದ ಸಭೆ.

ಡಿಸಿ:-ಜಿಲ್ಲಾಧಿಕಾರಿಗಳು ಆರಂಭ ಮಾಡಿದರು. ನೋಡಿ ಬಿದರೆಹಳ್ಳಕಾವಲ್‌ನಲ್ಲಿ ಜಮೀನು ಇಲ್ಲ ಕೇವಲ 300 ಎಕರೆ ಇದೆ ಇದರಲ್ಲಿ ಹೆಚ್.ಎ.ಎಲ್. ಘಟಕ ಮಾಡೋಕೆ ಆಗಲ್ಲ, ಸುಮ್ಮನೆ ಕೆಲವರು ಜಮೀನು ಇದೆ ಸುಳ್ಳು ಹೇಳಿದ್ದಾರೆ. ಜನಪ್ರತಿನಿಧಿಗಳ ದಾರಿ ತಪ್ಪಿಸಿದ್ದಾರೆ.

ನಾನು:– ಸ್ವಾಮಿ ನಿಲ್ಲಿಸಿ ನಿಮ್ಮ ಮಾತು ಸುಳ್ಳು ಹೇಳುತ್ತಿದ್ದೀರಿ.

ಡಿಸಿ:- ನಾನು ಸತ್ಯಮೂರ್ತಿ ಸುಳ್ಳು ಹೇಳುವುದಿಲ್ಲಾ,

ನಾನು:– 300 ಎಕರೆ ಇದೆ ಅನ್ನೋದು ಸುಳ್ಳಲ್ವಾ?

ಡಿಸಿ:– ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ದಾಖಲೆ ತಗೊಂಡು ಹೇಳಬೇಕು ನೀವು?

ನಾನು:- ನಿಮ್ಮ ಕಚೇರಿಗೆ ಮೂಲ ದಾಖಲೆ ಕೊಟ್ಟಿರೊದೇ ನಾನು ಕೇಳಿ ನಿಮ್ಮ ಅಧಿಕಾರಿಗಳನ್ನು, ಆಮೇಲೆ ಆರ್.ಟಿ.ಐ ಮಾಡಿ ಅಂತ ಅಣ್ಣಾ ಅಜಾರೆ ಹೇಳೋದಕ್ಕಿಂತ ಮುಂಚೆ ನಿಮ್ಮ ಕಚೇರಿಗೆ ಅರ್ಜಿ  ಕೊಟ್ಟಿದ್ದೇನೆ.

ಡಿಸಿ:- ಮತ್ತೆ ಯಾಕೆ ಸುಳ್ಳು ಹೇಳಿದ್ದೀರಾ?

ನಾನು:- ನೀವು ಸುಳ್ಳು ಹೇಳುತ್ತಿರುವುದು, ಕೆಐಡಿಬಿಗೆ ನೋಟೀಫಿಕೇಷನ್ ಮಾಡುವಾಗ ಕೊಟ್ಟಿರೋ ದಾಖಲೆ ಸುಳ್ಳಾ? ನೀವು ಈ ಹಿಂದೆ ಕಳುಹಿಸಿರೋ ದಾಖಲೆ ಸುಳ್ಳಾ? ನಿಮ್ಮೊಬ್ಬರನ್ನು ಬಿಟ್ಟು ಇದು ಸುಳ್ಳು ಅಂತ ಯಾರಾದರೂ ಒಬ್ಬರ ಕೈಲಿ ಹೇಳಿಸಿ ನೋಡೋಣಾ?

ಡಿಸಿ:- ಮಾತು ಜಾಸ್ತಿ ಆಯಿತು, ನನ್ನನ್ನು ಏನೂ ಅಂದ್ಕೊಂಡಿದ್ದೀರಾ?

ನಾನು:- ಡಿಸಿಯಾಗಿ ಒಬ್ಬ ರಾಜಕಾರಣಿ ಅಂತ ಅಂದ್ಕೊಂಡಿದಿನಿ. ನಾನು ರೈತ ನನ್ನನ್ನು ನೀವು ಏನೂ ಮಾಡೋಕೆ ಅಗಲ್ಲ.

