20th April 2024
Share

ಹೆಚ್.ಎ.ಎಲ್ ಕಟ್ಟಡ

TUMAKURU:SHAKTHIPEETA FOUNDATION

ಗುಬ್ಬಿ ತಾಲ್ಲೂಕು ಬಿದರೆಹಳ್ಳಕಾವಲ್ ಸರ್ಕಾರಿ ಜಮೀನಿನಲ್ಲಿ ಯಾವುದಾದರೂ ಒಂದು ಯೋಜನೆ ಮಾಡಬೇಕು ಎಂದು ಸುಮಾರು 1984 ರಿಂದ ಅಂದರೆ ಶ್ರೀ ಜಿ.ಎಸ್.ಬಸವರಾಜ್‌ರವರು ಪ್ರಥಮ ಭಾರಿ ಲೋಕಸಭಾ ಸದಸ್ಯರಾದ ದಿನದಿಂದ ಇಲ್ಲಿಯವರೆಗೆ(ದಿನಾಂಕ:11.09.2013 ) ಸುಮಾರು 29 ವರ್ಷ 6 ತಿಂಗಳು ಆಗಿವೆ.  

  ಇಲ್ಲಿಂದ ಸಂಸದರ 4 ನೇ ಅವಧಿ ಮುಗಿದು ಚುನಾವಣೆ ಘೋಷಣೆಯಾಗಲು ಕೇವಲ 192 ದಿನಗಳು ಮಾತ್ರ ಬಾಕಿ ಇವೆ. ಹೆಚ್.ಎ.ಎಲ್ ಘಟಕವನ್ನೇ ತರಬೇಕೆಂದು ಶ್ರಮಿಸಲು ಆರಂಭಿಸಿದ ದಿನ ದಿನಾಂಕ: 17.06.2011  ಅಂದರೆ 2 ವರ್ಷ 2 ತಿಂಗಳು 24 ದಿವಸದ ಶ್ರಮ ಒಂದು ಹಂತಕ್ಕೆ ತಲುಪಿದೆ.

   ನಾನು ಪಟ್ಟಿಯನ್ನು ಎಂಪಿಯವರ ಮುಂದೆ ಇಟ್ಟು ಸಾರ್ ಈಗ ಉಳಿದಿರುವ 192  ದಿನಗಳಲ್ಲಿ ಹೆಚ್.ಎ.ಎಲ್ ಘಟಕಕ್ಕೆ ಶಂಕುಸ್ಥಾಪನೆ ಮಾಡಲೇ ಬೇಕು. ಎಂಪಿಯವರು ನಕ್ಕರು ನೋಡಪ್ಪಾ ನೀನು ಸಾಗರನಹಳ್ಳಿ ರೇವಣ್ಣನ ವಂಶ, ಎನಾದರೂ ಹೇಳಿದರೆ ನಿಮಗೆ ಸಿಟ್ಟು ಮೂಗಿನ ತುದಿ ಮೇಲೆ ಇರುತ್ತೆ, ಹಠವಾದಿಗಳು, ನಿಮ್ಮದು ಚಂಡಿಕತೆ ಆದರೂ ನಾನು ಮಾತಾಡಲ್ಲ, ನಾನು ಏನು ಮಾಡಬೇಕು ಹೇಳು ಪ್ರತಿದಿವಸವೂ ನಾನು ಯಾವ ಆಫೀಸ್‌ಗೆ ಹೋಗಬೇಕು ಯಾರನ್ನು ಭೇಟಿ ಮಾಡಬೇಕು, ಪ್ಲಾನ್ ರೆಡಿ ಮಾಡು ನೋಡೆ ಬಿಡೋಣ ಇದು ಒಂದು ‘ಚಾಲೆಂಜ್’ ಎಂದರು. 

 ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಸುಮಾರು ನೂರಾರು ಜನ ಅಧಿಕಾರಿಗಳು ಮತ್ತು ನೌಕರರು ಹಗಲಿರಳು ಶ್ರಮಿಸಿದರೆ ಮಾತ್ರ ಇದು ಸಾಧ್ಯ. ನಮ್ಮ ಕರ್ಮ ಜಿಲ್ಲಾಧಿಕಾರಿಗೆ ನೂರಕ್ಕೆ ನೂರರಷ್ಟು ಯೋಜನೆಗೆ ಮನಸ್ಸಿಲ್ಲ, ಜಿಲ್ಲಾ ಉಸ್ತವಾರಿ ಸಚಿವರು, ಶಾಸಕರು ಸೇರಿದಂತೆ ಯಾರೊಬ್ಬರೂ ಕಡತದ ಅನುಸರಣೆ ಮಾಡುತ್ತಿಲ್ಲ, ಮುಖ್ಯ ಮಂತ್ರಿಗಳಿಗೆ ಶಿವಮೊಗ್ಗ, ಬಿದರ್, ಗುಲ್ಭರ್ಗ, ತುಮಕೂರು ಜಿಲ್ಲೆಯಲ್ಲಿ ಶಿರಾ ಅಥವಾ ಗುಬ್ಬಿ’ ಯಾವುದನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ. ಕಂದಾಯ ಇಲಾಖೆಗೂ ಯಾವ ಜಿಲ್ಲೆಯ ಜಮೀನು ನೀಡಬೇಕು, ಯಾವ ನಾಯಕರ ಮಾತು ಕೇಳಬೇಕು ಎಂಬುದು ಕಬ್ಬಿಣದ ಕಡಲೆಯಾಗಿತ್ತು.

  ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀ ಎಸ್.ವಿ.ರಂಗನಾಥ್‌ರವರು / ಶ್ರೀ ಕೌಶಿಕ್ ಮುಖರ್ಜಿರವರು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀ ವಿದ್ಯಾಶಂಕರ್‌ರವರು/ ಶ್ರೀಮತಿ ರತ್ನಪ್ರಭರವರು, ಮೂಲಸೌಲಭ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಂದಿತಾಶರ್ಮರವರು, ದೆಹಲಿ ಕರ್ನಾಟಕ ಭವನದ ರೆಸಿಡೆಂಟ್ ಕಮೀಷನರ್ ಶ್ರೀಮತಿ ವಂದಿನಾ ಗುರ್‍ನಾನಿರವರು ಇವುರುಗಳಿಗೆ ಯಾವುದಾದರೂ ಜಿಲ್ಲೆಗೆ ಆಗಲಿ ನಮ್ಮ ರಾಜ್ಯಕ್ಕೆ ಯೋಜನೆ ತರಲೇಬೇಕು ಎಂಬ ದೃಢ ನಿರ್ಧಾರ ಮಾಡಿದ್ದರು.

ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿದ್ದ ಶ್ರೀ ವಿದ್ಯಾಶಂಕರ್‌ರವರು/ ಶ್ರೀಮತಿ ಶಾಲಿನಿರಜನೀಶ್ ರವರಿಗೆ ತುಮಕೂರು ಜಿಲ್ಲೆಗೆ ತರಲೇಬೇಕು ಎಂಬ ಗುರಿ ಇತ್ತು.

ಶ್ರೀ ಜಿ.ಎಸ್.ಬಸವರಾಜ್ ರವರು ಬಿಜೆಪಿ ಎಂಪಿ, ರಾಜ್ಯದಲ್ಲಿ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತು ಕೇಂದ್ರದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ 6 ತಿಂಗಳಲ್ಲಿ ಶಂಕುಸ್ಥಾಪನೆ ಒಂದು ಕನ್ನಡಿಯೊಳಗಿನ ಗಂಟು’ ನನಗೂ ಅರಿವಿತ್ತು. ಆದರೂ ಎಲ್ಲೋ ಒಂದು ಕಡೆ ಇದು ಸಾಧ್ಯಾ ಎಂಬ ಆಶಾಭಾವನೆ ನನ್ನದಾಗಿತ್ತು.