23rd June 2024
Share

TUMAKURU:SHAKTHIPEETA FOUNDATION

 ಕರ್ನಾಟಕ ರಾಜ್ಯದ 6021 ಗ್ರಾಮಪಂಚಾಯಿತಿಗಳ 29340 ಗ್ರಾಮಗಳ ಮತ್ತು 278  ನಗರ ಸ್ಥಳೀಯ ಸಂಸ್ಥೆಗಳ ಬಡಾವಾಣೆವಾರು ನಿವೇಶನ ರಹಿತರು ಹಾಗೂ ವಸತಿ ರಹಿತರ ಜಿಐಎಸ್ ಲೇಯರ್’ ಮಾಡಿ ಕೊಡಲು ಒಂದು ಸಂಸ್ಥೆ ಮುಂದೆ ಬಂದಿದೆ. ಆಯಾ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಅಗತ್ಯವಿರುವ ಭೂಮಿಯ ಜಿಐಎಸ್ ಲೇಯರ್’ ಮಾಡಲು ಸಹ ಚಿಂತನೆ ನಡೆಸಿದೆ. 

 ‘ಪಿಪಿಪಿ ಆಧಾರದಲ್ಲಿ’ ಈ ಕೆಳಕಂಡ ಮಾಹಿತಿ ಸಂಗ್ರಹಿಸಲು ಪಲಾನುಭವಿಗಳಿಂದ ಇಂತಿಷ್ಟು ಅಥವಾ ದಾನಿಗಳಿಂದ ದೇಣಿಗೆ ಸಂಗ್ರಹಿಸಲು ಸರ್ಕಾರದ ಅನುಮತಿ ಕೇಳಲು ಮುಂದಾಗಿದೆ.

  ವಸತಿ ಸಚಿವರಾದ ಶ್ರೀ ವಿ. ಸೋಮಣ್ಣವರು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಕನಸಿನ  ಹೌಸಿಂಗ್ ಫಾರ್ ಆಲ್ –2022’ ರ ಯೋಜನೆ ಜಾರಿಗೆ ಡಿಜಿಟಲ್ ಡೇಟಾ’ ಸಂಗ್ರಹಿಸಲು ಮುಂದಾಗಿದ್ದಾರೆ.

 ಮಾನ್ಯ ಮುಖ್ಯ ಮಂತ್ರಿಗಳಾದ  ಶ್ರೀ ಬಿ.ಎಸ್.ಯಡಿಯೂರಪ್ಪನವರು ಯಾವುದೇ ರೀತಿಯಲ್ಲಾಗಲಿ ಈ ಯೋಜನೆಯಡಿ ಅರ್ಹ ಎಲ್ಲರಿಗೂ ವಸತಿ ನೀಡಿ ‘ದೇಶಕ್ಕೆ ಮಾದರಿ’ ಯಾಗಲು ಚಿಂತನೆ ನಡೆಸುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

 ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು, ವಸತಿ ಸಚಿವರಾದ ಶ್ರೀ ವಿ.ಸೋಮಣ್ಣನವರು, ಕಂದಾಯ ಸಚಿವರಾದ ಶ್ರೀ ಆರ್.ಅಶೋಕ್‌ರವರು, ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪನವರು, ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ. ಬಸವರಾಜ್‌ರವರು ಮತ್ತು ಪೌರಾಡಳಿತ ಸಚಿವರಾದ ಶ್ರೀ ನಾರಾಯಣಗೌಡರವರೊಂದಿಗೆ ಸಂಸ್ಥೆಯ ಪ್ರತಿನಿಧಿಗಳು ಸಮಾಲೋಚನೆ ನಡೆಸಲಿದ್ದಾರೆ. 