ಮಾತಿಗೆ ಮಾತು ಬೆಳೆಯಿತು, ಇಬ್ಬರೂ ಕಡಿಮೆ ಆಗಲಿಲ್ಲ, ಸಭೆಯಲ್ಲಿದ್ದವರು ಏನೇನೋ ಮಾತನಾಡಿದರು. ಇಬ್ಬರಿಗೂ ಕಿವಿಗೆ ಹೋಗಲಿಲ್ಲ,  ಸತ್ಯ ಹೇಳಬೇಕೆಂದರೆ ಇಬ್ಬರೂ ಮನುಷ್ಯ ರೀತಿ ವರ್ತಿಸಲಿಲ್ಲ.

   ಕೊನೆಗೆ ಎಂಪಿಯವರು ಡಿಸಿಯವರೇ ಕುಳಿತು ಕೊಳ್ಳಿ, ನೀನು ಸುಮ್ಮನಿರಪ್ಪಾ? ಈಗ ಒಂದು ಕೆಲಸ ಮಾಡಿ ಡಿಸಿಯವರೇ ಬಿದರೆಹಳ್ಳ ಕಾವಲ್‌ನಲ್ಲಿ ಒಂದು ಸಭೆ ಕರೆಯಿರಿ ಅಲ್ಲೇ ರೈತರ ಸಮ್ಮುಖದಲ್ಲಿ ತೀರ್ಮಾನ ಮಾಡೋಣ ಅಂದರು.

ಡಿಸಿ:– ನನ್ನನ್ನು ರೈತರು ಕೊಲೆ ಮಾಡುತ್ತಾರೆ.

ನಾನು:- ನಿಮ್ಮನ್ನು ಕೊಲೆ ಮಾಡಲು ಬಂದರೆ ನಾನು ರಕ್ಷಣೆ ಕೋಡುತ್ತೇನೆ.

ಡಿಸಿ:- ನೀನು ಸರ್ವೇ ಮಾಡುವಾಗ ಬರಬೇಕು, ಬರದಿದ್ದರೆ ಗಡಿಪಾರು’ ಮಾಡುತ್ತೇನೆ.

ನಾನು:- ಗಡಿಪಾರು ಮಾಡೋಕೆ ನಾನೇನು  ಅಲ್ಕಾ ಕೆಲಸ ಮಾಡಿಲ್ಲ, ನೀವು ಸಂಬಳ ತಗೊಂಡು 30 ವರ್ಷ ಕೆಲಸ ಮಾಡಿದ್ದರೆ, ನಾನು ಬಿಟ್ಟಿಯಾಗಿ 30 ವರ್ಷ ಕೆಲಸ ಮಾಡಿದ್ದೇನೆ, ನಿನ್ನ ಮನೆ ಆಳು ಅಂದ್ಕೊಂಡಿದಿರಾ ನನ್ನ ಭಾಷೆ ದಿಕ್ಕು ತಪ್ಪಿತು.

  ಎಂಪಿಯವರು ಪುನಃ ಮಧ್ಯೆ ಪ್ರವೇಶಿಸಿ ಡಿಸಿಯವರೇ ಪೋಲೀಸ್ ರಕ್ಷಣೆ ಕೊಡಿಸ್ತಿನಿ ಬನ್ನಿ ಕೊಲೆ ಮಾಡದ ಹಾಗೆ ನೋಡಿಕೊಳ್ಳುತ್ತೇನೆ. ನೋಡ್ರಿ ಅವನು ಆ ಊರಿನವನು ಆತನಿಗೆ ಎಲ್ಲಾ ಗೊತ್ತಿದೆ, ಅಲ್ಲದೆ ಅವನಿಗೆ ಈ ಕೆಲಸ ಮಾಡಲು ಯಾರು ಸಂಬಳ ಕೊಟ್ಟಿಲ್ಲಾ ಸುಮ್ಮಿನಿರಿ, ನಿಮಗೆ ಯಾರೋ ತಪ್ಪು ಮಾಹಿತಿ ಕೊಟ್ಟವರೆ, ಕಾಲೋನಿ ಜನ ಒಳ್ಳೆಯವರು ಅವರ ಜಾಗ ಬಿಡೋಣ ಅವರು ಕೊಲೆ ಮಾಡಲ್ರಿ, ಜಾಗ ಬಿಟ್ಟರೆ ಮಂಗಳಾರಾತಿ’ ಮಾಡ್ತಾರೆ ಅವರೆಲ್ಲಾ ನನ್ನ ಶಿಷ್ಯರು ಎಂದು ಡಿಸಿಯವರಿಗೆ ಹೇಳಿದರು. ಇದೇ ಮಂಗಳಾರತಿ ವರದಿ’

