TUMAKURU:SHAKTHIPEETA FOUNDATION
ಬಿದರೆ ಹಳ್ಳಕಾವಲ್ ಎಲ್ಲಾ ಜಮೀನನ್ನು ಬಗರ್ ಹುಕುಂ ಯೋಜನೆಯಡಿಯಲ್ಲಿ ಉಳುಮೆ ಮಾಡುತ್ತಿದ್ದರು. ಪಾರಂ 50 ಮತ್ತು ಫಾರಂ ನಂ 53 ಯಲ್ಲಿ ಅರ್ಜಿ ಹಾಕಿಕೊಂಡಿದ್ದರು. ನಿಯಮ ಪ್ರಕಾರ ಯಾವುದೇ ಯೋಜನೆಗೆ ಸರ್ಕಾರಿ ಜಮೀನು ಮಂಜೂರು ಮಾಡಲು ಯಾವುದೇ ಅರ್ಜಿಗಳು ಇರಬಾರದು. ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದರು.
ದಿ: 21.09.2001 ರಂದು ಆಗಿನ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್. ಬಸವರಾಜ್‌ರವರು ಸನ್ಮಾನ್ಯ ಶ್ರೀ ಹೆಚ್.ಸಿ. ಶ್ರೀಕಂಠಯ್ಯನವರು ಮಾನ್ಯ ಕಂದಾಯ ಸಚಿವರು, ಕರ್ನಾಟಕ ಸರ್ಕಾರ ಇವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಅವರು ಜಮೀನನ್ನು ಯಾವುದಾದರೂ ಉದ್ದಿಮೆ ಕೈಗೊಳ್ಳಲು ಕಾಯ್ದಿರಿಸಲು ಆದೇಶಿಸಿದರು.
ಗುಬ್ಬಿ ವಿಧಾನಸಭಾ ಸದಸ್ಯರಾದ ಶ್ರೀ ಎನ್.ವೀರಣ್ಣಗೌಡರವರು ಏಕೋ-ಏನೋ ಸುಮಾರು ಒಂದು ವರ್ಷವಾದರೂ ಬಗರ್ ಹುಕುಂ ಸಮಿತಿಗೆ ಇಡಲಿಲ್ಲ. ನಾನು ಅದೆಷ್ಟು ಭಾರಿ ಅವರ ಗಮನಕ್ಕೆ ತಂದು ಪ್ರಯೋಜನವಾಗಲಿಲ್ಲ.
ನಾನು ಗುಬ್ಬಿ ತಾಲ್ಲೂಕಿನ ಬಹಳ ಜನರ ಬಳಿ ಈ ವಿಚಾರ ಪ್ರಸ್ತಾಪ ಮಾಡಿದ್ದೆ. ಒಂದು ಸುವರ್ಣ ಅವಕಾಶವನ್ನು ಗುಬ್ಬಿಯ ಕೆಲವು ನಾಯಕರು ನನ್ನ ಬಳಿ ತಂದರು. ಶಾಸಕರು ಒಂದು ಯೋಜನೆಗೆ ಸಂಬಂಧಿಸಿದಂತೆ ನಮ್ಮ ಊರಿನವರಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದರಂತೆ. ಅದಕ್ಕೆ ಸಂಸದರ ಪತ್ರ ಕಡ್ಡಾಯವಾಗಿ ಬೇಕು ಎಂಬ ಮಾಹಿತಿ ನೀಡಿದರು.
ಸರಿ ಎಂದು ಶ್ರೀ ಜಿ.ಎಸ್.ಬಸವರಾಜ್‌ರವರಿಗೆ ಹೇಳಿದೆ ಸಾರ್ ಈ ಪತ್ರಕ್ಕೆ ಶ್ರೀ ವೀರಣ್ಣಗೌಡರವರು ಬರಬಹುದು ದಯವಿಟ್ಟು ನನ್ನ ಗಮನಕ್ಕೆ ತರದೆ ಕೊಡಬೇಡಿ ಎಂದೆ. ಅವರಿಗೆ ಕುತೂಹಲ ಏಕೆ ಎಂದರು, ನೋಡಿ ಬಿದರೆ ಹಳ್ಳಕಾವಲ್ ಜಮೀನಿನ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ, ಈ ಪತ್ರ ಅವರಿಗೆ ಬೇಕೆಬೇಕು ಎನ್ನುವ ಮಾಹಿತಿ ಇದೆ ಎಂದೆ.
