29th March 2024
Share
ಹೆಚ್.ಎ.ಎಲ್ ಕಟ್ಟಡ

TUMAKURU:SHAKTHIPEETA FOUNDATION

ಗುಬ್ಬಿ ತಾಲ್ಲೂಕು ಬಿದರೆಹಳ್ಳಕಾವಲ್ ಜಮೀನಿನ ಯೋಜನೆಗೆ ಸಂಬಂಧಿಸಿದಂತೆ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ವತಿಯಿಂದ ಹಲವಾರು ಸಭೆ ಮಾಡಿದ್ದೇವೆ, ಶ್ರೀ ಜಿ.ಎಸ್.ಬಸವರಾಜ್‌ರವರು ಸಹ ಆನೇಕ ಸಭೆಗಳಲ್ಲಿ ಭಾಗವಹಿಸಿದ್ದಾರೆ.

  ಆದರೆ ಅಧಿಕೃತವಾಗಿ ಜಿಲ್ಲಾಡಳಿತ ರೈತರ ಸಭೆ ನಡೆಸುತ್ತಿರುವುದು ಇದೇ ಮೊದಲು. ಈಗಾಗಲೇ ಜಿಲ್ಲಾ ಉಸ್ತವಾರಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರರವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಸಭೆ, ವಿಧಾನಸಭಾ ಸದಸ್ಯರಾದ ಶ್ರೀ ಎಸ್.ಆರ್. ಶ್ರೀನಿವಾಸ್‌ರವರ ಅಭಿಪ್ರಾಯ ಎಲ್ಲಾ ಪೂರಕವಾಗಿ ನಡೆದಿತ್ತು.

 ಗುಬ್ಬಿ ತಾಲ್ಲೂಕಿನ ರೈತ ಸಂಘಟನೆಗಳು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಮತ್ತು ಸಂಘ ಸಂಸ್ಥೆಗಳ ಅಭಿಪ್ರಾಯಗಳನ್ನು ಪಡೆದು ಎಲ್ಲರನ್ನು ಸಭೆಗೆ ನಾನೇ ಆಹ್ವಾನಿಸಿದೆ. ಸುತ್ತಮುತ್ತಲಿನ ರೈತರು, ನಿರುದ್ಯೋಗಿಗಳನ್ನು ಸಹ ಆಹ್ವಾನಿಸಿದೆ.

  ನಂತರ ಬಿದರೆಹಳ್ಳಕಾವಲ್ ರೈತರ ಗುಂಪು ಗುಂಪು ಅಭಿಪ್ರಾಯಗಳನ್ನು ಪಡೆದು ಹೆಚ್.ಎ.ಎಲ್ ಗೆ 650 ಎಕರೆ ಭೂಮಿ ಕೊಡೋಣ ಎಂಬ ಸಲಹೆಗೆ ಬಹುತೇಕ ಎಲ್ಲರೂ ಒಪ್ಪಿಗೆ ನೀಡಿದರು. ನಾನು ನನ್ನ ಕೈಲಿ ಆದ ಎಲ್ಲಾ ಕಸರತ್ತುಗಳನ್ನು ಮಾಡಿದೆ.

 ಸಭೆಯ ದಿವಸ ಎಂಪಿಯವರಿಗೆ ನೀವು ಮತ್ತು ಜಿಲ್ಲಾಧಿಕಾರಿಗಳು ಒಟ್ಟಿಗೆ ಬನ್ನಿ, ನಾನು ಶಾಸಕರು, ಪ್ರಜಾ ಪ್ರಗತಿ ಸಂಪಾದಕ ಶ್ರೀ ಎಸ್.ನಾಗಣ್ಣನವರು ಮತ್ತು ಎಂ.ಎಲ್.ಸಿ ಶ್ರೀ ಹುಲಿನಾಯ್ಕರ್‌ರವರು ಒಟ್ಟಿಗೆ ಬರುತ್ತೇವೆ ಎಂದೆ ಎಂಪಿಯವರು ಇಲ್ಲೂ ನಿನ್ನ ತಂತ್ರನಾ ಎಂದು ನಕ್ಕರು.

