22nd December 2024
Share

   TUMAKURU:SHAKTHIPEETA FOUNDATION

  ಸಿದ್ಧಗಂಗಾ ಶ್ರೀಗಳಿಗೆ 100 ವರ್ಷ ತುಂಬಿದಾಗ 2007 ರಲ್ಲಿ ತುಮಕೂರಿನ ಜನತೆಗೆ ಹಬ್ಬವೋ ಹಬ್ಬ. ಜಾತಿ, ಪಕ್ಷ ಎಲ್ಲವನ್ನು ಬದಿಗೊತ್ತಿ ಒಬ್ಬೊಬ್ಬರು ಒಂದೊಂದು ರೀತಿಯ ಅವೀಸ್ಮರಣಿಯ ಕಾರ್ಯಕ್ರಮಗಳನ್ನು ಸ್ವಯಂ ಪ್ರೇರಣೆಯಿಂದ ಹಮ್ಮಿಕೊಂಡಿದ್ದು ಇತಿಹಾಸಗಳ ಪುಟ ಸೇರಿದೆ.

  ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ವಿಶೇಷವಾದ ಯೋಜನೆಯನ್ನು ಹಮ್ಮಿಕೊಂಡು ಕೆಲವರ ನಿದ್ದೆಗೆಡಿಸುವುದರಲ್ಲಿ ಯಾವಾಗಲೂ ಎತ್ತಿದ ಕೈ. ತುಮಕೂರು ಹಳ್ಳಿಗೆ ಹಳ್ಳಿಯೂ ಅಲ್ಲ, ನಗರಕ್ಕೆ ನಗರವೂ ಅಲ್ಲ ಎನ್ನುವ ಸ್ಥಿತಿಯಲ್ಲಿತ್ತು.

   ಅಂತಹ ಸಂದರ್ಭದಲ್ಲಿ ತುಮಕೂರು ನಗರದ ಅಭಿವೃದ್ಧಿಗೆ ಶ್ರಮಿಸುವ ಏಕೈಕಗುರಿಯೊಂದಿಗೆ 2001 ರಲ್ಲಿ ಫೋರಂ ಸ್ಥಾಪನೆಯಾಗಿತ್ತು. ನಗರದ ಎಲ್ಲರೂ ಒಂದೊಂದು ಕಾರ್ಯಕ್ರಮ ಮಾಡುವಾಗ ನಾವೂ ಸಹ ಏನಾದರೂ ಮಾಡಬೇಕು ಎನಿಸಿತು.

  ನನಗೆ ತಟ್ಟನೆ ಹೊಳೆದಿದ್ದು ತುಮಕೂರು ನಗರದ ಕುಂದು ಕೊರತೆಗಳ, ಅಭಿವೃದ್ಧಿ ಪರ ಯೋಜನೆಗಳ ಬಗ್ಗೆ 100 ದಿನಗಳ ವಿಚಾರಣ ಸಂಕಿರಣ ಮಾಡುವುದು. ನೋಡಿ ಎಷ್ಟು ಕಷ್ಟದ ಕೆಲಸವನ್ನು ಆಯ್ಕೆ ಮಾಡಿಕೊಂಡೆ.

  ಸಭೆ ಆಯೋಜಿಸಿದಾಗ ಕೆಲವರು ಇದು ಹುಡುಗಾಟದ ಕೆಲಸವಾ? ಯಾವ ವಿಚಾರದ ಬಗ್ಗೆ ಕಾರ್ಯಕ್ರಮ ಆಯೋಜಿಸುವುದು. ಇದಕ್ಕೆ ಹಣಕಾಸು ಸಂಗ್ರಹಿಸುವುದು ಹೇಗೆ. ಜನರನ್ನು ಸೇರಿಸುವುದು ಹೇಗೆ ಎಂದು ತಮ್ಮ ಮಾಮೂಲಿ ಗೊಣಗಾಟ ಆರಂಭಿಸಿದರು.