  1. ಪ್ರತಿ ಗ್ರಾಮದಲ್ಲಿರುವ ’ಕುಟುಂಬಗಳ’ ಪಟ್ಟಿ.
  2. ಪ್ರತಿ ಗ್ರಾಮದಲ್ಲಿರುವ ’ನಿವೇಶನ ರಹಿತರ’ ಪಟ್ಟಿ.
  3. ಪ್ರತಿ ಗ್ರಾಮದಲ್ಲಿರುವ ’ವಸತಿ ರಹಿತರ’ ಪಟ್ಟಿ.
  4. ಪ್ರತಿ ಗ್ರಾಮದಲ್ಲಿರುವ ಹಾಲಿ ಇರುವ ’ವಸತಿ ಪುನರ್ ನಿರ್ಮಾಣ’ ಮಾಡಬೇಕಾದವರ ಪಟ್ಟಿ.
  5. ನಿವೇಶನ ರಹಿತರಿಗೆ ನಿವೇಶನ ನೀಡಲು ದೊರೆಯುವ ಸರ್ಕಾರಿ ಜಮೀನು ’ಜಿಐಎಸ್ ಲೇಯರ್’
  6. ನಿವೇಶನ ರಹಿತರಿಗೆ ನಿವೇಶನ ನೀಡಲು ’ಖಾಸಗಿ ಜಮೀನು ಮಾರಾಟ ಮಾಡಲು’ ಆಸಕ್ತಿ ಇರುವ ಜಮೀನಿನ ’ಜಿಐಎಸ್ ಲೇಯರ್’
  7. ನಿವೇಶನ ರಹಿತರಿಗೆ ನಿವೇಶನ ನೀಡಲು ’ಖಾಸಗಿ ಜಮೀನು ಭೂ ಸ್ವಾಧೀನ’ ಮಾಡಿಕೊಳ್ಳ ಬೇಕಾಗಿರುವ ಜಮೀನಿನ ’ಜಿಐಎಸ್ ಲೇಯರ್’
  8. ರಾಜ್ಯ ಸರ್ಕಾರ 2020-21 ರ ಆಯವ್ಯಯ ಪತ್ರದಲ್ಲಿ ಪ್ರಕಟಿಸಿರುವ ’ಗ್ರಾಮ-1’ ಕೇಂದ್ರದ ವಸತಿ ಸಹಿತ ಕಚೇರಿ ಕಟ್ಟಡ ನಿರ್ಮಾಣ ಮಾಡಲು ದೊರೆಯುವ ಸರ್ಕಾರಿ ನಿವೇಶನ, ಬಾಡಿಗೆ ಆಧಾರಿತ ಖಾಸಗಿ ಜಮೀನು, ಭೂ ಸ್ವಾಧೀನ ಜಮೀನು, ಮಾರಾಟ ಜಮೀನಿನ ಅಥವಾ ಗ್ರಾಮ-1 ಗೆ ಆಯ್ಕೆಯಾದ ವ್ಯಕ್ತಿಯ ಸ್ವಂತ ನಿವೇಶನದ  ’ಜಿಐಎಸ್ ಲೇಯರ್’
  9. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಓ, ಆಯಾ ಗ್ರಾಮದಲ್ಲಿರುವ ಎಲ್ಲಾ ಜನಾಂಗದ ಪ್ರತಿನಿಧಿ, ಎಲ್ಲಾ ರಾಜಕೀಯ ಪಕ್ಷಗಳ ಕಾರ್ಯಕರ್ತರ ಪ್ರತಿನಿಧಿ, ಹಾಲಿ ಮತ್ತು ಮಾಜಿ ಗ್ರಾಮ ಪಂಚಾಯತ್ ಸದಸ್ಯರ, ಗ್ರಾಮ ಸರಪಂಚರ, ಸಂಘ ಸಂಸ್ಥೆಗಳ, ಸ್ತ್ರೀ ಶಕ್ತಿ ಸಂಘಗಳ ಪ್ರತಿನಿಧಿ, ಯುವ ಸಂಘಗಳ ಪ್ರತಿನಿಧಿ, ಗ್ರಾಮದ ದೇವಾಲಯದ ಪೂಜೆ ಮಾಡುವವರ, ಇದ್ದಲ್ಲಿ ಗ್ರಾಮದ ತೋಟಿತಳವಾರರ, ವಿದ್ಯುತ್ ಪ್ರತಿನಿಧಿ, ವಾಟರ್ ಮ್ಯಾನ್, ಬಿಲ್ ಕಲೆಕ್ಟರ್ ಇವರೆಲ್ಲರ ಸಭೆ ಕರೆದು ಪಟ್ಟಿ ಮಾಡಿ ಅಂತಿಮ ಪಟ್ಟಿ ಪ್ರಕಟಿಸಿ ಸಾರ್ವಜನಿಕರ ದೂರು ದುಮ್ಮಾನುಗಳೊಂದಿಗೆ ಎಲ್ಲಾ ವಿವರಗಳನ್ನು ಗ್ರಾಮವಾರು ’ಅಫ್‌ಲೋಡ್’ ಮಾಡಲಾಗುವುದು.

  ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್‌ರವರು, ವಿರೋಧ ಪಕ್ಷದ ನಾಯಕರುಗಳಾದ ಶ್ರೀ ಸಿದ್ಧರಾಮಯ್ಯನವರು ಮತ್ತು ಶ್ರೀ ಎಸ್.ಆರ್.ಪಾಟೀಲ್‌ರವರು, ಕೊರೊನಾ ಲಾಕ್ ಡೌನ್ ಮುಗಿದ ತಕ್ಷಣ ಮೋದಿಯವರೇ  ’ಹೌಸಿಂಗ್ ಫಾರ್ ಆಲ್ -2022 ಗ್ರಾಮವಾರು ಲೆಕ್ಕಕೊಡಿ’ ಎಂದು ರಾಜ್ಯದ 6021 ಗ್ರಾಮ ಪಂಚಾಯತ್ ಮತ್ತು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮುಂದೆ ವಿಶಿಷ್ಠವಾದ ರೀತಿಯಲ್ಲಿ  ಧರಣಿ ನಡೆಸುವ ಮೂಲಕ ಪಕ್ಷದ ಸಂಘಟನೆಯನ್ನು ಗ್ರಾಮ ಮಟ್ಟದ ವಸತಿ/ನಿವೇಶನ ರಹಿತರಿಗೆ ಸೌಲಭ್ಯ ದೊರಕಿಸುವ ಮೂಲಕ ಆರಂಭಿಸಲು ಮುಂದಾಗಿದ್ದಾರೆ ಎಂದು ಆ ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

  ಮೋದಿಯವರು ಉತ್ತಮವಾದ ಅಲೋಚನೆಯಿಂದ ಅವರೇ ಸ್ವಯಂ ಗಡುವು ನೀಡಿದ್ದರೂ, ರಾಜ್ಯ ಸರ್ಕಾರಗಳ ಅಸಹಕಾರದಿಂದ ದೇಶಾದ್ಯಾಂತ ಮುಜುಗರ ಅನುಭವಿಸ ಬೇಕಾದ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್‌ಗೆ ಇದೊಂದು ಪ್ರಭಲ ಅಸ್ತ್ರವಾಗಲಿದೆ’ ಎಂದು ದೆಹಲಿ ಮಟ್ಟದ ಚಿಂತಕರ ಅಭಿಪ್ರಾಯವಾಗಿದೆ.

  ವಕೀಲರೊಬ್ಬರು ನ್ಯಾಯಾಲಯದಲ್ಲಿ ಪಿಐಎಲ್’ ಹಾಕುವ ಬಗ್ಗೆ ಸಮಾಲೋಚನೆ ಮಾಡುತ್ತಿದ್ದಾರೆ. ಎನೇ ಆಗಲಿ ರಾಜ್ಯದಲ್ಲಿ ವಸತಿ ರಹಿತರು ’ಶೂನ್ಯ’ ಆಗಲಿ. ಹೌಸಿಂಗ್ ಫಾರ್ ಆಲ್ –2022’ ಯೋಜನೆ ಶೇ 100 ರ ಗುರಿ ತಲುಪಲಿ.