 ಅಧಿಕೃತ ಸಭೆ ತಿಮ್ಮಳಿಪಾಳ್ಯದ ಗೇಟ್, ಆದರೆ ಕುಂದರನಹಳ್ಳಿ ಗೇಟ್‌ನಲ್ಲಿ ಬಿದರೆಹಳ್ಳಕಾವಲ್‌ನಲ್ಲಿ ಸಭೆ ನಡೆಸಿ ಎಂದು ಶಾಸಕರ ಕಾರಿಗೆ ಜನ ಅಡ್ಡಲಾಗಿ ಬಂದರು. ನಾನು ಇಳಿದೆ ಅಲ್ಲಿನ ಜನ ಅಗಳಪ್ಪ ಆಲೇ ಶಾಸಕರ ಜೊತೆಯಲ್ಲಿದ್ದಾರೆ ನಗುತ್ತಿದ್ದರು. 

  ಸರಿ ಸಾರ್ ಇಲ್ಲೂ ಹೋಗೋಣ, ಅಲ್ಲಿಯೂ ಮಾಡೋಣ ಎಂದ ತಕ್ಷಣ ಎಲ್ಲಾ ಕಾರುಗಳು ಬಿದರೆಹಳ್ಳ ಕಾವಲ್ ಕಡೆ ಹೊರಟವು. ಎಲ್ಲರೂ ಬಂದು ಕುಳಿತರು, ನನಗೆ ಕುರ್ಚಿ ಇರಲಿಲ್ಲ ನಿಂತೇ ಇದ್ದೆ ಮನೆಯಿಂದ ಖುರ್ಚಿ ತಂದು ಹಾಕಿ ಕುಳಿತುಕೊಳ್ಳಲು ಅಲ್ಲಿನ ರೈತರು ಹೇಳಿದರು.

  ಡಿಸಿಯವರ ಪಕ್ಕದಲ್ಲಿ ನಾನು ಕುಳಿತೆ, ಶಾಸಕರು, ಸಂಸದರಿಗೆ ರೈತರು ಅಹವಾಲು ಹೇಳುತ್ತಿದ್ದರು, ಮಹಿಳೆಯರು ಗೋಳೋ ಎಂದು ಅಳುತ್ತಿದ್ದರೂ, ನಾನು ಚಿಕ್ಕಣ್ಣನವರೇ ಎಷ್ಟು ಹೊತ್ತು ಮಾತನಾಡಿದರೂ ಬಗೆ ಹರಿಯಲ್ಲ ನಿಮ್ಮ ನೇರ ನಿರ್ಧಾರ ಹೇಳಿ ಅಂದೆ, ಚಿಕ್ಕಣ್ಣ ಜೋರಾಗಿ ನೋಡಿ ಸ್ವಾಮಿ 650  ಎಕರೆ ಹೆಚ್.ಎ.ಎಲ್ ಗೆ ಕೊಡಿ ಉಳಿದಿದ್ದು ಬಿಡಿ ಎಂದರು.

  ಸಂಸದರು ಆಯಿತಪ್ಪ ನೀವು ಹೇಳಿದ್ದಕ್ಕೆ ನಾನು ಶಾಸಕರು ಇಬ್ಬರೂ ಬದ್ಧ ಎಂದರು, ಶಾಸಕರು ನಿಮ್ಮ ಕಾಲೋನಿ ಉಳಿಸುತ್ತೇವೆ ನಡಿರೋ ಅಲ್ಲಿಗೆ ಹೋಗೋಣ ಎಂದು ಎದ್ದೇ ಬಿಟ್ಟರು. ಎಲ್ಲರೂ ತಪ್ಪಾಳೆ ಹೊಡೆದರು. ನಾನು ಜಿಲ್ಲಾಧಿಕಾರಿಗಳಿಗೆ ನೋಡಿ ಸ್ವಾಮಿ ಏನು ಹೇಳುತ್ತೀರಿ, ಅದೇನೋ ಕೊಲೆ-ಗಿಲೆ ಅಂತಿದ್ದರೀ ಅಂದೆ ಅವರು ಮಾತನಾಡಲಿಲ್ಲ ಎದ್ದು ಹೊರಟರು.

