TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ಹೆಚ್.ಎ.ಎಲ್ ಗೆ ನೀಡಿದ್ದ 610 ಎಕರೆ ಭೂಮಿ ವಿವಾದ ಹೈಕೋರ್ಟ್‌ನಲ್ಲಿರುವುದರಿಂದ ಗೋವಾದಲ್ಲಿ ಹೆಚ್.ಎ.ಎಲ್ ಘಟಕ ಸ್ಥಾಪಿಸಲು ಫಿಸಿಬಿಲಿಟಿ ರಿಪೋರ್ಟ್ ತಯಾರಿಸಲು ಕೇಂದ್ರ ರಕ್ಷಣಾ ಸಚಿವರಾದ ಶ್ರೀ ಮನೋಹರ್ ಪರಿಕ್ಕರ್ ಸೂಚನೆ ಇಲಾಖಾ ಅಧಿಕಾರಿಗಳಲ್ಲಿ ತಲ್ಲಣ ಮೂಡಿಸಿತು.
ಅಧಿಕಾರಿಗಳು ನನಗೆ ಫೋನ್ ಮೂಲಕ ವಿಷಯ ತಿಳಿಸಿದರು, ಯಾವುದಾದರೂ ಅಧಿಕೃತ ಧಾಖಲೆ ಇದೆಯಾ ಎಂಬ ಪ್ರಶ್ನೆಗೆ ಇದು ರಕ್ಷಣಾ ಇಲಾಖೆ ಸಾರ್. ಯಾವುದನ್ನು ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ತಿಳಿಸಿದರು.
ಜಿ.ಎಸ್.ಬಸವರಾಜ್‌ರವರಿಗೆ ತಿಳಿಸಿದೆ, ’ರೋಗಿ ಬಯಸಿದ್ದು ಹಾಲು ಅನ್ನ- ಡಾಕ್ಟರ್ ಹೇಳಿದ್ದು ಹಾಲು ಅನ್ನ’ ಎಂಬ ಗಾದೆಗೆ ತಕ್ಕ ಹಾಗೆ ಆಯಿತು. ಏನಪ್ಪಾ ಈಗ ಮಾಡೋದು ಎಂದಾಗ ಸಾರ್ ಮೊದಲು ಶಂಕುಸ್ಥಾಪನೆಗಾಗಿ ದಿನ ನಿಗದಿ ಮಾಡಲು ಮುಖ್ಯ ಮಂತ್ರಿಗಳಿಂದ ಒಂದು ಪತ್ರ ಬರೆಸಬೇಕಂತೆ. ಅಧಿಕಾರಿಗಳು ಹೇಳಿದ್ದಾರೆ ಅಂದೆ. ಎಂಪಿಗೆ ಒಂದು ಮಾತು ಹೇಳು ನೋಡೋಣಾ ಅಂದರು. ಇಲ್ಲಾ ಸಾರ್ ನಾನು ಮಾತಾಡಲ್ಲ ನನಗೆ ವಿಜ್ಞಾನ ಗುಡ್ಡದಲ್ಲಿ ಅವಮಾನವಾಗಿದೆ ಎಂದೆ.
ಇದೆಲ್ಲಾ ರಾಜಕೀಯದಲ್ಲಿ ಕಾಮನ್ ಆತ ಎಂಪಿ ಕಣಯ್ಯಾ ಒಂದು ಮಾತು ಹೇಳು ಅಂದರು. ನಾನು ಮಾತ್ರ ಆ ಸುದ್ದಿಗೆ ಹೋಗಲ್ಲ, ಬನ್ನಿ ಸಿಎಂ ಬಳಿ ಹೋಗೋಣ ಎಂದೆ. ಚುನಾವಣೆ ಆದ ಮೇಲೆ ಶ್ರೀ ಸಿದ್ಧರಾಮಯ್ಯನವರನ್ನು ನಾನು ಮಾತನಾಡಿಸಿಲ್ಲ ನಿನಗೆ ಗೊತ್ತಲ್ಲ, ನಾನು ಬರೋಲ್ಲ ಅಂದರು.
ನಾಳೆ ಬೆಂಗಳೂರಿಗೆ ಹೋಗೋಣ ಸಾರ್, ಆ ಮೇಲೆ ಏನು ಮಾಡುಬೇಕು ಯೋಚನೆ ಮಾಡೋಣ ಎಂದೆ. ತಕ್ಷಣ ನಿನ್ನ ಫ್ರೆಂಡ್ ಉಗ್ರಪ್ಪನಿಗೆ ಫೋನ್ ಮಾಡು ಅಂದರು. ಸರಿ ಸಾರ್ ಅಂತ ತಕ್ಷಣ ಫೋನ್ ಮಾಡಿ ಶ್ರೀ ಉಗ್ರಪ್ಪನವರಿಗೆ ಎಲ್ಲಾ ವಿಚಾರ ತಿಳಿಸಿದೆ. ನಾಳೆ ಬನ್ನಿ ರಮೇಶ್ ಸಿಎಂ ಪತ್ರ ಮಾಡಿಸೋಣ ಅಂದರು. ಬಸವರಾಜ್‌ರವರು ಬರ್ತಾರೆ ಸಾರ್ ಎಲ್ಲಿ ಭೇಟಿಯಾಗೋಣ ಅಂದೆ. ಮಾಮೂಲಿ ಇದೆಯಲ್ಲಾ ಸಚೇತಕರಾದ ಶ್ರೀ ಅಶೋಕ್ ಪಟ್ಟಣಶೆಟ್ಟಿ ಆಫೀಸ್‌ಗೆ ಬನ್ನಿ ಎಂದರು.
ಸಿಎಂ ಪತ್ರ ಬರೆಸಲು ವೇದಿಕೆ ರೆಡಿಯಾಯಿತು.