TUMAKURU:SHAKTHIPEETA FOUNDATION
2014 ರ ಲೋಕಸಭಾ ಚುನಾವಣೆ ನಂತರ ತುಮಕೂರು ಜಿಲ್ಲೆಯ ಎಲ್ಲಾ ರಾಜಕಾರಣಿಗಳ ಬಳಿ ಹೆಚ್.ಎ.ಎಲ್. ಅಧಿಕಾರಿಗಳು ಹೋಗಿದ್ದಾರೆ, ಯಾವ ರಾಜಕಾರಣಿಯೇ ಆಗಲಿ, ಜಿಲ್ಲೆಯ ಯಾವುದೇ ಅಧಿಕಾರಿಗಳಿಂದಾಗಲಿ ಸ್ಪಂದನೆ ಸಿಕ್ಕಿಲ್ಲ. ಸರ್ಕಾರದ ಹಂತದಲ್ಲಿ ಕಡತ ಚಾಲನೆ ಆಗುತ್ತಿಲ್ಲ ಅವರಿಗೆ ತಲೆ ನೋವಾಗಿದೆ.
ಇಲ್ಲಿಯವರೆಗೂ ನಮ್ಮ ಬಳಿ ಕೆಲಸ ಆಗಿ ಪತ್ರ ಬರುತ್ತಿತ್ತು. ಈಗ ನಾವೇ ಹಿಂದೆ ಹೋದರೂ ಯಾವ ಕೆಲಸವೂ ಆಗುತ್ತಿಲ್ಲ ಎಂಬ ಕೊರಗು ಅವರಿಗೆ ಕಾಡಿದೆ. ಸಚಿವ ಸಂಪುಟದ ಆದೇಶ ನಾವು ಹಿಂದೆ ಬೀಳದಿದ್ದರೂ ಕುಂದರನಹಳ್ಳಿ ರಮೇಶ್ ಕಳುಹಿಸಿದ್ದಾರೆ. ಇದು ಹೇಗೆ ಎಂದು ಮಾತನಾಡಿಕೊಂಡಿದ್ದಾರೆ.
ಕೊನೆಗೆ ಒಂದು ದಿವಸ ಹೆಚ್.ಎ.ಎಲ್. ಅಧಿಕಾರಿಗಳಿಂದ ಫೋನ್ ಬಂತು, ಸಾರ್ ಹೆಚ್.ಟಿ. ಲೈನ್ ಶಿಪ್ಟ್ ಬಗ್ಗೆ ಯಾರೂ ಸ್ಪಂದಿಸುತ್ತಿಲ್ಲ ಸುತ್ತಿ, ಸುತ್ತಿ ಸಾಕಾಗಿದೆ ಎಂದರು, ಯಾರ್‍ಯಾರು ಬಳಿ ಹೋಗಿದ್ದೀರಿ ಏನೇನು ಹೇಳಿದರು ಎಲ್ಲಾ ಮಾಹಿತಿ ತಿಳಿದು ಕೊಂಡೆ. ಸರಿ ನೋಡೋಣಾ ಇರಿ ಎಂದು ಹೇಳಿದೆ.
ಪತ್ರಿಕಾ ಘೋಷ್ಟಿ ಕರೆದು ನನೆಗುದಿಗೆ ಬಿದ್ದಿರುವ ವಿಚಾರ ಪ್ರಸ್ತಾಪಿಸಿದೆ. ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರಿಗೆ ಫೋನ್ ಮಾಡಿ ಹೇಳಿದೆ. ಒಂದು ಕೆಲಸ ಮಾಡೋಣಾ ಡಿಕೆ ಬಳಿ ಹೋಗಿ ಬರೋಣ ಹೊರಡು ಬರುತ್ತೇನೆ ಎಂದರು.
ಮನೆಗೆ ಬಂದಾಗ ಸಾರ್ ಶ್ರೀಧರ್‌ರವರಿಗೆ ಫೋನ್ ಮಾಡಿ ಟೈಮ್ ಫಿಕ್ಸ್ ಮಾಡಿಕೊಂಡು, ಅಧಿಕಾರಿಗಳನ್ನು ಕರೆದು ಕೊಂಡು ಹೋಗುವುದು ಉತ್ತಮ ಎಂದಾಗ ಅದೂ ಸರಿ ಎಂದು ಫೋನ್ ಮಾಡಿದರು. ಶ್ರೀಧರ್‌ರವರು ಶ್ರೀ ಡಿ.ಕೆ.ಶಿವಕುಮಾರ್‌ರವರ ಬಳಿ ಕೇಳಿದ ನಂತರ, ಸಾರ್ ನಾಡಿದ್ದು ಬೆಳಿಗ್ಗೆ 10 ಗಂಟೆಗೆ ಬನ್ನಿಸಾರ್ ಎಂದರು.
ಹೆಚ್.ಎ.ಎಲ್. ಅಧಿಕಾರಿಗಳಿಗೂ ಫೋನ್ ಮಾಡಿ ಮಾತನಾಡಿಸಿದೆ. ನಂತರ ಕೆಪಿಟಿಸಿಎಲ್ ಅಧಿಕಾರಿಗಳು ಇದ್ದರೆ ಒಳ್ಳೆಯದು ಎಂಬ ಸಲಹೆ ನೀಡಿದರು. ಕೆಪಿಟಿಸಿಎಲ್ ಅಧಿಕಾರಿಗಳಿಗೆ ಮಾತನಾಡಿದಾಗ ಸಾರ್ ಮಿನಿಸ್ಟರ್ ಬಳಿ ಬರಬೇಕಾದರೆ ಅವರಿಂದ ಕರೆ ಬಂದರೆ ಒಳ್ಳೆಯದು ಸಾರ್ ಎಂದರು ಹಾಲಿಗೂ, ಮಾಜಿಗೂ ಇರುವ ವ್ಯತ್ಯಾಸ ಇದೆನೇ.