 ತಿಮ್ಮಳಿಪಾಳ್ಯದ ಗೇಟ್ ಪಾರ್ಕ್‌ನಲ್ಲಿ  ಜನ ಜಾತ್ರೆಯಂತೆ ಸೇರಿದ್ದರು. ಬಿದರೆಹಳ್ಳಕಾವಲ್ ಜನರೂ ಅಲ್ಲಿಗೆ ಬಂದರೂ, ಅಲ್ಲಿನ ಸಭೆ ತಾಲ್ಲೂಕಿನ ಸರ್ವಪಕ್ಷಗಳ ಸಭೆಯಂತಿತ್ತು, ಸಂಸದರು ಮತ್ತು ಶಾಸಕರು ಇಬ್ಬರೂ ಮಾತನಾಡಿ 650 ಎಕರೆ ಜಮೀನಿನನ್ನು ಹೆಚ್.ಎ.ಎಲ್ ಗೆ ಕೊಡಲು ತೀರ್ಮಾನಿಸಿದ್ದೇವೆ ಎಂದಾಗ ಜನ ತಪ್ಪಾಳೆ, ಸಿಳ್ಳೆ ಹೊಡೆಯುವ ಮೂಲಕ ಬೆಂಬಲಿಸಿದರು. ಜಿಲ್ಲಾಧಿಕಾರಿಗಳು ಮಾತನಾಡಿ ಸಭೆ ಮುಕ್ತಾಯ ಮಾಡಿದರು.

 ಎರಡು ಕಡೆಯ ಸಭೆ ಕೇವಲ ಒಂದು ಗಂಟೆಯ ಅವಧಿಯಲ್ಲಿ ಮುಗಿದವು ಎಲ್ಲರೂ ಇಷ್ಟು ಸುಲಭವಾಗಿ ಬಗೆಹರಿಯತು ಎಂದು ನಗುತ್ತಾ ಹೊರಟರು. ನಾಳೆ ಬೆಳಿಗ್ಗೆ ಪತ್ರಿಕೆಗಳಲ್ಲಿ ವರದಿ ಬಿದರೆಹಳ್ಳಕಾವಲ್ ಜನರು ಕಾರಿಗೆ ಅಡ್ಡಲಾಗಿ ಮಲಗಿ ಹೆಚ್.ಎ.ಎಲ್ ಗೆ ಜಮೀನು ನೀಡಲು ರೈತರ ವೀರೋಧ, ಜಿಲ್ಲಾಧಿಕಾರಿ ಪತ್ರಕರ್ತರ ಕ್ಯಾಮರಾ ಕಿತ್ತುಕೊಂಡರು, ಹೀಗೆ ರಾಜ್ಯ ಮಟ್ಟದ ನ್ಯೂಸ್ ಆಯಿತು. ನನಗೆ ಈ ಹಿನ್ನೆಲೆ/ರಹಸ್ಯ ಇನ್ನೂ ಅರ್ಥವಾಗಿಲ್ಲ, ಈ ನ್ಯೂಸ್ ತಪ್ಪು ಎಂದು ಸರಿಪಡಿಸಲು ಬಹಳ ಶ್ರಮ ಪಡಬೇಕಾಯಿತು. ಪ್ರಜಾಪ್ರಗತಿಯಲ್ಲಿ ಮಾತ್ರ ವಸ್ತು ಸ್ಥಿತಿ ವರದಿ ಬಂದಿತ್ತು.

ಭಾಗವಹಿಸಿದ್ದ ಎಲ್ಲರಿಗೂ ಅಭಿನಂದನೆ ಸಲ್ಲಿಸಲೇ ಬೇಕು.