ಅವರು ಫೋನ್ ತಗೊಂಡು ಅಧಿಕಾರಿಗಳಿಗೆ ನಾನು ಆಕಸ್ಮಾತ್ ಯಾರಿಗಾದರೂ ಪತ್ರ ನೀಡಿದ್ದರು. ಕುಂದರನಹಳ್ಳಿ ರಮೇಶ್ ಗಮನಕ್ಕೆ ತರದೆ ಮಾಡಬೇಡಿ ಎಂದು ಹೇಳಿ ಆ ಅಧಿಕಾರಿಗೆ ವಿಷಯವನ್ನು ತಿಳಿಸಿದರು. ಅವರು ಸಾರ್ ನಮಗೂ ದಿನ ಫೋನ್ ಮಾಡುತ್ತಾರೆ ಎಂದು ತಿಳಿಸಿದರು.
ಇದು ಶಾಸಕರ ಗಮನಕ್ಕೆ ಬಂತು, ಅವರು ನನಗೆ ಫೋನ್ ಮಾಡಿ ಮಾತಾಡಿ ಯಾವ ಸೀಗುತ್ತಿರಿ ರಮೇಶ್ ಒಂದು ಮುಖ್ಯವಾದ ವಿಷಯ ಮಾತಾಡಬೇಕು ಎಂದರು. ನೀವು ಯಾವಾಗ ಹೇಳಿ ಸಾರ್ ನಿಮ್ಮ ಮನೆಗೆ ನಾನೇ ಬರುತ್ತೇನೆ ಎಂದೆ.
ನಾಳೆ ಭೇಟಿಯಾಗೋಣ ಎಂದರು. ತಕ್ಷಣ ನಾನು ಗುಬ್ಬಿ ತಹಶೀಲ್ಧಾರ್‌ರವರಿಗೆ ಫೋನ್ ಮಾಡಿ ಸಾರ್ ಬಿದರೆಹಳ್ಳಕಾವಲ್ ಜಮೀನಿನ ಬಗ್ಗೆ ಶಾಸಕರ ಬಳಿ ಮಾತಾಡಿ ಎಂದು ಸೂಕ್ಷ್ಮವಾಗಿ ವಿಷಯ ತಿಳಿಸಿದೆ. ಅವರು ತಕ್ಷಣ ಮಾತನಾಡಿದ್ದಾರೆ. ಶಾಸಕರು ಅದು ರಮೇಶ್ ಹೇಳಿದ ಹಾಗೆ ಮಾಡಬೇಕು ಪಾಪ ಅವರು ಏನಾದರೂ ಮಾಡಿಸಲೇ ಬೇಕು ಅಂತ ಓಡಾಡುತ್ತಾರೆ. ಎಂಪಿಯವರು ನನಗೂ ಹೇಳಿದ್ದಾರೆ ಎಂದು ಸಲಹೆ ನೀಡಿದ್ದಾರೆ.
ನಾನು ನಡೆದ ವಿಚಾರವನ್ನು ಎಂಪಿಯವರಿಗೆ ತಿಳಿಸಿದೆ. ಊನ್ರಿ ಎರಡು ಮೂರು ಸಲ ನನಗೂ ಕೇಳಿದ್ದಾರೆ, ನಾನೇ ಒಂದು ಸಲ ಇಬ್ಬರನ್ನು ಕೂರಿಸಿ ಮಾತಾನಾಡುತ್ತೇನೆ ಎಂದು ಹೇಳಿದ್ದೇನೆ ಎಂದರು. ಸಾರ್ ನೀವೇ ಕರೆದು ಮಾತನಾಡಿ ಸಾರ್ ಎಂದು ಹೇಳಿದೆ. ಶಾಸಕರಿಗೆ ಫೋನ್ ಮಾಡಿ ವೀರಣ್ಣ ಗೌಡ್ರೆ ಬೆಳಿಗ್ಗೆ ನಮ್ಮ ಮನೆಗೆ ಆರು ಗಂಟೆಗೆ ಬನ್ರಿ ರಮೇಶ್‌ಗೂ ಹೇಳಿದ್ದೀನಿ ಅಂದ್ರು.