  ನೋಡಾಪ್ಪಾ ಇವರು ಡಿಸಿಯವರು ನೀನು ಹಾಗೆ ರೇಗಿದರೆ ತಪ್ಪು, ಇರು ನೋಡೋಣ ಎಲ್ಲಾ ಇವತ್ತಿಗೆ ಮುಗಿಯಲ್ಲ, ಸ್ವಲ್ಪ ಶಾಂತಿ ಬೇಕು ಇದು ಒಳ್ಳೆಯದಲ್ಲ ಮುಖ್ಯ ಮಂತ್ರಿಗಳಿಲ್ಲವಾ? ಮೌನವಾಗಿರು ಇನ್ನೊಂದು ಮಾತು ಬೇಡ ಎಂದು ಗದರಿದರು.

ಡಿಸಿ:- ಸರಿ ಸಾರ್ ನೀವು ಹೇಳಿದ ಹಾಗೆ ಮಿಟಿಂಗ್ ಮಾಡೋಣ, ನಂತರ ಸೂಕ್ತ ತೀರ್ಮಾನ ಮಾಡೋಣ ಎಂಪಿಯವರು ಲೇಟ್ ಮಾಡ ಬೇಡಿ 3-4  ದಿವಸದಲ್ಲಿ ಮಾಡಿ ಎಂದು ಹೇಳಿದರು. ಸಭೆ ಮುಕ್ತಾಯವಾಯಿತು.

 ಮಾನ್ಯ ನಿ. ಜಿಲ್ಲಾಧಿಕಾರಿ  ಶ್ರೀ ಕೆ.ಎಸ್. ಸತ್ಯಮೂರ್ತಿಯವರೇ ನಾನು ಆ ದಿನ ಅಧಿಕಾರಿಗಳ ಸಭೆಯಲ್ಲಿ ಆ ರೀತಿ ಮಾತನಾಡಿದ್ದು ತಮಗೆ ಅವಮಾನವಾಗಿದೆ, ಅದು ನನಗೆ ಗೊತ್ತು ನಾನು ಆ ರೀತಿ ಮಾತನಾಡದಿದ್ದರೆ ಹೆಚ್.ಎ.ಎಲ್ ಘಟಕ ಮುಗಿದ ಅಧ್ಯಾಯ ಆಗುತ್ತಿತ್ತು. ನಿಮಗೆ ನೋವಾಗಿದ್ದರೆ ನಾನು ಈಗ ನಿಮ್ಮ ಕ್ಷಮೆ ಕೇಳುತ್ತೇನೆ’.

   ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಶ್ರೀ ಟಿ.ಆರ್ ರಘೋತ್ತಮರಾವ್‌ರವರು ಮೂರು ದಿವಸ ನನ್ನ ಬಳಿ ಮಾತನಾಡಲಿಲ್ಲ, ನಾನು ಮಾತನಾಡಲಿಲ್ಲ ನಾಲ್ಕನೇ ದಿನಕ್ಕೆ ಎಂಪಿಯವರು ಫೋನ್ ಮಾಡಿ ಮಿಟಿಂಗ್ ಏನೇನು ಮಾಡ್ತಿಯಪ್ಪಾ ಅಂದರು. ಸಾರ್ ಅದು ಸರ್ಕಾರಿ ಸಭೆ ತಹಶೀಲ್ದಾರ್ ಮಾಡುತ್ತಾರೆ ಎಂದೆ, ಜನಗಳಿಗೆ ಹೇಳಿ ಗಲಾಟೆ ಆಗಬಾರದು ಎಂದು ಸಲಹೆ ನೀಡಿದರು.