  ನಾನು ಸಭೆಯಲ್ಲಿ ಹೇಳಿದ್ದು ಫೋರಂ ಆರಂಭದಿಂದಲೂ ಯಾರ ಬಳಿಯೂ ಹಣ ಪಡೆದಿಲ್ಲ, ಈಗಲೂ ಪಡೆಯುವುದಿಲ್ಲ, ಕಳೆದ ಐದು ವರ್ಷ ನಡೆಸಿಕೊಂಡು ಬಂದಿದ್ದೇನೆ ನೀವೂ ಯಾರಾದರೂ ಹಣ ನೀಡಿದ್ದೀರಾ. ಬೇರೆ ಯಾರಿಂದಲಾದರೂ ದೇಣಿಗೆ ಪಡೆಯಲಾಗಿದೆಯೇ? ಇಲ್ಲ ಎಂದಾದರೆ ಹಣದ ವಿಚಾರ ಬಿಟ್ಟು ಬಿಡಿ.

  ಆಗಂತ ಶ್ರೀ ಜಿ.ಎಸ್.ಬಸವರಾಜ್‌ರವರು ಫೋರಂ ಮಹಾ ಪೋಷಕರಾಗಿದ್ದರೂ ಅವರಿಂದಲೂ ಹಣ ಪಡೆದಿಲ್ಲ, ಪಡೆಯುವುದು ಇಲ್ಲ. ಅಲ್ಲದೇ ನಮಗೆ ಹಣ ಏಕೆ ಬೇಕು, ಸಭೆಯಲ್ಲಿ ಕಾಫಿ ಕುಡಿಸುವುದಿಲ್ಲ, ಶಾಮಿಯಾನ, ಕುರ್ಚಿ ಹಾಕಿಸುವುದಿಲ್ಲ, ಆಹ್ವಾನಾ ಪತ್ರಿಕೆಯಿಲ್ಲ, ಯಾವುದೋ ಕಟ್ಟಡದಲ್ಲಿ ನೆಲದ ಮೇಲೆ ಅಥವಾ ಅವರಲ್ಲಿದ್ದರೆ ಕುರ್ಚಿಯ ಮೇಲೆ ಕುಳಿತು ಸಭೆ ಮಾಡುತ್ತೇವೆ. ಬಾಡಿಗೆಯೂ ಇಲ್ಲ.

  ನನಗೆ ಬೇಕಾಗುವುದು ಫೋಟೋಗೆ ಕಾರ್ಯಕ್ರಮವೊಂದಕ್ಕೆ ಕೇವಲ ರೂ 150, ಪತ್ರಿಕೆಗೆ ಪ್ರೆಸ್ ನೋಟ್ ಹಂಚಲು ರೂ 100 ಇಷ್ಟು ಸಾಕು. 100 ದಿವಸದ ಕಾರ್ಯಕ್ರಮಗಳಿಗೆ  ರೂ 25000 ಸಾಕು. ನನ್ನ ದುಡಿಮೆಯಲ್ಲಿ ಶೇಕಡ 10 ದಾನ ನೀಡಬೇಕು. ನಾನು ಯಾರಿಗೂ ದಾನ ನೀಡುವುದಿಲ್ಲ, ಆ ಹಣವನ್ನು ಸಮಾಜ ಸೇವೆಗೆ ಖರ್ಚು ಮಾಡುತ್ತೇನೆ.

   ಜನರ ಬಗ್ಗೆ ಚಿಂತೆ ಏಕೆ 10 ಜನ ಇದ್ದರೂ ಸಾಕು, ನಾವು ವಿಚಾರ ವಿನಿಮಯ ಮಾಡುವುದು. ಇದು ರಾಜಕಾರಣಿಗಳ ಸಭೆಯಲ್ಲ, 100 ವಿಷಯಗಳ ಬಗ್ಗೆ ನೀವೇಕೆ ಚಿಂತೆ ಮಾಡುತ್ತಿರಿ ನಾನು ಈಗಾಗಲೇ ನಗರದ ಅಭಿವೃದ್ಧಿ ಬಗ್ಗೆ ಗಮನಹರಿಸಿರುವ ಯೋಜನೆಗಳೇ 100 ಕ್ಕೂ ಜಾಸ್ತಿ ಇವೆ, ಎಂದಾಗ ಎಲ್ಲರೂ ಸಹ ಒಪ್ಪಿದರು.