ಶಾಸಕರು ನನಗೂ ಫೋನ್ ಮಾಡಿ ಎಂಪಿಯವರ ಮನೆಗೆ ಬರ್ತಿನಿ ಅಂತ ತಿಳಿಸಿದರು. ಬೆಳಿಗ್ಗೆ ಆರು ಗಂಟೆಗೆ ಎಂಪಿಯವರ ಮನೆಯಲ್ಲಿ ಮೂರು ಜನ ಸೇರಿದೆವು, ಶಾಸಕರು ಆರಂಭ ಮಾಡಿದರು ಸಾರ್ ಶ್ರೀಕಂಠಯ್ಯನವರ ಪತ್ರದ ಮೇಲೆ ಎಲ್ಲಾ ಮಾಡಿದ್ದೇನೆ ಎಂದಾಗ ನನಗೆ ಖೂಷಿಯೋ ಖುಷಿ.
ಎಂಪಿಯವರು ನೋಡ್ರಿ ವೀರಣ್ಣಗೌಡ್ರೆ ನಮ್ಮ ರಮೇಶ್ ಈ ಸಾಗರನಹಳ್ಳಿ ರೇವಣ್ಣನವರ ವಂಶಕ್ಕೆ ಸೇರಿದೊನು, ಸಿಟ್ಟು ಜಾಸ್ತಿ ಅಂದರು, ನಾನು ರೇವಣ್ಣನವರ ವಂಶ ಅಲ್ಲಾ ಸಾರ್, ಅವರು ನಮ್ಮ ಮನೆ ಮೊಮ್ಮಗ ಅಂದರೆ ಅವರೇ ನಮ್ಮ ವಂಶ ಎಂದೆ ಇಬ್ಬರು ನಕ್ಕರು. ಎಂಪಿಯವರು ಇನ್ನೂ ಬಿದರೆಹಳ್ಳ ಕಾವಲ್ ಜಮೀನು ಬಗ್ಗೆ ಇವರಿಬ್ಬರ ಜಗಳ ನಾವು ನೋಡಬೇಕು ಇದು ನಮ್ಮ ಕರ್ಮ ಎಂದರು. ನಂತರ ಎಂಪಿಯವರು ಶಾಸಕರ ಕೆಲಸವನ್ನು ಮಾಡಿಸಿ ಕಳುಹಿಸಿದರು.
ದಿ: 18.10.2002 ರಂದು ನಡೆದ ಗುಬ್ಬಿ ತಾಲ್ಲೂಕು ಬಗರ್‌ಹುಕುಂ ಸಕ್ರಮ ಸಮಿತಿಯ ಸಭೆಯಲ್ಲಿ ಕೈಗೊಂಡಿರುವ ನಿರ್ಣಯದಂತೆ ಫಾರಂ ನಂ 53 ರಲ್ಲಿ ಸುಮಾರು 437 ಅರ್ಜಿಗಳು ಮತ್ತು ಫಾರಂ ನಂ 50 ರಲ್ಲಿ 317 ಅರ್ಜಿಗಳು ಸೇರಿದಂತೆ ಒಟ್ಟು 754 ಅರ್ಜಿಗಳನ್ನು ವಜಾ ಮಾಡುವ ಮೂಲಕ ಶ್ರೀ ವೀರಣ್ಣಗೌಡರು ನಿಜಕ್ಕೂ ಬಹಳ ಒಳ್ಳೆಯ ಕೆಲಸ ಮಾಡಿದರು.’