ಶ್ರೀಧರ್‌ರವರಿಗೆ ಮತ್ತೆ ಮಾತನಾಡಿಸಿ ಕೆಪಿಟಿಸಿಎಲ್ ಅಧಿಕಾರಿಗಳನ್ನು ಕರೆಯಿರಿ ಸಾರ್, ಹೆಚ್.ಎ.ಎಲ್ ನವರು ಬರುತ್ತಾರೆ ಎಂದಾಗ ಅವರು ಒಪ್ಪಿದರು. ಹೇಗಾದರೂ ಆಗಲಿ ನನ್ನದು ಒಂದು ಪತ್ರ ರೆಡಿಮಾಡಿಸು ಎಂದು ಬಸವರಾಜ್‌ರವರು ಹೇಳಿದರು.
ಶ್ರೀ ಡಿ.ಕೆ.ಶಿವಕುಮಾರ್‌ರವರ ಮನೆಗೆ ಹೋಗುವ ವೇಳೆಗೆ ಎಲ್ಲಾ ಅಧಿಕಾರಿಗಳು ಬಂದು ಅಲ್ಲಿದ್ದರು. ಅಲ್ಲಿ ಶ್ರೀ ಖೇಣಿಯವರು ಮತ್ತು ಶ್ರೀ ಡಿ.ಕೆ.ಶಿವಕುಮಾರ್‌ರವರು ಇದ್ದರು. ಡಿಕೆಶಿ ಬಸಣ್ಣಾ ತಿಂಡಿ ತಿನ್ನಿ ಎಂದಾಗ ಬೇಡ ಎಲ್ಲಾ ಆಗಿದೆ ಎಂದರು.
ಬಸವರಾಜ್‌ರವರು ಶುರು ಮಾಡಿದರು ನೋಡಿ ಶಿವಕುಮಾರ್ ಇವರು ಊರು ಅದು, ನನ್ನದೇನೂ ಇಲ್ಲ ಈ ಯೋಜನೆ ಆಗಬೇಕಾದರೆ 25 ವರ್ಷದಿಂದ ಇವನದೇ ಹೋರಾಟ, ನಾನು ಈತ ಹೇಳಿದ ಕಡೆ ಹೋಗಿದ್ದೇನೆ ಎಂದಾಗ, ಡಿಕೆಶಿಯವರು ಏ ನೀನು ಈ ಕಡೆ ನನ್ನ ಪಕ್ಕಕ್ಕೆ ಬಾರಪ್ಪ, ಬಸಣ್ಣಾ ಎಲ್ಲರನ್ನೂ ಬೈತಾರೆ, ಆದರೆ ನಿನ್ನ ಬಗ್ಗೆ ಹೀಗೆ ಹೇಳಿದ್ದಾರೆ ಎಂದರೆ ಒಳ್ಳೆ ಕೆಲಸ ಮಾಡಿದ್ದೀಯ ಎಂದರು.
ನಂತರ ಬಸವರಾಜ್ ಅವರು ಪತ್ರ ನೀಡಿದರು, ಡಿಕೆಶಿರವರು ಪತ್ರ ಓದಿದರು, ನಂತರ ಅಧಿಕಾರಿಗಳ ಬಳಿ ಮಾಹಿತಿ ಪಡೆದರು. ನಿಮಗೆ ಎಷ್ಟು ದಿವಸದಲ್ಲಿ ಈ ಕೆಲಸ ಆಗಬೇಕು ಎಂದರು ಹೆಚ್.ಎ.ಎಲ್ ನವರು ಸಾರ್ 15 ದಿವಸದಲ್ಲಿ ಆದೇಶ ನೀಡಿದರೆ ಒಳ್ಳೆಯದು ಎಂದರು.
ಬಸಣ್ಣಾ ನಿನ್ನ ಪತ್ರ ಬೇಡ, ಗೊತ್ತಲ್ಲಾ ನಿಮ್ಮ ಜಿಲ್ಲೆ ರಾಜಕೀಯ, ಶ್ರೀಧರ್ ತಗೊಳಿ ಇದು ಒಂದು ಕಡೆ ಇಟ್ಟುಕೊಳ್ಳಿ, ಹೆಚ್.ಎ.ಎಲ್ ನವರು ನೀವೇ ಒಂದು ಪತ್ರಕೊಡಿ ಎಂದು ಹೇಳಿದರು, ಅಣ್ಣಾ 15 ದಿವಸದಲ್ಲಿ ಓಕೆ ಎಂದರು.
ಸರಿ ಸೋಲು ಗೆಲುವು ಮಾತನಾಡಿ ಹೊರಟೆವು ಪುಣ್ಯಾತ್ಮ 15 ದಿವಸದ ವೇಳೆಗೆ ರೂ 6 ಕೋಟಿ ಮಾಡಿದ್ದ ಅಂದಾಜು ಪಟ್ಟಿಗೆ ಮಾರ್ಪಾಡು ಮಾಡಿ ಹೆಚ್.ಎ.ಎಲ್ ನವರ ಅಗತ್ಯಕ್ಕೆ ತಕ್ಕಂತ ಸುಮಾರು ರೂ 57 ಕೋಟಿ ವೆಚ್ಚದ ಯೋಜನೆಗೆ ಒಂದು ಆದೇಶವನ್ನೇ ಮಾಡಿದರು.