  ಈ ಕಾರ್ಯಕ್ರಮ ನಗರದಲ್ಲಿ ನಾರಾರು ಯುವಕರಿಗೆ, ಮಹಿಳೆಯರಿಗೆ, ಹಿರಿಯನಾಗರೀಕರಿಗೆ ನಾಯಕತ್ವ ವಹಿಸಲು ವೇದಿಕೆಯಾಯಿತು. ಬಹುತೇಕ ಅವರೆಲ್ಲರೂ ಈಗಲೂ ಹೇಳುತ್ತಾರೆ ನಾವು ಫೋರಂ ಪ್ರಾಡಕ್ಟ್’ ಅಂತ ನನಗೆ ಇದಕ್ಕಿಂತ ಖುಷಿ ಇನ್ನೇನು ಬೇಕು? ಅವರಲ್ಲಿ ಕೆಲವರು ಡುಡಿಮೆ ಮಾಡಿ ಕೋಟ್ಯಾಧಿಪತಿಗಳಾಗಿದ್ದಾರೆ, ಅಧಿಕಾರ ಹಿಡಿದಿದ್ದಾರೆ, ನಾನು ಸಮಾಜ ಸೇವೆ ಮಾಡಿ ಈಗಲೂ ಹಾಗೆ ಇದ್ದೇನೆ ಅಷ್ಟೆ.

  ಈ ಕಾರ್ಯಕ್ರಮ ಎಷ್ಟರ ಮಟ್ಟಿಗೆ ಪ್ರಸಿದ್ಧಿಯಾಯಿತು ಎಂದರೆ, ತುಮಕೂರು ನಗರದ ಶಾಸಕರಾದ  ಮಾನ್ಯ ಶ್ರೀ ಸೊಗಡು ಶಿವಣ್ಣನವರು ತುಮಕೂರಿಗೆ ಬಂದು ಒಂದು ಜೋಪಡಿ’(ನನ್ನ ಕಚೇರಿ ಕಂ ಮನೆ) ಕಟ್ಟಿಕೊಂಡು ಕೂಗಾಡಿದರೆ ನಗರ ಅಭಿವೃದ್ಧಿಯಾಗುತ್ತದೆಯೇ? ಫೋರಂನವರನ್ನು ಗಡಿಪಾರು’ ಮಾಡಬೇಕು ಎಂದು ಪತ್ರಿಕಾ ಹೇಳಿಕೆ ನೀಡುವ ಮಟ್ಟಕ್ಕೆ ಬೆಳೆಯಿತು.

  ಅಷ್ಟೆ ಅಲ್ಲ ಶಿವಣ್ಣನವರೇ ನಿಮಗೆ ಈ ಊರಿನಲ್ಲಿ ಯಾವ ಪಕ್ಷ ವಿರೋಧ ಮಾಡುತ್ತದೆ. ಕಾಂಗ್ರೆಸ್ ಅಥವಾ ಜನತಾದಳವೋ ಎಂದು ಪತ್ರಿಕೆಯವರು ಕೇಳಿದ ಪ್ರಶ್ನೆಗೆ, ಪಾಪ ಅವರೆಲ್ಲಾ ಒಳ್ಳೆಯವರು ಬಿಡಿ, ಆದರೇ ಫೋರಂ, ಇದ್ದಾನಲ್ಲಾ ಅವನದ್ದೆ’ ಎಲ್ಲಾ ಎಂದಿದ್ದು ನನಗೆ ನಗು ಬರುತಿತ್ತು.